ಬೆಂಗಳೂರು: ‘ಕನ್ನಡಿಗರ ನೆಲ-ಜಲವನ್ನು ಪಡೆದು ಅಲ್ಲಿ ಅಧಿಕಾರಿಗಳ ಹುದ್ದೆಗಳಿಗೆ ಕನ್ನಡಿಗರನ್ನು ನೇಮಿಸದೇ ಜವಾನ-ಜಾಡಮಾಲಿಯಂತಹ ಉದ್ಯೋಗಗಳಿಗೆ ಮಾತ್ರ ಕನ್ನಡಿಗರನ್ನು ನೇಮಕ ಮಾಡಿದರೆ ಉದ್ಯೋಗ ಕಲ್ಪಿಸಿದಂತಲ್ಲ. ಎಲ್ಲಾ ಹಂತದ ಹುದ್ದೆಗಳಿಗೂ ಕನ್ನಡಿಗರಿಗೆ ಅವಕಾಶ ಕಲ್ಪಿಸಬೇಕು’ ಎಂದು ಕನ್ನಡೇತರ ಕಂಪನಿ ಸ್ಥಾಪಕರ ನಿಲುವಿಗೆ ಗಟ್ಟಿ ಧ್ವನಿಯಲ್ಲಿ ಹೈಕೋರ್ಟ್ ಚಾಟಿ ಬೀಸಿದೆ.
ತನಗೆ ಮಂಜೂರಾಗಿದ್ದ ನಾಲ್ಕು ಎಕರೆ ಜಮೀನನ್ನು ರದ್ದುಪಡಿಸಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕ್ರಮವನ್ನು ಪ್ರಶ್ನಿಸಿ ಐಡಿಬಿಐ ಬ್ಯಾಂಕ್ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಬ್ಯಾಂಕ್, ಕನ್ನಡಿಗರಿಗೆ ಉದ್ಯೋಗ ನೀಡಲು ಹಿಂದೇಟು ಹಾಕಿರುವ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ‘ಬರಿದೇ ‘ಸಿ’ ಹಾಗೂ ‘ಡಿ’ ವೃಂದದ ಉದ್ಯೊಗ ಗಳನ್ನು ಕನ್ನಡಿಗರಿಗೆ ನೀಡುವುದನ್ನು ಹೇಗೆ ತಾನೇ ಒಪ್ಪಲು ಸಾಧ್ಯ’ ಎಂದು ಖಾರವಾಗಿ ಪ್ರಶ್ನಿಸಿತಲ್ಲದೆ ‘ಎಲ್ಲಾ ಹಂತದ ಹುದ್ದೆಗಳಲ್ಲೂ ಕನ್ನಡಿಗರಿಗೆ ಅವಕಾಶ ಕಲ್ಪಿಸಬೇಕು’ ಎಂದು ಎಚ್ಚರಿಸಿತು.
ಜಮೀನು ಹಂಚಿಕೆ ಮಾಡಿ ನೀಡಲಾಗಿದ್ದ ಮಂಜೂರಾತಿ ಪತ್ರವನ್ನು ರದ್ದುಪಡಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದಕೊಳ್ಳುವಂತೆ ಕೆಐಎಡಿಬಿ ಮತ್ತು ಐಡಿಬಿಐ ಬ್ಯಾಂಕಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.
ಪ್ರಕರಣವೇನು?
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ಕೆಐಡಿಬಿ ಅಭಿವೃದ್ಧಿಪಡಿಸಿರುವ ‘ಬೆಂಗಳೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ 4.5 ಎಕರೆಯನ್ನು ಐಡಿಬಿಐ ಬ್ಯಾಂಕಿಗೆ 2013ರ ಫೆಬ್ರುವರಿ 15ರಂದು ಹಂಚಿಕೆ ಮಾಡಲಾಗಿತ್ತು. ಬ್ಯಾಂಕಿನ ರೀಜನಲ್ ಪ್ರೊಸೆಸಿಂಗ್ ಯೂನಿಟ್, ಕಾಲ್ ಸೆಂಟರ್, ಸಿಬ್ಬಂದಿ ವಸತಿ ನಿಲಯ ಸೇರಿದಂತೆ ಇನ್ನಿತರ ಕಟ್ಟಡ ನಿರ್ಮಾಣಕ್ಕೆ ಈ ಜಮೀನು ಹಂಚಿಕೆ ಮಾಡಲಾಗಿತ್ತು. ಎರಡು ವರ್ಷಗಳಲ್ಲಿ ಯೋಜನೆ ಜಾರಿಗೊಳಿಸಬೇಕು. ಅಧಿಕಾರಿ ಹುದ್ದೆಗಳಿಗೆ ಕನ್ನಡಿಗರನ್ನು ನೇಮಿಸಬೇಕು ಎಂದು ಜಮೀನು ಹಂಚಿಕೆ ಸಮಯದಲ್ಲಿ ಕೆಐಎಡಿಬಿ ಷರತ್ತು ವಿಧಿಸಿತ್ತು. ಹತ್ತು ವರ್ಷಗಳಾದರೂ ಯೋಜನೆ ಜಾರಿ ಮಾಡದ ಹಿನ್ನೆಲೆಯಲ್ಲಿ ಜಮೀನು ಹಂಚಿಕೆ ಪತ್ರ ರದ್ದುಪಡಿಸಿ 2023ರ ಜುಲೈ 14ರಂದು ಕೆಐಎಡಿಬಿ ಆದೇಶಿಸಿತ್ತು.
