ADVERTISEMENT

ಜನಾರ್ದನ ರೆಡ್ಡಿ ಆಸ್ತಿ ಮುಟ್ಟುಗೋಲಿಗೆ ವಿಳಂಬ ಏಕೆ: ಹೈಕೋರ್ಟ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2023, 20:15 IST
Last Updated 10 ಜನವರಿ 2023, 20:15 IST
ಹೈಕೋರ್ಟ್‌
ಹೈಕೋರ್ಟ್‌    

ಬೆಂಗಳೂರು: ‘ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಸೇರಿದ ₹ 19 ಕೋಟಿ ಮೌಲ್ಯದ ಆಸ್ತಿ ಜಪ್ತಿ ಪ್ರಕ್ರಿಯೆಗೆ ಅನುಮತಿ ನೀಡಲು ಏಕಿಷ್ಟು ವಿಳಂಬ ಮಾಡುತ್ತಿದ್ದೀರಿ’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿದೆ.

‘ಜನಾರ್ದನ ರೆಡ್ಡಿ ಮತ್ತು ಅವರ ಕುಟುಂಬದವರಿಗೆ ಸೇರಿದ ಹೆಚ್ಚುವರಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಆರಂಭಿಸಲು ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅನುಮತಿ ನೀಡುವಂತೆ ಕೋರಿ ಮನವಿ ಸಲ್ಲಿಸಲಾಗಿದ್ದು, ಈ ಮನವಿಯನ್ನು ತುರ್ತಾಗಿ ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಸಿಬಿಐ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸಿಬಿಐ ಪರ ವಕೀಲ ಪಿ. ಪ್ರಸನ್ನ ಕುಮಾರ್, ‘ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯನ್ನು ಸಿಬಿಐ, ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರ ನಡೆಸುತ್ತಿದೆ. ಹೆಚ್ಚುವರಿ ತನಿಖೆ ನಡೆಸಿ ₹ 19 ಕೋಟಿ
ಮೌಲ್ಯದ 219 ಹೆಚ್ಚುವರಿ ಆಸ್ತಿಗಳನ್ನು ಜಪ್ತಿಗೆ ಗುರುತಿಸಲಾಗಿದೆ. ಜಪ್ತಿ ಪ್ರಕ್ರಿಯೆ ಆರಂಭಿಸಲು ಸರ್ಕಾರದ ಮುಖ್ಯ ಕಾಯದರ್ಶಿಗೆ 2022ರ ಆಗಸ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ. ಆದರೆ, ಈವರೆಗೂ ಈ ಮನವಿಗೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ. ಏತನ್ಮಧ್ಯೆ, ಈ ಆಸ್ತಿಗಳನ್ನು ಮಾರಾಟ ಮಾಡಲು ಜನಾರ್ದನ ರೆಡ್ಡಿ ಸರ್ವಪ್ರಯತ್ನ ನಡೆಸುತ್ತಿದ್ದಾರೆ‘ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಇದಕ್ಕೆ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ‘ಸಿಬಿಐ ಮನವಿ ಪರಿಗಣಿಸಲು ಯಾವ ಕಾರಣಕ್ಕೆ ವಿಳಂಬವಾಗಿದೆ ಎಂಬ ಬಗ್ಗೆ ಸರ್ಕಾರದಿಂದ ಮಾಹಿತಿ ಪಡೆಯಲು ಒಂದಷ್ಟು ಕಾಲಾವಕಾಶ ಬೇಕು’ ಎಂದು ಅವರು ಮನವಿ
ಮಾಡಿದರು.

ಇದಕ್ಕೆ ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, ‘ಸಿಬಿಐ ಇಂತಹದೊಂದು ಮನವಿಯೊಂದಿಗೆ ಹೈಕೋರ್ಟ್‌ಗೆ ಮೆಟ್ಟಿಲೇರಿರುವುದು ಆಘಾತಕಾರಿ ವಿಚಾರ. ಮನವಿ ಸಲ್ಲಿಸಿ ಐದು ತಿಂಗಳು ಕಳೆದರೂ ಅದನ್ನು ಇನ್ನೂ ಏಕೆ ಪರಿಗಣಿಸಿಲ್ಲ. ಆರೋಪಿ ಪ್ರಭಾವಿ ಎಂದ ಮಾತ್ರಕ್ಕೆ ವಿಳಂಬ ಮಾಡುವುದು ಸರಿಯಲ್ಲ. ಈ ನಡೆಯನ್ನು ನ್ಯಾಯಾಲಯ ಒಪ್ಪುವುದಿಲ್ಲ. ಸಿಬಿಐ ಅರ್ಜಿಗೆ ಶೀಘ್ರವೇ ಪ್ರತಿಕ್ರಿಯಿಸಿ’ ಎಂದು ಸೂಚಿಸಿ ವಿಚಾರಣೆಯನ್ನು ಇದೇ 12ಕ್ಕೆ ಮುಂದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.