ADVERTISEMENT

ಕಾರ್ಮಿಕರ ಕಲ್ಯಾಣದ ₹6,700 ಕೋಟಿ ಖರ್ಚಾಗಿದ್ದೆಲ್ಲಿ?: ಹೈಕೋರ್ಟ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2024, 16:35 IST
Last Updated 10 ಜೂನ್ 2024, 16:35 IST
ಎಂ.ನಾಗಪ್ರಸನ್ನ
ನ್ಯಾಯಮೂರ್ತಿ
ಎಂ.ನಾಗಪ್ರಸನ್ನ ನ್ಯಾಯಮೂರ್ತಿ   

ಬೆಂಗಳೂರು: ‘ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯಲ್ಲಿ ಕಾರ್ಮಿಕರ ಮಕ್ಕಳ ಕಲ್ಯಾಣಕ್ಕಾಗಿ ಬಳಕೆಯಾಗಿದೆ ಎನ್ನಲಾಗುತ್ತಿರುವ ₹6,700 ಕೋಟಿ ಮೊತ್ತದ ಬಗ್ಗೆ ಸಮಗ್ರವಾದ ವಿವರಣೆಯನ್ನು ಪ್ರಮಾಣ ಪತ್ರದ ಮೂಲಕ ಸಲ್ಲಿಸಿ’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ಖಡಕ್‌ ತಾಕೀತು ಮಾಡಿದೆ.

ಈ ಸಂಬಂಧ, ‘ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಫೆಡರೇಶನ್’ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್‌ ಹಾಗೂ ಇತರರು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮೀಸಲಾದ ವರ್ಗದಲ್ಲಿ ಶೈಕ್ಷಣಿಕ ಧನಸಹಾಯಕ್ಕಾಗಿ ಅರ್ಜಿ ಸಲ್ಲಿಸಿದ್ದ ಇಬ್ಬರು ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ ತಕ್ಷಣವೇ ನೆರವು ನೀಡುವಂತೆ ಮಾಡಿದ್ದ ಮಧ್ಯಂತರ ಆದೇಶ ಪಾಲನೆ ಮಾಡದ, ‘ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ’ಯ ಉದಾಸೀನ ನಿಲುವನ್ನು ನ್ಯಾಯಮೂರ್ತಿ ನಾಗಪ್ರಸನ್ನ ವಿಚಾರಣೆ ವೇಳೆ ತೀವ್ರ ತರಾಟೆಗೆ ತೆಗೆದುಕೊಂಡರು.

ADVERTISEMENT

‘ಬಿಸಿಲು, ಮಳೆ ಎನ್ನದೆ ಶ್ರಮಪಡುವ ಕಟ್ಟಡ ಕಾರ್ಮಿಕರ ದುಡಿಮೆಯಿಂದಾಗಿ ಸಾವಿರಾರು ಕೋಟಿ ರೂಪಾಯಿ ಸೆಸ್ ಸಂಗ್ರಹವಾಗುತ್ತಿದ್ದರೂ ಅದನ್ನು ಅವರ‌ ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು‌ ಮಾಡದೆ, ಅಧಿಕಾರಿಗಳು ಐಷಾರಾಮಿ ಜೀವನ ಸಾಗಿಸುತ್ತಿರುವುದು ದುಃಖಕರ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು ‘ಮುಂದಿನ ವಿಚಾರಣೆ ವೇಳೆ ಈ ಕುರಿತ ಸಮಗ್ರ ವಿವರಗಳನ್ನು ನ್ಯಾಯಪೀಠಕ್ಕೆ ಒದಗಿಸಬೇಕು’ ಎಂದು ಆದೇಶಿಸಿದರು.

ಪ್ರಕರಣವೇನು?: ಈ ಹಿಂದಿನ ಅಂದರೆ 2024ರ ಏಪ್ರಿಲ್‌ 23ರಂದು ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ‘ನಾಲ್ಕು ವಾರದೊಳಗೆ ಎಲ್‌ಎಲ್‌.ಬಿ ಹಾಗೂ ಎಂ.ಬಿ.ಎ ವಿದ್ಯಾಭ್ಯಾಸ ಮಾಡುತ್ತಿರುವ ಇಬ್ಬರು ಅರ್ಜಿದಾರ ವಿದ್ಯಾರ್ಥಿನಿಯರಿಗೆ ದಂಡಸಹಿತ ಶೈಕ್ಷಣಿಕ ಧನಸಹಾಯ ಪಾವತಿಸಬೇಕು’ ಎಂದು ‘ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ’ಗೆ ಆದೇಶಿಸಿದ್ದರು.

