ADVERTISEMENT

ಮರು ಮೌಲ್ಯಮಾಪನ: ಕಾನೂನು ತಿದ್ದುಪಡಿಗೆ ಹೈಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 23:30 IST
Last Updated 2 ಅಕ್ಟೋಬರ್ 2024, 23:30 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಪರೀಕ್ಷಾ ಸುಗ್ರೀವಾಜ್ಞೆ-2014ಕ್ಕೆ ಸೂಕ್ತ ತಿದ್ದುಪಡಿ ಮಾಡಿ’ ಎಂದು ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ನಿ‌ರ್ದೇಶಿಸಿರುವ ಹೈಕೋರ್ಟ್, ಈ ಸಂಬಂಧ ದಾಖಲಾಗಿದ್ದ ಪ್ರಕರಣವೊಂದರಲ್ಲಿ, ‘ಅರ್ಜಿದಾರ ವಿದ್ಯಾರ್ಥಿನಿ ಮರು ಮೌಲ್ಯಮಾಪನದಲ್ಲಿ ಪಡೆದಿರುವ ಅಂಕಗಳನ್ನು ಪರಿಗಣಿಸಿ ಮತ್ತು ಆಕೆಗೆ ನ್ಯಾಯಯುತವಾಗಿ ಸಲ್ಲಬೇಕಾದ ಅಂಕಪಟ್ಟಿ ಇತ್ಯಾದಿ ದಾಖಲೆಗಳನ್ನು ಕೂಡಲೇ ಒದಗಿಸಿ’ ಎಂದು ಆದೇಶಿಸಿದೆ.

ಪರೀಕ್ಷಾ ಅಂಕಗಳ ಪುನರ್‌ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಹೊರಡಿಸಿರುವ, ‘ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಪರೀಕ್ಷಾ ಸುಗ್ರೀವಾಜ್ಞೆ–2014’ ಅನ್ನು ರದ್ದುಗೊಳಿಸಬೇಕು ಎಂದು ಕೋರಿ ನಗರದ ಬಿಎಂಎಸ್‌ ಕಾನೂನು ಕಾಲೇಜಿನ ಪ್ರಥಮ ವರ್ಷದ (ಮೂರು ವರ್ಷಗಳ ಪದವಿ ಕೋರ್ಸ್‌) ವಿದ್ಯಾರ್ಥಿನಿ ಕೆ.ವಿ.ನಿಯತಿ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣ ಕುಮಾರ್‌ ಅವರಿದ್ದ ಏಕಸದಸ್ಯ ಪೀಠ ಈ ಕುರಿತಂತೆ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ನಮನ್‌ ಎಂ.ವಂಕದಾರಿ ವಾದ ಮಂಡಿಸಿ, ‘ಅನೇಕ ಕಾನೂನು ವಿದ್ಯಾರ್ಥಿಗಳು ಈ ಸುಗ್ರೀವಾಜ್ಞೆಗೆ ಬಲಿಯಾಗಿ ಅನುತ್ತೀರ್ಣರಾಗುತ್ತಿದ್ದಾರೆ. ಪರೀಕ್ಷಾ ಸುಗ್ರೀವಾಜ್ಞೆ–2014ರ ಖಂಡಿಕೆ 1.3.6ರಲ್ಲಿನ ವಿವರಣೆಯು ತರ್ಕಹೀನ, ಕಾನೂನುಬಾಹಿರ, ಏಕಪಕ್ಷೀಯ, ಸಕಾರಣಗಳಿಲ್ಲದ ಮತ್ತು ಅಸಾಂವಿಧಾನಿಕ ನಡೆಯಾಗಿದ್ದು ಇದನ್ನು ರದ್ದುಗೊಳಿಸಬೇಕು’ ಎಂದು ಕೋರಿದ್ದರು.

ADVERTISEMENT

ಈ ವಾದವನ್ನು ಮನ್ನಿಸಿರುವ ನ್ಯಾಯಪೀಠ, ‘ವಿದ್ಯಾರ್ಥಿಗಳು ಮರು ಮೌಲ್ಯಮಾಪನದ ಪೇಚಿಗೆ ಸಿಲುಕುವ ಸಂದರ್ಭಗಳಲ್ಲಿ ಅವರಿಗೆ ಅನುಕೂಲವಾಗುವಂತೆ ರಾಜ್ಯ ಕಾನೂನು ವಿಶ್ವವಿದ್ಯಾಲಯವು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಪರೀಕ್ಷಾ ಸುಗ್ರೀವಾಜ್ಞೆ-2014ಕ್ಕೆ ಅಗತ್ಯ ತಿದ್ದುಪಡಿ ಮಾಡಬೇಕು’ ಎಂದು ಹೇಳಿದೆ.

ಅಂತೆಯೇ, ‘ನಿಯತಿ ಅವರು ಮರು ಮೌಲ್ಯಮಾಪನದಲ್ಲಿ ಪಡೆದುಕೊಂಡಿರುವ ಒಟ್ಟು ಅಂಕಗಳನ್ನು ಪರಿಗಣಿಸಿದರೆ ಆಕೆ ಯಶಸ್ವಿಯಾಗಿ ಉತ್ತೀರ್ಣವಾಗಿರುವುದು ಸ್ಪಷ್ಟವಾಗಿದೆ. ಮರು ಮೌಲ್ಯಮಾಪನದಲ್ಲಿ ‘ಲಾ ಅಫ್‌ ಟಾರ್ಟ್ಸ್‌’ ವಿಷಯದಲ್ಲಿ ಅವರು 33 ಅಂಕ ಪಡೆದಿರುವುದರಿಂದ ಉತ್ತೀರ್ಣ ಎಂದು ಘೋಷಿಸಬೇಕು’ ಎಂದು ಆದೇಶಿಸಿದೆ.

ಪ್ರಕರಣವೇನು?:

ನಿಯತಿ ಅವರು, ‘ಲಾ ಆಫ್‌ ಟಾರ್ಟ್ಸ್‌’ ವಿಷಯದಲ್ಲಿ 80 ಅಂಕಗಳಿಗೆ 25 ಅಂಕ ಪಡೆದಿದ್ದರು. ಮರು ಮೌಲ್ಯ ಮಾಪನದಲ್ಲಿ 33 ಅಂಕ ಪಡೆದಿದ್ದರು. ‘ಮರುಮೌಲ್ಯಮಾಪನದ ಅಂಗಳ ಅನ್ವಯ ನನ್ನನ್ನು ಉತ್ತೀರ್ಣ ಎಂದು ಘೋಷಿಸಬೇಕಿತ್ತು. ಆದರೆ, 2014ರ ನವೆಂಬರ್‌ 5ರಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹೊರಡಿಸಿರುವ ಸುಗ್ರೀವಾಜ್ಞೆ ಅನ್ವಯ ಅನುತ್ತೀರ್ಣಗೊಳಿಸಲಾಗಿದೆ’ ಎಂದು ಆಕ್ಷೇಪಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.