ADVERTISEMENT

ರಾಘವೇಶ್ವರ ಶ್ರೀ ವಿಚಾರಣೆಗೆ `ಹೈಕೋರ್ಟ್‌' ತಡೆಯಾಜ್ಞೆ

ಕೆದಿಲ ಶ್ಯಾಮಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 16:14 IST
Last Updated 7 ಡಿಸೆಂಬರ್ 2018, 16:14 IST

ಪುತ್ತೂರು: ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಬರುವ ಬಂಟ್ವಾಳ ತಾಲ್ಲೂಕಿನ ಕೆದಿಲ ಶ್ಯಾಮ ಪ್ರಸಾದ್ ಶಾಸ್ತ್ರಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ವಿರುದ್ದದ ಪ್ರಕರಣದ ವಿಚಾರಣೆಗೆ ರಾಜ್ಯ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ರಾಘವೇಶ್ವರ ಸ್ವಾಮೀಜಿ ಅವರು ತನ್ನ ವಿರುದ್ದದ ಪ್ರಕರಣದ ವಿಚಾರಣೆಗೆ ತಡೆ ಕೋರಿ ವಕೀಲರ ಮೂಲಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾಯಾಧೀಶ ನಿಜಗಣ್ಣನವರ್ ಅವರು ಸ್ವಾಮೀಜಿ ವಿರುದ್ದದ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಿ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.

ಕೆದಿಲ ಶ್ಯಾಮಪ್ರಸಾದ್ ಶಾಸ್ತ್ರಿ ಅವರು 2014ರ ಅಗಸ್ಟ್ 31 ರಂದು ತಮ್ಮ ಮನೆಯಲ್ಲಿ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ರಾಘವೇಶ್ವರ ಸ್ವಾಮೀಜಿ, ಡಾ. ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಬೋನಂತಾಯ ಶಿವಶಂಕರ ಭಟ್ ವಿರುದ್ದ ಪುತ್ತೂರಿನ ಎಡಿಷನಲ್ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಬೋನಂತಾಯ ಶಿವಶಂಕರ ಭಟ್ ಅವರಿಗೆ ವಾರೆಂಟ್‌ ಜಾರಿ ಮಾಡಿದ್ದು, ರಾಘವೇಶ್ವರ ಸ್ವಾಮೀಜಿಗೆ ಸಮನ್ಸ್ ಜಾರಿಗೊಳಿಸಿತ್ತು. ಈ ಹಿನ್ನಲೆಯಲ್ಲಿ ಸ್ವಾಮೀಜಿ ಅವರು ವಕೀಲರೊಬ್ಬರ ಮೂಲಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ರಾಘವೇಶ್ವರ ಸ್ವಾಮೀಜಿ ಪರ ವಕೀಲ ಸಿ.ವಿ. ನಾಗೇಶ್, ಅರುಣ್‌ ಶಾಂ ಮತ್ತು ಮನಮೋಹನ್ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.