ಬೆಂಗಳೂರು: ‘ಪಾಸ್‌ಪೋರ್ಟ್ ನವೀಕರಣಕ್ಕೆ ಅರ್ಜಿ ಸಲ್ಲಿಸಿದವರ ವಿರುದ್ಧ ಯಾವುದಾದರೂ ಕ್ರಿಮಿನಲ್ ಪ್ರಕರಣ ವಿಚಾರಣೆಗೆ ಬಾಕಿಯಿದ್ದರೆ ಸಂಬಂಧಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಮತಿ ಪಡೆಯುವ ಅಗತ್ಯವಿಲ್ಲ’ ಎಂದು ಹೈಕೋರ್ಟ್ ಆದೇಶಿಸಿದೆ.
ಉದ್ಯಮಿ ಸಂಜಯ್ ಜಿ.ಖೇಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಪಾಸ್‌ಪೋರ್ಟ್‌ಗೆ ಹೊಸದಾಗಿ ಅರ್ಜಿ ಸಲ್ಲಿಸಿದವರ ವಿರುದ್ಧ ಯಾವುದಾದರೂ ಕ್ರಿಮಿನಲ್ ಪ್ರಕರಣ ಬಾಕಿಯಿದ್ದರೆ ಮಾತ್ರ ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಮತಿ ಅಗತ್ಯ’ ಎಂದು ಸ್ಪಷ್ಟಪಡಿಸಿದೆ.
ಅಂತೆಯೇ, ಪಾಸ್‌ಪೋರ್ಟ್ ಅಧಿಕಾರಿ 2022ರ ಜ.12 ಮತ್ತು ಮಾರ್ಚ್ 11ರಂದು ಹೊರಡಿಸಿದ್ದ ಸೂಚನೆಗಳನ್ನು ರದ್ದುಪಡಿಸಿದೆ.
ಪ್ರಕರಣವೇನು?: ಸಂಜಯ್ ಖೇಣಿ ಅವರಿಗೆ 2021ರ ಜ. 23ರಂದು ಪ್ರಾದೇಶಿಕ ಪಾಸ್‌ಪೋರ್ಟ್ ಪ್ರಾಧಿಕಾರವು ಪಾಸ್‌ಪೋರ್ಟ್ ಮಂಜೂರು ಮಾಡಿತ್ತು. ಅದರ ಅವಧಿ 2022ರ ಜ. 22ರಂದು ಮುಗಿಯುತ್ತಿದ್ದ ಹಿನ್ನೆಲೆಯಲ್ಲಿ 2021ರ ಅಕ್ಟೋಬರ್ 25ರಂದು ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ಪಾಸ್‌ಪೋರ್ಟ್ ನವೀಕರಣಕ್ಕಾಗಿ ಸಂಬಂಧಿಸಿದ ಮ್ಯಾಜಿಸ್ಟ್ರೇಟ್ ಅನುಮತಿ ಪಡೆಯುವಂತೆ ಸಂಜಯ್ ಖೇಣಿಗೆ ಅವರಿಗೆ ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಸೂಚಿಸಿದ್ದರು. ಇದನ್ನು ಖೇಣಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.