ADVERTISEMENT

ಮುಡಾ ಪ್ರಕರಣ: ಸಿದ್ದರಾಮಯ್ಯ ವಿರುದ್ಧ ತನಿಖೆಗೆ ದಾರಿ; ಮೇಲ್ಮನವಿಗೆ ತಯಾರಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 21:27 IST
Last Updated 24 ಸೆಪ್ಟೆಂಬರ್ 2024, 21:27 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ತನಿಖೆಗೆ ರಾಜ್ಯಪಾಲರು ನೀಡಿದ ಅನುಮತಿ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ವಜಾಗೊಳಿಸಿ ಮಹತ್ವದ ತೀರ್ಪು ನೀಡಿರುವ ಹೈಕೋರ್ಟ್‌, ತನಿಖೆಗೆ ಅಸ್ತು ಎಂದಿದೆ.

ಇದರ ಬೆನ್ನಲ್ಲೇ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರ ಮುಂದಿದ್ದ ಸಿದ್ದರಾಮಯ್ಯ ವಿರುದ್ಧದ ಪ್ರಕರಣಕ್ಕೆ ಇದ್ದ ತಡೆ ಆದೇಶ ತೆರವುಗೊಂಡಂತಾಗಿದೆ. ಬುಧವಾರ, ಈ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಗೆ ಬರಲಿದೆ. ಈ ಬೆಳವಣಿಗೆಯ ಬೆನ್ನಲ್ಲೇ, ವಿಭಾಗೀಯದ ಪೀಠದ ಮುಂದೆ ಬುಧವಾರವೇ ಮೇಲ್ಮನವಿ ಸಲ್ಲಿಸಲು ಹೋಗಲು ಸಿದ್ದರಾಮಯ್ಯ ತಯಾರಿ ನಡೆಸಿದ್ದಾರೆ. ಸಿದ್ದರಾಮಯ್ಯ ಪರ–ವಿರುದ್ಧದ ಸಂಘಟನೆಗಳು ಹೋರಾಟಕ್ಕೆ ಅಣಿಯಾಗಿವೆ.

ADVERTISEMENT

ರಾಜ್ಯಪಾಲರ ಆದೇಶ ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ಪೂರ್ಣಗೊಳಿಸಿ, ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಪ್ರಕಟಿಸಿದ್ದು, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆಗೆ ನೀಡಿದ್ದ ಮಧ್ಯಂತರ ಆದೇಶ ಮುಂದುವರಿಯುವುದಿಲ್ಲ’ ಎಂದು
ಸ್ಪಷ್ಟಪಡಿಸಿದೆ.

‘ರಾಜ್ಯಪಾಲರ ಆದೇಶವು ವಿವೇಚನಾ ಶೂನ್ಯವಾಗಿಲ್ಲ. ಎಲ್ಲವೂ ಕಾನೂನಿಗೆ ಅನುಗುಣ
ವಾಗಿಯೇ ಇದೆ. ತನಿಖಾಧಿಕಾರಿಯಿಂದ ಮುಂಚಿತವಾಗಿಯೇ ತನಿಖೆ ನಡೆಸಿ ವರದಿ ಪಡೆಯಬೇಕಾದ ಅಗತ್ಯವಿಲ್ಲ. ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ (ಪಿಸಿ ಕಾಯ್ದೆ) 17ಎ ಅಡಿ ಖಾಸಗಿ ವ್ಯಕ್ತಿಯೂ ತನಿಖೆ ನಡೆಸುವಂತೆ ಕೋರಿ ಅನುಮತಿ ಪಡೆಯ
ಬಹುದು’ ಎಂದು ಪೀಠ ಹೇಳಿದೆ.

‘ಫಿರ್ಯಾದುದಾರರು ತಮ್ಮ ದೂರನ್ನು ಮುಂದುವರಿಸಲು ಮತ್ತು ಇದಕ್ಕೆ ಪೂರಕವಾಗಿ ರಾಜ್ಯಪಾಲರಿಂದ ಮಂಜೂರಾತಿ ಪಡೆಯಲು ಸಮರ್ಥರಾಗಿದ್ದಾರೆ. ಸಾಮಾನ್ಯ ಸಂದರ್ಭಗಳಲ್ಲಿ, ಸಚಿವ ಸಂಪುಟದ ಸಲಹೆಯಂತೆ ಕಾರ್ಯ ನಿರ್ವಹಿಸುವುದು ರಾಜ್ಯಪಾಲರ ಕರ್ತವ್ಯ. ಆದಾಗ್ಯೂ, ವಿಶೇಷ ಸಂದರ್ಭಗಳಲ್ಲಿ ಅವರು ಸ್ವತಂತ್ರ ನಿರ್ಧಾರವನ್ನು ತೆಗೆದುಕೊಳ್ಳಬಹುದು’ ಎಂದು ವಿವರಿಸಿದೆ.

