ಬೆಂಗಳೂರು: ‘ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಯಾವುದೇ ಪರಿಹಾರ ಹುಡುಕದಿರುವ ನಿಮ್ಮ ನಿರ್ಲಕ್ಷ್ಯ ಧೋರಣೆಯಿಂದಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚುತ್ತಿದೆ‘ ಎಂದು ಹೈಕೋರ್ಟ್, ರಾಜ್ಯ ಸರ್ಕಾರದ ವಿರುದ್ಧ ಕೆಂಡ ಕಾರಿದೆ.
ಶಾಲೆಯಿಂದ ಹೊರಗುಳಿದಿರುವ ಮಕ್ಕಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಪ್ರಕರಣದ ಅಮಿಕಸ್ ಕ್ಯೂರಿಯಾದ ಹಿರಿಯ ವಕೀಲ ಕೆ.ಎನ್. ಫಣೀಂದ್ರ, ‘ಸೌಲಭ್ಯಗಳ ಕೊರತೆಯಿಂದ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಇದರಿಂದಾಗಿ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ಪೋಷಕರೂ ಅನಿವಾರ್ಯವಾಗಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವಂತಹ ಪರಿಸ್ಥಿತಿ ಇದೆ’ ಎಂದರು.
ಈ ಆಕ್ಷೇಪಣೆಗೆ ದನಿಗೂಡಿಸಿದ ನ್ಯಾಯಪೀಠ, ‘ಸರ್ಕಾರಿ ಶಾಲೆಗಳಲ್ಲಿನ ಇಂತಹ ಕೆಟ್ಟ ಪರಿಸ್ಥಿತಿ ಖಾಸಗಿ ಶಾಲೆಗಳ ಮಾಲೀಕರಿಗೆ ಇಂಬು ನೀಡಿದೆ. ಎರಡು ಹೊತ್ತಿನ ಊಟಕ್ಕೂ ಗತಿಯಿಲ್ಲದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವಂತಹ ಸನ್ನಿವೇಶ ಎದುರಾಗಿದೆ. ಇದು ಶ್ರೀಮಂತರು ಮತ್ತು ಬಡವರ ಮಧ್ಯದ ಕಂದಕ ಸೃಷ್ಟಿಗೆ ಕಾರಣವಾಗುತ್ತಿದೆಯಲ್ಲವೇ‘ ಎಂದು ಸರ್ಕಾರದ ಪರ ವಕೀಲರನ್ನು ಖಾರವಾಗಿ ಪ್ರಶ್ನಿಸಿತು.
‘ಸಂವಿಧಾನದಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಿದ ಉದ್ದೇಶಕ್ಕೆ ಸೋಲಾಗುತ್ತಿದೆ‘ ಎಂಬ ಅಮಿಕಸ್ ಕ್ಯೂರಿ ಮತ್ತು ಅರ್ಜಿದಾರರ ಪರ ವಕೀಲರ ವಾದಕ್ಕೆ ಸಹಮತ ವ್ಯಕ್ತಪಡಿಸಿದ ನ್ಯಾಯಪೀಠ, ‘ಯಾವ ಮಕ್ಕಳು ಸರ್ಕಾರಿ ಶಾಲೆಗೆ ಹೋಗುತ್ತಾರೆ ಎಂಬುದನ್ನು ಸಂಶೋಧನೆ ಮಾಡಿ ತಿಳಿಯಬೇಕಿಲ್ಲ. ಕಡುಬಡವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಾರೆ‘ ಎಂದು ಅತೃಪ್ತಿ ವ್ಯಕ್ತಪಡಿಸಿತು.
