ADVERTISEMENT

ಆಮೆಗತಿ ಹೈಕೋರ್ಟ್ ಕಲಾಪ: ತ್ವರಿತ ಕ್ರಮಕ್ಕೆ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 15:54 IST
Last Updated 30 ಅಕ್ಟೋಬರ್ 2024, 15:54 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ರಿಟ್‌ ಮೇಲ್ಮನವಿ ವಿಚಾರಣೆ, ಪ್ರಕರಣಗಳನ್ನು ನಿಗದಿಗೊಳಿಸುವಲ್ಲಿನ ಆಮೆಗತಿ, ಮೆಮೊ ಸ್ವೀಕರಿಸುವಲ್ಲಿ ಆಗುತ್ತಿರುವ ವಿಳಂಬ ಹಾಗೂ ಕೆಲವು ನ್ಯಾಯಪೀಠಗಳು ಸಮಯಪಾಲನೆಯಲ್ಲಿ ತೋರುತ್ತಿರುವ ನಿರ್ಲಕ್ಷ್ಯದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಬೆಂಗಳೂರು ವಕೀಲರ ಸಂಘ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರನ್ನು ಆಗ್ರಹಿಸಿದೆ.

ಈ ಕುರಿತಂತೆ ಸಂಘದ ಅಧ್ಯಕ್ಷ ವಿವೇಕ್‌ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ ಮತ್ತು ಖಜಾಂಚಿ ಎಂ.ಟಿ.ಹರೀಶ್‌ ಸಹಿ ಮಾಡಿರುವ ಎರಡು ಪುಟಗಳ ಲಿಖಿತ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಅವರಿಗೆ ಇತ್ತೀಚೆಗೆ ಸಲ್ಲಿಸಲಾಗಿದೆ.

‘ಹೊಸ ರಿಟ್‌ ಮೇಲ್ಮನವಿಗಳು ಮತ್ತು ಹಸಿರು ನ್ಯಾಯಪೀಠದಲ್ಲಿ ವಿಚಾರಣೆಗೆ ಬರಬೇಕಾದ ಪ್ರಕರಣಗಳ ಆಲಿಕೆ ನಡೆಯುತ್ತಿಲ್ಲ. ಕೆಲವು ಏಕಸದಸ್ಯ ನ್ಯಾಯಪೀಠಗಳು ಮಂದಗತಿಯ ವಿಚಾರಣೆ ಮೂಲಕ ಕೋರ್ಟ್‌ನ ಅಮೂಲ್ಯ ಸಮಯವನ್ನು ಹರಣ ಮಾಡುತ್ತಿವೆ. ಇದರಿಂದ ಕಕ್ಷಿದಾರರಿಗೆ ಸಿಗಬೇಕಾದ ನ್ಯಾಯದಾನದಲ್ಲಿ ವಿಳಂಬವಾಗುತ್ತಿದೆ’ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ADVERTISEMENT

‘ಪ್ರಕರಣಗಳನ್ನು ಕೈಗೆತ್ತಿಕೊಳ್ಳುವಂತೆ ಕೋರಿ ಸಲ್ಲಿಸಲಾಗುವ ಜ್ಞಾಪನಾ ಪತ್ರಗಳನ್ನು (ಮೆಮೊ) ಪರಿಗಣಿಸಲಾಗುತ್ತಿಲ್ಲ. ಈ ಸಂಬಂಧ ಕಚೇರಿ ಮತ್ತು ರಿಜಿಸ್ಟ್ರಿ ನಿಷ್ಕ್ರಿಯತೆ ಎದ್ದು ಕಾಣುತ್ತಿದೆ. ಎಷ್ಟೋ ಬಾರಿ 7–8 ಸಲ ಮೆಮೊ ಸಲ್ಲಿಸಿದರೂ ಪ್ರಕರಣಗಳನ್ನು ಪಟ್ಟಿ ಮಾಡಲಾಗುತ್ತಿಲ್ಲ’ ಎಂದು ಆಕ್ಷೇಪಿಸಲಾಗಿದೆ.

‘ಕೋರ್ಟ್‌ ಹಾಲ್‌ 1 ಸೇರಿದಂತೆ ಕೆಲವು ನ್ಯಾಯಪೀಠಗಳಲ್ಲಿ ವಿಚಾರಣೆಗೆ ನಿಗದಿಗೊಳ್ಳುವ ದಿನದ ಪಟ್ಟಿಯಲ್ಲಿನ ಪ್ರಕರಣಗಳು ದಿನದ ಕಲಾಪದ ಅಂತ್ಯವಾಗುವ ಹೊತ್ತಾದರೂ ವಿಚಾರಣೆಯೇ ಆರಂಭವಾಗುವುದಿಲ್ಲ. ಅಷ್ಟೇ ಅಲ್ಲ, ಆ ರೀತಿ ಪಟ್ಟಿಯಲ್ಲಿ ಉಳಿಯುವ ಪ್ರಕರಣಗಳಿಗೆ ಕೆಲವು ನ್ಯಾಯಪೀಠಗಳು ದೀರ್ಘವಾದ ಮುದ್ದತು ನೀಡುತ್ತಿರುವುದರಿಂದ ತೊಂದರೆ ಉಂಟಾಗುತ್ತಿದೆ’ ಎಂದು ಪತ್ರದಲ್ಲಿ ದೂರಲಾಗಿದೆ.

‘ಬೆಳಿಗ್ಗೆ 10.30ಕ್ಕೆ ಕಲಾಪ ಆರಂಭವಾಗಬೇಕು. ಆದರೆ, ಕೆಲವು ನ್ಯಾಯಪೀಠಗಳು ತಡವಾಗಿ ಆರಂಭವಾಗುತ್ತಿವೆ. ಇಂತಹ ಪೀಠಗಳಲ್ಲಿನ ನ್ಯಾಯಮೂರ್ತಿಗಳ ಬಗ್ಗೆ ತಾವು ಗಮನಹರಿಸಬೇಕು’ ಎಂದು ಮನವಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.