‘ವಾಸ್ತವವಾಗಿ ಪಿಸಿ ಕಾಯ್ದೆಯ ಕಲಂ 17ಎ ಅಡಿಯಲ್ಲಿ
ಅನುಮತಿ ಕಡ್ಡಾಯವಾಗಿದೆ. ಆದರೆ, ಖಾಸಗಿ ದೂರುದಾರರ ವಿಚಾರದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತ–2023ರ (ಬಿಎನ್‌ಎಸ್‌ಎಸ್‌) ಕಲಂ 200 ಅಥವಾ 223ರ ಅಡಿಯಲ್ಲಿ ಪೊಲೀಸ್ ಅಧಿಕಾರಿಯೇ ಅನುಮತಿ ಕೋರಬೇಕೆನ್ನುವ ಅಗತ್ಯ ಎಲ್ಲಿಯೂ ಇಲ್ಲ. ಖಾಸಗಿ ದೂರುದಾರರೂ ರಾಜ್ಯಪಾಲರಿಂದ ಮಂಜೂ
ರಾತಿ ಪಡೆಯಬಹುದು. ಅಂತಹ ಅನುಮತಿಯನ್ನು ಪಡೆಯುವುದು ದೂರುದಾರರ ಕರ್ತವ್ಯ’ ಎಂದು ನ್ಯಾಯಪೀಠ ಹೇಳಿದೆ.

ಏನಿದು ವಿವಾದ?: ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಒಡೆತನದ್ದು ಎನ್ನಲಾದ ಕೃಷಿ ಭೂಮಿಯನ್ನು ಮುಡಾ ವಶಪಡಿಸಿಕೊಂಡು ಅದಕ್ಕೆ ಬದಲು 14 ನಿವೇಶನ ಪ್ರಮುಖ ಜಾಗದಲ್ಲಿ ಹಂಚಿಕೆ ಮಾಡಿದೆ’ ಎನ್ನುವುದು ವಿವಾದದ ಕೇಂದ್ರ ಬಿಂದು.

‘ಪರಿಹಾರ ರೂಪದಲ್ಲಿ ನೀಡಲಾದ ನಿವೇಶನಗಳ ಹಂಚಿಕೆ ಪ್ರಕ್ರಿಯೆಯೇ ಅಕ್ರಮದಿಂದ ಕೂಡಿದೆ. ಇಡೀ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯನವರು ಪ್ರಭಾವ ಬೀರಿರುವುದು ಕಂಡು ಬಂದಿದೆ’ ಎಂದು ಆರೋಪಿಸಲಾದ ಮೂರು ಖಾಸಗಿ ದೂರುಗಳನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿತ್ತು. ಇವುಗಳನ್ನು ಆಧರಿಸಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988ರ ಕಲಂ (ಪಿಸಿ ಕಾಯ್ದೆ) 17ಎ ಅಡಿ ತನಿಖೆ ನಡೆಸಲು 2024ರ ಆಗಸ್ಟ್ 17ರಂದು ಮಂಜೂರಾತಿ ನೀಡಿದ್ದರು. ‘ರಾಜ್ಯಪಾಲರ ಆದೇಶವನ್ನು ರದ್ದುಪಡಿಸಬೇಕು’ ಎಂದು ಕೋರಿ ಸಿದ್ದರಾಮಯ್ಯ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ತನಿಖಾ ಪ್ರಕ್ರಿಯೆ ಹೇಗೆ?