ಸರ್ಕಾರದ ಪರ ವಕೀಲರು, ‘ಅಮಿಕಸ್ ಕ್ಯೂರಿ ಸಲ್ಲಿಸಿರುವ ವರದಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಹಾಗಾಗಿ, ವರದಿ ಪರಿಶೀಲನೆಗೆ ಎಂಟು ವಾರಗಳ ಕಾಲಾವಕಾಶ ನೀಡಬೇಕು’ ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಸರ್ಕಾರ ಎರಡು ತಿಂಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಬೇಕು. ಪುನಃ ಕಾಲಾವಕಾಶ ವಿಸ್ತರಿಸುವುದಿಲ್ಲ’ ಎಂದು ಖಡಕ್ ತಾಕೀತು ಮಾಡಿ ವಿಚಾರಣೆ ಮುಂದೂಡಿತು.
‘464 ಶಾಲೆಗಳಲ್ಲಿ ಶೌಚಾಲಯಗಳಿಲ್ಲ’
‘ಒಟ್ಟು 464 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಮತ್ತು 87 ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ನಿರ್ಮಾಣಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ₹ 80 ಕೋಟಿ ಹಂಚಿಕೆ ಮಾಡಲಾಗಿದೆ. ಅಂತೆಯೇ 87 ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂಬ ಅಂಶವನ್ನು ಸಮೀಕ್ಷೆಗೆ ಒಳಪಡಿಸಿದಾಗ ಅವುಗಳಲ್ಲಿ ಇಂದಿಗೂ 55 ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ದೃಢಪಟ್ಟಿದೆ’ ಎಂದು ಅಮಿಕಸ್ ಕ್ಯೂರಿ ಸಲ್ಲಿಸಿರುವ ವರದಿಯಲ್ಲಿ ತಿಳಿಸಲಾಗಿದೆ.
ತಳವರ್ಗದ ಮಕ್ಕಳು ಶಿಕ್ಷಣ ಪಡೆಯಬಾರದೆ?
‘ಪುಸ್ತಕ ಇಲ್ಲದ ಅಂಬೇಡ್ಕರ್ ಅವರ ಪುತ್ಥಳಿ ಅಥವಾ ಚಿತ್ರವನ್ನು ನೋಡಿದ್ದೀರಾ‘ ಎಂದು ಸರ್ಕಾರವನ್ನು ಪ್ರಶ್ನಿಸಿದ ನ್ಯಾಯಪೀಠ ‘ಶಿಕ್ಷಣದಿಂದ ಸಮಾನತೆ ಸಾಧ್ಯ ಎಂಬ ಕಾರಣಕ್ಕಾಗಿಯೇ ನಾವು ಅಂಬೇಡ್ಕರ್ ಅವರನ್ನು ಪುಸ್ತಕ ಹಿಡಿದಿರುವ ರೀತಿಯಲ್ಲಿ ಕಾಣುತ್ತೇವೆ’ ಎಂದು ಹೇಳಿತು. ‘ನಿಮ್ಮ ಗ್ಯಾರಂಟಿಗಳನ್ನು ನಾವು ವಿರೋಧಿಸುವುದಿಲ್ಲ. ಆದರೆ ಶಿಕ್ಷಣ ಅತ್ಯಗತ್ಯ. ರಾಜ್ಯದಲ್ಲಿನ ತಳವರ್ಗದ ಮಕ್ಕಳು ಶಿಕ್ಷಣ ಪಡೆಯಬಾರದೇ? ಉಳ್ಳವರಿಗೆ ಮಾತ್ರ ಶಿಕ್ಷಣವೇ? ಹಣವಿದ್ದವರು ತಮ್ಮ ಮಕ್ಕಳನ್ನು ಎಲ್ಲಾ ಸೌಲಭ್ಯಗಳಿರುವ ಉತ್ತಮ ಶಾಲೆಗಳಿಗೆ ಸೇರಿಸಬಹುದಾದರೆ ಹಣವಿಲ್ಲದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಹಾಗಿಲ್ಲವೇ’ ಎಂದು ತೀವ್ರ ಅಸಮಾಧಾನ ಹೊರಹಾಕಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.