ಜಮೀನು ಹಂಚಿಕೆ ಪತ್ರ ರದ್ದುಪಡಿಸಿದ ಕ್ರಮವನ್ನು ಪ್ರಶ್ನಿಸಿ ಬ್ಯಾಂಕ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿತ್ತು. ಆ ಅರ್ಜಿಯನ್ನು ಏಕಸದಸ್ಯ ನ್ಯಾಯಪೀಠ 2024ರ ಮಾರ್ಚ್ 6ರಂದು ವಜಾಗೊಳಿಸಿತ್ತು. ಅಂತೆಯೇ, ಇಡೀ ಯೋಜನೆಯಲ್ಲಿ ವೈಯಕ್ತಿಕ ಅಧಿಕಾರಿ ಹುದ್ದೆಯೊಂದಕ್ಕೆ ಕನ್ನಡಿಗರನ್ನು ನೇಮಕ ಮಾಡಬೇಕೆಂಬ ಷರತ್ತು ಪಾಲಿಸದೇ ಹೋದದ್ದಕ್ಕೆ ಏಕಸದಸ್ಯ ನ್ಯಾಯಪೀಠ ಗಂಭೀರ ಆಕ್ಷೇಪ ವ್ಯಕ್ತಪಡಿಸಿತ್ತು. ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಬ್ಯಾಂಕ್ ಮೇಲ್ಮನವಿ ಸಲ್ಲಿಸಿದೆ.
ಕನ್ನಡಿಗರ ನೆಲ-ಜಲವನ್ನು ಪಡೆದು ಅವರಿಗೆ ಉದ್ಯೋಗ ನೀಡದಿದ್ದರೆ ಹೇಗೆ? ಉದ್ಯೋಗ ನೀಡದೇ ಹೋದರೆ ಕನ್ನಡಿಗರ ಆತ್ಮಸಾಕ್ಷಿಗೆ ಚುಚ್ಚಿದಂತಾಗಲಿದೆ.–ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್
ಗಳಗನಾಥರ ಸ್ಮರಿಸಿದ ನ್ಯಾಯಮೂರ್ತಿ
ವಿಚಾರಣೆ ವೇಳೆ, ‘ಕನ್ನಡಿಗರಿಗೆ ಕನ್ನಡಿಗರಿಂದ ಆದಷ್ಟು ಅನ್ಯಾಯ ಬೇರೆಯವರಿಂದ ಆಗಿಲ್ಲ’ ಎಂಬ ಕನ್ನಡ ಕಾದಂಬರಿ ಪಿತಾಮಹ ಗಳಗನಾಥರ ಮಾತುಗಳನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು, ‘ಇಂತಹ ಅನ್ಯಾಯ ಬೇರೆಲ್ಲೂ ಆಗಿಲ್ಲ. ಬ್ರಿಟಿಷ್ ಅಧಿಕಾರಿ ರಾಬರ್ಟ್ ಕ್ಲೈವ್ ಸ್ಥಳೀಯರನ್ನು ಗ್ರೂಪ್ ಸಿ ಹುದ್ದೆಗೆ ನೇಮಿಸುತ್ತಿದ್ದರು. ಅದೇ ರೀತಿ ನೀವೂ ವರ್ತಿಸುವಂತಾಗಬಾರದು’ ಎಂದು ಬ್ಯಾಂಕ್ ಪರ ವಕೀಲರಿಗೆ ಕಟುವಾಗಿ ತಾಕೀತು ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.