ಈ ಆದೇಶದ ನಂತರ ಅರ್ಜಿಯು ಪುನಃ ಇದೇ 7ರಂದು ವಿಚಾರಣೆಗೆ ನಿಗದಿಯಾಗಿತ್ತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಆದಿತ್ಯ ಚಟರ್ಜಿ, ‘ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶ ಪಾಲನೆಯಾಗಿಲ್ಲ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಈ ಮಾತಿಗೆ ವ್ಯಗ್ರವಾದ ನ್ಯಾಯಮೂರ್ತಿ ಮಧ್ಯಂತರ ಆದೇಶ ಜಾರಿ ಮಾಡಲು ವಿಫಲವಾದ‌ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ವಿರುದ್ಧ ಕಿಡಿ ಕಾರಿದರು. ‘ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗಿರುವ ₹6,700 ಕೋಟಿ ಸೆಸ್, ಅದು ಹೊಂದಿರುವ‌ ಬ್ಯಾಂಕ್ ಖಾತೆಯ ವಿವರಗಳು ಹಾಗೂ ಯಾವ ಸೌಲಭ್ಯಗಳಿಗೆ ಎಷ್ಟು ಖರ್ಚು ಮಾಡಲಾಗುತ್ತಿದೆ ಎನ್ನುವ ವಿವರಗಳನ್ನು ಒಳಗೊಂಡ ಪ್ರಮಾಣ ಪತ್ರವನ್ನು ಸಲ್ಲಿಸಿ’ ಎಂದು ಸರ್ಕಾರದ ಪರ ವಕೀಲರಿಗೆ ಆದೇಶಿಸಿದರು. ವಿಚಾರಣೆಯನ್ನು ಇದೇ 14ಕ್ಕೆ ಮುಂದೂಡಲಾಗಿದೆ.

ಹೈಕೋರ್ಟ್‌
‘ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ’ ನಿಧಿಯಲ್ಲಿ ಸಾವಿರಾರು ಕೋಟಿ ಸೆಸ್‌ ಸಂಗ್ರಹವಾಗಿದ್ದರೂ ಅಧಿಕಾರಿ ವರ್ಗದವರು ಅದರ ಬಳಕೆಯಲ್ಲಿ ಶ್ರಮಜೀವಿಗಳ ಮಕ್ಕಳ ಬದುಕನ್ನು ಉದಾಸೀನ ದೃಷ್ಟಿಯಿಂದ ನೋಡುತ್ತಿರುವುದು ಸರ್ವಥಾ ಸಲ್ಲದು.
–ಎಂ.ನಾಗಪ್ರಸನ್ನ, ನ್ಯಾಯಮೂರ್ತಿ

₹8200 ಕೋಟಿ ಇದ್ದರೂ ಪ್ರಯೋಜನವಾಗಿಲ್ಲ...

‘ಕಾರ್ಮಿಕರ ಶ್ರಮದಿಂದ ಸಂಗ್ರಹವಾಗಿರುವ ₹ 8200 ಕೋಟಿ ಕಲ್ಯಾಣ ನಿಧಿ ಇದ್ದರೂ ಅವರ ಮಕ್ಕಳಿಗೆ ನ್ಯಾಯಬದ್ದವಾಗಿ ನೀಡಬೇಕಾದ ಶೈಕ್ಷಣಿಕ ಧನಸಹಾಯವನ್ನು ನಿರಾಕರಿಸಿರುವುದನ್ನು ಯಾವ‌ ಕಾರಣದಿಂದಲೂ ಸಮರ್ಥನೆ ಮಾಡಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಈ ಹಿಂದಿನ ವಿಚಾರಣೆ ವೇಳೆ ಅಸಮಾಧಾನ ಹೊರಹಾಕಿತ್ತು.

‘ಅಂದಂದಿನ ತುತ್ತು ಅನ್ನವನ್ನು ಅಂದೇ ದುಡಿದು ತಿನ್ನುವ ಬಡವರ್ಗದ ವಿದ್ಯಾರ್ಥಿನಿಯರ ಶೈಕ್ಷಣಿಕ ಧನಸಹಾಯ ಕೋರಿದ ಅರ್ಜಿಗಳನ್ನು ಕಳೆದ 10 ತಿಂಗಳಿನಿಂದ ಶೈತ್ಯಾಗಾರದಲ್ಲಿ ಇರಿಸಿದ ನಿಮ್ಮ ನಿಲುವು ಭಯಾನಕವಾಗಿದೆ’ ಎಂದು ಆಘಾತ ವ್ಯಕ್ತಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.