ಬೆಂಗಳೂರು: ‘ಹೆದ್ದಾರಿ ವಿಸ್ತರಣೆ ಯೋಜನೆಯಲ್ಲಿ, ಉಡುಪಿ ಜಿಲ್ಲೆಯ ಪೆರ್ಡೂರಿನ ಅನಂತ ಪದ್ಮನಾಭ ದೇವಾಲಯವನ್ನು ಈಗಿರುವ ಜಾಗದಲ್ಲೇ ಉಳಿಸಬಹುದೇ ಹೇಗೆ ಎಂಬ ಬಗ್ಗೆ ಸ್ಪಷ್ಟಪಡಿಸಿ’ ಎಂದು ಹೈಕೋರ್ಟ್, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಸೂಚಿಸಿದೆ.
ಈ ಸಂಬಂಧ ಪೆರ್ಡೂರಿನ ರಂಜಿತ್ ಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಕೃಷ್ಣ ಎಸ್.ವ್ಯಾಸ್, ‘ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಲ್ಲಿ ಪೆರ್ಡೂರಿನ ಐತಿಹಾಸಿಕ ಹಾಗೂ ಪ್ರಾಚೀನವಾದ ಅನಂತ ಪದ್ಮನಾಭ ದೇವಾಲಯಕ್ಕೆ ಧಕ್ಕೆ ಉಂಟಾಗಲಿದೆ. ದೇವಾಲಯದ ರಥಬೀದಿ, ನಾಗವನ ಜಾಗದಲ್ಲಿಯೇ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯಲಿದ್ದು ಇದರಿಂದ ದೇವಾಲಯ ತನ್ನ ಮೂಲ ಸ್ವರೂಪ ಕಳೆದುಕೊಳ್ಳಲಿದೆ’ ಎಂದರು.
‘ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದ ಸಮಯದಲ್ಲೇ ದೇವಾಲಯದ ಭಕ್ತರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ನಿಟ್ಟಿನಲ್ಲಿ 2022ರ ಡಿಸೆಂಬರ್ 19ರಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಮನವಿಯನ್ನೂ ಸಲ್ಲಿಸಿದ್ದರು. ಆದರೆ, ಅದನ್ನು ಪರಿಗಣಿಸಲಾಗಿಲ್ಲ. ಎನ್‌ಎಚ್ಎಐ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಹೆದ್ದಾರಿ ವಿಸ್ತರಣೆ ಕೈಗೆತ್ತಿಕೊಳ್ಳಲಾಗಿದೆ. ಆದ್ದರಿಂದ, ಹೆದ್ದಾರಿ ವಿಸ್ತರಣೆಗೆ ಪರ್ಯಾಯ ಮಾರ್ಗ ಕಂಡುಕೊಳ್ಳುವಂತೆ ನಿರ್ದೇಶಿಸಬೇಕು’ ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪಿಠ, ‘ರಸ್ತೆ ವಿಸ್ತರಣೆ ಸಂದರ್ಭಗಳಲ್ಲಿ ದೇವಾಲಯಗಳೂ ಸೇರಿದಂತೆ ಯಾವುದೇ ಧಾರ್ಮಿಕ ಕಟ್ಟಡಗಳಿಗೆ ಧಕ್ಕೆ ಆಗುವುದಾದರೆ ಅಂತಹ ಸಂದರ್ಭಗಳಲ್ಲಿ ಸಂಬಂಧಿಸಿದ ಪ್ರಾಧಿಕಾರ ಪರ್ಯಾಯ ಮಾರ್ಗಗಳನ್ನು ಬಳಸಬಹುದು. ಈ ಬಗ್ಗೆ ಸುಪ್ರೀಂ ಕೋರ್ಟ್ ಕೂಡಾ ತೀರ್ಪು ನೀಡಿದೆ. ಹಾಗಾಗಿ ಈ ಪ್ರಕರಣದಲ್ಲೂ ಸಚಿವಾಲಯ ಪರ್ಯಾಯ ಮಾರ್ಗದ ಬಗ್ಗೆ ಆಲೋಚಿಸಬೇಕು’ ಎಂದು ಕೇಂದ್ರ ಸಚಿವಾಲಯದ ಪರ ಹಾಜರಿದ್ದ ವಕೀಲ ಎಸ್.ರಾಜಶೇಖರ್ ಅವರಿಗೆ ಸೂಚಿಸಿತು.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷ, ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರೂ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಮೇ 30ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.