ಬೆಂಗಳೂರು: ಲಂಚದ ಆರೋಪದಡಿ ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಹಿರಿಯ ಅಧಿಕಾರಿ ಎಸ್.ಎಂ.ಮಣ್ಣನ್ ವಿರುದ್ಧ ಸಿಬಿಐ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಈ ಸಂಬಂಧ ಮಣ್ಣನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.
"ಅರ್ಜಿದಾರರ ವಿರುದ್ಧದ ಆರೋಪ ಸಾಬೀತುಪಡಿಸಲು ಯಾವುದೇ ಸಾಕ್ಷ್ಯಗಳಿಲ್ಲ" ಎಂಬ ಅಭಿಪ್ರಾಯದೊಂದಿಗೆ ಮಣ್ಣನ್ ಅವರನ್ನು ಖುಲಾಸೆಗೊಳಿಸಿದೆ.
ಪ್ರಕರಣವೇನು?: "ರಾಮನಗರ ಜಿಲ್ಲೆಯಲ್ಲಿ ಎಲ್‌ಪಿಜಿ ದಾಸ್ತಾನು ಘಟಕದ ಲೈಸೆನ್ಸ್ ರದ್ದುಪಡಿಸುವ ಆದೇಶವನ್ನು ಜಾರಿಗೊಳಿಸಿ" ಎಂದು ಸಿಬಿಐನ ಡೆಪ್ಯುಟಿ ಸೂಪರಿಂಟೆಂಡೆಂಟ್ (ಭ್ರಷ್ಟಾಚಾರ ನಿಗ್ರಹ ದಳ) ಡಬ್ಲ್ಯು.ಜಿ. ಜಯಂತಿ ಅವರು ಮಣ್ಣನ್ ಅವರಿಗೆ ನಿರ್ದೇಶಿಸಿದ್ದರು. ಆದರೆ ಮಣ್ಣನ್, "ಅಕ್ರಮವಾಗಿ ಲೈಸೆನ್ಸ್ ರದ್ದುಪಡಿಸುವಂತೆ ಕೋರಿರುವ ಕಾರಣ ನಿಮ್ಮ ನಿರ್ದೇಶನ ಪಾಲಿಸಲಾಗದು" ಎಂದು ಪ್ರತ್ಯುತ್ತರಿಸಿದ್ದರು.
ಈ ವಿಚಾರದಲ್ಲಿ, "ಮಣ್ಣನ್ ₹50 ಸಾವಿರ ಲಂಚಕ್ಕೆ ಬೇಡಿಕೆ ಇರಿಸಿದ್ದಾರೆ" ಎಂದು ಆರೋಪಿಸಿ 2019ರ ಸೆಪ್ಟೆಂಬರ್ 22ರಂದು ಸಿಬಿಐ ಮಣ್ಣನ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಇದನ್ನು ಪ್ರಶ್ನಿಸಿ ಮಣ್ಣನ್ ಹೈಕೋರ್ಟ್ ಮೆಟ್ಟಿಲೇರಿದ್ದರು.
"ಈ ಆರೋಪವು ಜಯಂತಿ ಅವರು ನನಗೆ ನೀಡುತ್ತಿರುವ ಕಿರುಕುಳ. ನನ್ನ ಮೊಬೈಲ್ ಫೋನ್ ಟ್ಯಾಪ್ ಮಾಡಿದ್ದು ಅಕ್ರಮ. ನಾನು ಲಂಚಕ್ಕೆ ಬೇಡಿಕೆ ಇರಿಸಿದ್ದಕ್ಕೆ ಮತ್ತು ಪಡೆದದ್ದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಆದರೆ ಸಿಬಿಐ ಲಕೋಟೆಯಲ್ಲಿ ಹಣವಿತ್ತು ಎಂದು ಹೇಳುತ್ತಿದೆ. ಆದರೆ, ಅದಕ್ಕೆ ಆಧಾರವಿಲ್ಲ" ಎಂದು ಪ್ರತಿಪಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.