ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ಅಪಹರಣದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿನ ಮೊದಲನೇ ಆರೋಪಿ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನು ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
‘ಎಚ್.ಡಿ.ರೇವಣ್ಣಗೆ ಜಾಮೀನು ಮಂಜೂರು ಮಾಡಿರುವುದನ್ನು ರದ್ದುಗೊಳಿಸಬೇಕು’ ಎಂದು ಕೋರಿ ಎಸ್ಐಟಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ಬುಧವಾರ ಪ್ರಕಟಿಸಿದೆ. ಎಸ್ಐಟಿ ಅರ್ಜಿಯನ್ನು ವಜಾ ಮಾಡಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಎಸ್ಐಟಿ ಪರ ವಾದ ಮಂಡಿಸಿದ್ದ ವಿಶೇಷ ಪ್ರಾಸಿಕ್ಯೂಟರ್, ಹಿರಿಯ ವಕೀಲ ರವಿವರ್ಮ ಕುಮಾರ್, ‘ಪ್ರಕರಣದಲ್ಲಿ ಈಗಾಗಲೇ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಆರೋಪಿಗೆ ಜಾಮೀನು ನೀಡುವಾಗ ವಿಚಾರಣಾ ನ್ಯಾಯಾಲಯ ಪ್ರಮಾದ ಎಸಗಿದೆ. ಸಂತ್ರಸ್ತೆ ಮಹಿಳೆಯರನ್ನು ಅಪಹರಿಸಿ ಏಳನೇ ಆರೋಪಿಯ ಮನೆಯಲ್ಲಿ ಇರಿಸಲಾಗಿತ್ತು. ಆಕೆಗೂ ಆತನಿಗೂ ಯಾವುದೇ ಸಂಬಂಧ ಇರಲಿಲ್ಲ. ಆ ಸ್ಥಳದಲ್ಲಿ ಮಹಜರ್ ನಡೆಸಿದಾಗ, ಆಕೆಯ ಕೂದಲು ದೊರೆತಿದೆ’ ಎಂದಿದ್ದರು.
‘ಸಂತ್ರಸ್ತೆ ಕೈಮುಗಿದು ತನ್ನ ಮೇಲೆ ಅತ್ಯಾಚಾರ ನಡೆಸದಂತೆ ಪ್ರಜ್ವಲ್‌ಗೆ ಕೋರಿದ್ದಾರೆ. ಇಂತಹ ಆರೋಪಿಯನ್ನು ರಕ್ಷಿಸಲು ರೇವಣ್ಣ, ಸಂತ್ರಸ್ತೆಯ ಅಪಹರಣ ಮಾಡಿಸಿದ್ದಾರೆ. ಇದು ಅತ್ಯಂತ ಘೋರ ಕೃತ್ಯ. ಸಂತ್ರಸ್ತ ಮಹಿಳೆಯನ್ನು ಒತ್ತೆ ಇಟ್ಟಿದ್ದ ಏಳನೇ ಆರೋಪಿ ಈ ಹಿಂದೆ ರೇವಣ್ಣಗೆ ವಿಶೇಷ ಕರ್ತವ್ಯಾಧಿಕಾರಿ ಆಗಿದ್ದರು ಎಂಬುದು ತನಿಖೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ, ಅವರ ಜಾಮೀನು ರದ್ದುಪಡಿಸಬೇಕು’ ಎಂದು ಕೋರಿದ್ದರು.
ರೇವಣ್ಣ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್, ‘ಇಡೀ ಘಟನೆಗೆ ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 364 ಎ ಅನ್ವಯಿಸುವುದಿಲ್ಲ. ಪ್ರಕರಣದಲ್ಲಿ ಯಾವುದೇ ಆರೋಪಿಯು ಸಂತ್ರಸ್ತೆಗೆ ಕಿಂಚಿತ್ತೂ ಹಾನಿ ಉಂಟು ಮಾಡಿಲ್ಲ, ಬೆದರಿಕೆ ಹಾಕಿಲ್ಲ ಎಂಬುದನ್ನು ವಿಚಾರಣಾ ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ದಾಖಲಿಸಿದೆ’ ಎಂದು ಪ್ರತಿಪಾದಿಸಿದ್ದರು.
ಸಂತ್ರಸ್ತೆ ಅಪಹರಣ ಆರೋಪದ ಇದೇ ಪ್ರಕರಣದಲ್ಲಿ ಹಾಸನದ ಸತೀಶ್ ಬಾಬು ಅಲಿಯಾಸ್ ಸತೀಶ್ ಬಾಬಣ್ಣ, ಎಚ್.ಕೆ.ಸುಜಯ್, ಎಚ್.ಎನ್.ಮಧು, ಎಸ್.ಟಿ.ಕೀರ್ತಿ, ಎಚ್.ಡಿ.ಮಾಯು ಗೌಡ, ಕೆ.ಎ.ರಾಜಗೋಪಾಲ್ ಅವರ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪುರಸ್ಕರಿಸಿದೆ.
‘ಆರೋಪಿಗಳೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ರಕ್ತ ಸಂಬಂಧಿಗಳು ಮತ್ತು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರೆಲ್ಲರೂ ರಾಜಕೀಯವಾಗಿ ಒಂದಲ್ಲಾ ಒಂದು ಸ್ಥಾನಮಾನ ಹೊಂದಿದವರೇ ಆಗಿದ್ದಾರೆ’ ಎಂಬ ಪ್ರಾಸಿಕ್ಯೂಷನ್ ವಾದವನ್ನು ನ್ಯಾಯಪೀಠ ತಳ್ಳಿಹಾಕಿದೆ.
‘ಎಲ್ಲಾ ಜಾಮೀನು ಅರ್ಜಿಗಳನ್ನು ಪುರಸ್ಕರಿಸಿರುವ ನ್ಯಾಯಪೀಠ 2ರಿಂದ 7ನೇ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು. ಎಲ್ಲಾ ಆರೋಪಿಗಳು ತಲಾ ₹4 ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಇತರೆ ಸಾಮಾನ್ಯ ಷರತ್ತುಗಳನ್ನು ಪೂರೈಸಬೇಕು’ ಎಂದು ಆದೇಶಿಸಿದೆ.
ಇದರಿಂದಾಗಿ ಪ್ರಕರಣದಲ್ಲಿನ ಒಂಬತ್ತು ಆರೋಪಿಗಳ ಪೈಕಿ ಎಂಟು ಮಂದಿ ಆರೋಪಿಗಳಿಗೆ ಜಾಮೀನು ಲಭ್ಯವಾದಂತಾಗಿದೆ. ಭವಾನಿ ರೇವಣ್ಣ ಅವರ ಕಾರು ಚಾಲಕ ಮಾತ್ರ ಇನ್ನೂ ತಲೆಮರೆಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.