ಬೆಂಗಳೂರು: ಗಿರಿನಗರದಲ್ಲಿನ ರಾಮಚಂದ್ರಾಪುರ ಮಠದ ‘ಪುನರ್ವಸು’ ಕಟ್ಟಡ ನಿರ್ಮಾಣ ಮುಂದುವರಿಕೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಈ ಕುರಿತಂತೆ ರಾಮಚಂದ್ರಾಪುರ ಮಠ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ, ‘ಮಠವು ಯಥಾಸ್ಥಿತಿ ಕಾಯ್ದುಕೊಂಡು ಹೋಗಬೇಕು ಮತ್ತು ಆ ಪ್ರದೇಶದಲ್ಲಿ ಮುಂದಿನ ಆದೇಶದವರೆಗೆ ಯಾವುದೇ ಕಟ್ಟಡ ನಿರ್ಮಾಣ ಕಾರ್ಯ ಮುಂದುವರಿಸಬಾರದು’ ಎಂದು ತಾಕೀತು ಮಾಡಿದೆ.
ಪ್ರಕರಣವೇನು?: ‘ಕಟ್ಟಡ ನಿರ್ಮಾಣಕ್ಕೆ 2013ರಲ್ಲಿ ನಕ್ಷೆ ಮಂಜೂರು ಮಾಡಲಾಗಿತ್ತು. ಈ ಮಂಜೂರಾತಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2016ರಲ್ಲಿ ಹಿಂಪಡೆದಿತ್ತು. ಇದನ್ನು ರಾಘವೇಶ್ವರ ಭಾರತೀ ಸ್ವಾಮೀಜಿ ಪರವಾಗಿ ಮಠದ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಕೆ.ಜಿ.ಭಟ್ ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
‘ನಾಗರಿಕರ ಉಪಯೋಗಕ್ಕೆ ಮೀಸಲಿಟ್ಟ ನಿವೇಶನದಲ್ಲಿ ಮಠದ ಆಡಳಿತ ಮಂಡಳಿ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದೆ. ಆದ್ದರಿಂದ ಮಠಕ್ಕೆ ನೀಡಲಾಗಿರುವ ನಿವೇಶನದ ಖಾತೆ ಮತ್ತು ನಕ್ಷೆ ಮಂಜೂರಾತಿ ರದ್ದುಪಡಿಸಬೇಕು’ ಎಂದು ಕೋರಿ ನ್ಯಾಯಾಂಗ ಹೊಣೆಗಾರಿಕೆ ಸಮಿತಿ ಮತ್ತು ಎಂ.ಪವನ್ ಪ್ರಸಾದ್ ಕೋರ್ಟ್ ಮೆಟ್ಟಿಲೇರಿದ್ದರು.
ಮಠದ ಪರ ಪಿ.ಎನ್.ಮನಮೋಹನ್ ವಾದ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.