ADVERTISEMENT

ಸಂತಾನ ಭಾಗ್ಯ ಪಡೆಯಲು ವ್ಯಕ್ತಿಗೆ ಹೈಕೋರ್ಟ್‌ ಪೆರೋಲ್‌

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 16:07 IST
Last Updated 3 ಜೂನ್ 2024, 16:07 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಸಂತಾನ ಭಾಗ್ಯ ಪಡೆಯುವುದಕ್ಕಾಗಿ 31 ವರ್ಷದ  ಮಹಿಳೆಯೊಬ್ಬರು ಸಲ್ಲಿಸಿದ್ದ ರಿಟ್‌ ಅರ್ಜಿ ಮಾನ್ಯ ಮಾಡಿರುವ ಹೈಕೋರ್ಟ್‌; ಕೊಲೆ ಪ್ರಕರಣವೊಂದರಲ್ಲಿ ಸಜಾಬಂದಿಯಾಗಿರುವ ಅವರ ಪತಿಯನ್ನು ಇದೇ 5ರಿಂದ 30 ದಿನ ಪೆರೋಲ್‌ ಮೇಲೆ ಬಿಡುಗಡೆ ಮಾಡುವಂತೆ ಜೈಲು ಅಧೀಕ್ಷಕರಿಗೆ ಆದೇಶಿಸಿದೆ.

ಈ ಕುರಿತಂತೆ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ಪತಿಯನ್ನು 30 ದಿನ ಜೈಲಿನಿಂದ ಬಿಡುಗಡೆ ಮಾಡುವಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ನಿರ್ದೇಶಿಸಿದೆ.

‘ಪೆರೋಲ್ ಅವಧಿಯಲ್ಲಿ ವಾರಕ್ಕೊಮ್ಮೆ ಸ್ಥಳೀಯ ಪೊಲೀಸ್‌ ಠಾಣೆಗೆ ಹಾಜರಾಗಿ ಸಹಿ ಮಾಡಬೇಕು. ಅವಧಿ ಮುಗಿದ ನಂತರ ಪುನಃ ಆನಂದ್‌ ಹಾಗೂ ಅರ್ಜಿದಾರರು ಪೆರೋಲ್‌ ವಿಸ್ತರಣೆಗೆ ಕೋರಬಹುದು’ ಎಂದು ನಿರ್ದೇಶಿಸಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಡಿ.ಮೋಹನ್‌ ಕುಮಾರ್‌ ವಾದ ಮಂಡಿಸಿದರು.

ADVERTISEMENT

ಪ್ರಕರಣವೇನು?: ಆನಂದ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋಲಾರದ ಎರಡನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ 2019ರಲ್ಲಿ ಆದೇಶಿಸಿತ್ತು. ಈ ಶಿಕ್ಷೆಯನ್ನು ಹೈಕೋರ್ಟ್‌ 2023ರಲ್ಲಿ 10 ವರ್ಷಕ್ಕೆ ಇಳಿಸಿತ್ತು. ಜೈಲಿಗೆ ಹೋಗುವ ಮುನ್ನ ಆನಂದ್‌ ಮತ್ತು ಅರ್ಜಿದಾರಾಗಿರುವ ಪತ್ನಿ ಪರಸ್ಪರ ಪ್ರೀತಿಸುತ್ತಿದ್ದರು. ಜೈಲಿಗೆ ಹೋದ ಮೇಲೂ ಅವರ ಪ್ರೀತಿ ಮುಂದುವರಿದಿತ್ತು. ಇಬ್ಬರೂ ಮದುವೆಯಾಗಲು ನಿಶ್ಚಯಿಸಿದ್ದರು. ಈ ಸಂಬಂಧ ಆನಂದ್‌ ಪ್ರಿಯತಮೆ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ್ದ ಹೈಕೋರ್ಟ್‌ 2023ರ ಮಾರ್ಚ್‌ ತಿಂಗಳಲ್ಲಿ, ಮದುವೆಯಾಗಲು ಆನಂದ್‌ ಅವರಿಗೆ 80 ದಿನಗಳ ಕಾಲ ಪೆರೋಲ್‌ ಮೇಲೆ ಬಿಡುಗಡೆ ಮಾಡಲು ಆದೇಶಿಸಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.