ADVERTISEMENT

ಹಿಜಾಬ್‌–ಗೋಡೆ ಬರಹ: ಪ್ರಕರಣ ರದ್ದು

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2023, 20:24 IST
Last Updated 28 ಆಗಸ್ಟ್ 2023, 20:24 IST
   

ಬೆಂಗಳೂರು: ವಿಜಯನಗರ ಜಿಲ್ಲೆ ಹೊಸಪೇಟೆಯ ಸಿಎಂಸಿ ಸರ್ಕಾರಿ ಪ್ರೌಢಶಾಲೆ ಆವರಣದ ಗೋಡೆಯ ಮೇಲೆ ‘ಹಿಜಾಬ್ ನಮ್ಮ ಘನತೆ‘ ಎಂದು ಬರೆದಿದ್ದ ಆರೋಪದಡಿ ಇಬ್ಬರು ಮುಸ್ಲಿಂ ಯುವಕರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಪ್ರಕರಣ ರದ್ದುಗೊಳಿಸುವಂತೆ ಕೋರಿ ವಿಜಯನಗರದ ಮುಝಮ್ಮಿಲ್‌ ಮತ್ತು ಮೊಹಮ್ಮದ್ ಜಾಮೌಲ್ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಪೀಠದಲ್ಲಿನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

‘ಕಾನೂನಿನ ಅನ್ವಯ ವಿಜಯನಗರ ಜಿಲ್ಲೆಯು ಕಾಯ್ದೆಯ ವ್ಯಾಪ್ತಿಗೆ ಒಳಪಟ್ಟಿಲ್ಲ. ಆದ್ದರಿಂದ, ಕರ್ನಾಟಕ ಸಾರ್ವಜನಿಕ ಸ್ಥಳಗಳ ವಿರೂಪ ನಿಷೇಧ ಕಾಯ್ದೆ–1982ರ ಕಲಂ 3 ಅನ್ವಯ ಆಗುವುದಿಲ್ಲ‘ ಎಂಬ ಅರ್ಜಿದಾರರ ಪರ ವಕೀಲರ ವಾದವನ್ನು ಮಾನ್ಯ ಮಾಡಿದೆ.

ADVERTISEMENT

‘ಹೊಸಪೇಟೆಗೆ ಕಾಯ್ದೆಯ ಕಲಂ 3 ಅನ್ನು ಅನ್ವಯಿಸಬೇಕಾದರೆ ಕಲಂ 1 ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಕಲಂ 1ರ ಪ್ರಕಾರ ನಿರ್ದಿಷ್ಟ ಸ್ಥಳ ಅಥವಾ ಸ್ಥಳೀಯ ಪ್ರದೇಶವನ್ನು ಕಾಯ್ದೆಯ ವ್ಯಾಪ್ತಿಗೆ ಒಳಪಡಿಸಬೇಕು. ಈ ಸಂಬಂಧ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸುವುದು ಕಡ್ಡಾಯ‘ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಸರ್ಕಾರದ ವಕೀಲ ವಿ. ಎಸ್. ಕಳಸೂರಮಠ ವಾದ ಮಂಡಿಸಿದ್ದರು.

ಪ್ರಕರಣವೇನು?: ‘ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾ ಮಾಡಿತ್ತು. ಈ ತೀರ್ಪು ಹೊರಬಿದ್ದ ಮರುದಿನ ಅಂದರೆ 2022ರ ಮಾರ್ಚ್ 16ರಂದು ಶಾಲೆಯ ಗೋಡೆಯ ಮೇಲೆ ಕಪ್ಪು ಬಣ್ಣದಲ್ಲಿ ‘ಹಿಜಾಬ್ ನಮ್ಮ ಘನತೆ‘ ಎಂದು ಬರೆದಿರುವುದು ಕಂಡು ಬಂದಿತ್ತು‘ ಎಂದು ಶಾಲೆಯ ಮುಖ್ಯ ಶಿಕ್ಷಕ ದೂರು ನೀಡಿದ್ದರು. ದೂರನ್ನು ಆಧರಿಸಿ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.