ಬೆಂಗಳೂರು: ‘ಐ ಮಾನಿಟರಿ ಅಡ್ವೈಸರಿ (ಐಎಂಎ) ಹಗರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಅವರ ಚರ ಮತ್ತು ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ಆದೇಶ ಹೊರಡಿಸಲಾಗಿದೆ’ ಎಂದು ಹೈಕೋರ್ಟ್‌ಗೆರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ಕೆಪಿಐಡಿ) ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ 2021ರ ಜು. 6ರಂದು ಅಧಿಸೂಚನೆ ಹೊರಡಿಸಲಾಗಿದೆ. 2018ರ ವಿಧಾನಸಭೆ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ಬೇಗ್ ಸಲ್ಲಿಸಿದ್ದ ಅಫಿಡವಿಟ್ ಆಧರಿಸಿ ಆಸ್ತಿ ವಿವರದ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ವಿವರ ಸಲ್ಲಿಸಿದೆ.
‘ಜಂಟಿ ಅಭಿವೃದ್ಧಿ ಒಪ್ಪಂದಲ್ಲಿ ಹೊಸೂರು ರಸ್ತೆಯಲ್ಲಿ ಅಭಿವೃದ್ಧಿಪಡಿಸಿರುವ ವಾಣಿಜ್ಯ ಕಟ್ಟಡ(ಶೇ 33ರಷ್ಟು ಪಾಲು), ರೆಸಿಡೆನ್ಸಿ ರಸ್ತೆಯಲ್ಲಿನ ವಾಣಿಜ್ಯ ಕಟ್ಟಡ, ಸ್ಯಾಂಡರ್ಸ್ ರಸ್ತೆ ಮತ್ತು ಕ್ಲೀವ್ ಲ್ಯಾಂಡ್ ರಸ್ತೆಯಲ್ಲಿನ ಮನೆಗಳು, ಎಚ್‌ಬಿಆರ್ ಲೇಔಟ್, ಫ್ರೇಸರ್ ಟೌನ್ ಮತ್ತು ಕ್ಲೀವ್ ಲ್ಯಾಂಡ್ ರಸ್ತೆಯಲ್ಲಿನ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂದು ವಿವರಿಸಿದೆ.
‘ಕೆಪಿಐಡಿ ಕಾಯ್ದೆಯಡಿ ರಚನೆಯಾದ ಸಕ್ಷಮ ಪ್ರಾಧಿಕಾರದ ವರದಿ ಮತ್ತು ಸಿಬಿಐ ಸಲ್ಲಿಸಿದ ದೋಷಾರೋಪ ಪಟ್ಟಿ ಆಧರಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಐಎಂಎ ಸಂಸ್ಥೆಯ ಪ್ರಚಾರ ಮತ್ತು ವ್ಯವಹಾರದಲ್ಲಿ ಬೇಗ್ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಆರ್ಥಿಕ ಲಾಭ ಗಳಿಸಿದ್ದರು ಎಂಬುದನ್ನು ತನಿಖಾ ಸಂಸ್ಥೆಗಳು ಪತ್ತೆ ಹೆಚ್ಚಿವೆ ಎಂದೂ ಸರ್ಕಾರ ತಿಳಿಸಿದೆ.
ಅಧಿಸೂಚನೆ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಶಿವಾಜಿನಗರದ ಸರ್ಕಾರಿ ಶಾಲೆಗೆ ಐಎಂಎ ಸಮೂಹ ನೀಡಿರುವ ₹12.82 ಕೋಟಿ ದೇಣಿಗೆ ಮರಳಿಸುವ ಸಂಬಂಧ ಸೂಕ್ತ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿತು. ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.