* ಖಾಸಗಿ ದೂರುಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಚಾರಣೆಗೆ ಸ್ವೀಕರಿಸಿ, ದೂರುಗಳನ್ನು ಪರಿಶೀಲಿಸ
ಬಹುದು. ಅವುಗಳಲ್ಲಿರುವ ಆರೋಪ ಕುರಿತು ತನಿಖೆಗೆ ಆದೇಶಿಸಬಹುದು

* ಇವು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್‌ಗಳ ಅಡಿ ನೀಡಲಾದ ದೂರುಗಳಾಗಿರುವ ಕಾರಣ, ಇಂತಹ ಪ್ರಕರಣಗಳ ತನಿಖೆಗಾಗಿಯೇ
ಅಸ್ತಿತ್ವದಲ್ಲಿರುವ ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಪ್ರಕರಣ ವರ್ಗಾವಣೆ ಆಗುತ್ತದೆ

* ವಿಶೇಷ ನ್ಯಾಯಾಲಯವು ನೀಡುವ ಆದೇಶದ ಅನುಸಾರ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌
ದಾಖಲಿಸಬೇಕಾಗುತ್ತದೆ

* ಮೂರು ಖಾಸಗಿ ದೂರುಗಳಿಗೆ ಸಂಬಂಧಿಸಿ ಒಂದೇ ಎಫ್‌ಐಆರ್‌ ದಾಖಲಿಸಿ, ತನಿಖೆ
ಆರಂಭಿಸಬೇಕಾಗುತ್ತದೆ

ಮುಖ್ಯಮಂತ್ರಿ ಬೆಂಬಲಕ್ಕೆ ಸಚಿವರ ದಂಡು

ಹೈಕೋರ್ಟ್‌ ತೀರ್ಪು ಪ್ರಕಟಿಸುತ್ತಿದ್ದಂತೆ, ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ‘ಕಾವೇರಿ’ ನಿವಾಸದ ಕಡೆಗೆ ತರಾತುರಿಯಲ್ಲಿ ತೆರಳಿದರು. ಅದೇ ವೇಳೆಗೆ ಸಚಿವ ಸಂಪುಟದ ಸಹೋದ್ಯೋಗಿಗಳು, ಕೆಲವು ಕಾಂಗ್ರೆಸ್‌ ಮುಖಂಡರೂ ಮುಖ್ಯಮಂತ್ರಿ ಭೇಟಿಗೆ ಅಲ್ಲಿಗೆ ‌ದೌಡಾಯಿಸಿದರು.

ಹೈಕೋರ್ಟ್‌ ತೀರ್ಪು ಹಾಗೂ ಮುಂದಿನ ಹೆಜ್ಜೆಯ ಕುರಿತು ಸಚಿವರು ಮತ್ತು ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿದರು. ದೂರವಾಣಿ ಮೂಲಕ ತಮ್ಮ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ಜೊತೆಗೂ ಸಮಾಲೋಚನೆ ನಡೆಸಿದರು. ‌ಅಲ್ಲದೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರಿಗೂ ಕರೆ ಮಾಡಿದ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಿದರು. ಸಚಿವರಾದ ಎಚ್‌.ಕೆ. ಪಾಟೀಲ, ಎಚ್‌.ಸಿ. ಮಹದೇವಪ್ಪ, ಕೆ.ಜೆ. ಜಾರ್ಜ್‌, ಕೃಷ್ಣ ಬೈರೇಗೌಡ, ಈಶ್ವರ ಖಂಡ್ರೆ, ಎನ್‌. ಚಲುವರಾಯಸ್ವಾಮಿ, ಬೈರತಿ ಸುರೇಶ್‌, ಶಾಸಕ ಆರ್‌.ವಿ. ದೇಶಪಾಂಡೆ ಇದ್ದರು.

‘ರಾಜೀನಾಮೆ ಕೊಡಲ್ಲ: ಎಚ್‌ಡಿಕೆ ಕೊಟ್ಟರೇ?’

‘ನಾನು ಹೆದರಲ್ಲ. ರಾಜೀನಾಮೆ ನೀಡಲ್ಲ. ನಿಮ್ಮ ಷಡ್ಯಂತ್ರವನ್ನು ಸೋಲಿಸುತ್ತೇನೆ’ ಎಂದು ಬಿಜೆಪಿ–ಜೆಡಿಎಸ್‌ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

‘ನಾನು ರಾಜೀನಾಮೆ ಕೊಡುತ್ತೇನೆಂದು ಕಾದು ಕುಳಿತಿದ್ದೀರಾ? ಯಾವ ತಪ್ಪೂ ಮಾಡದ ನನ್ನನ್ನು ಷಡ್ಯಂತ್ರದಿಂದ ಇಳಿಸಲು ನೋಡುತ್ತಿದ್ದೀರಾ? ಇದು ಅಸಾಧ್ಯ. ನಾನು ಹೋರಾಟ ರಾಜಕಾರಣದಿಂದ ಬಂದವನು’ ಎಂದರು.

‘ನಾನ್ಯಾಕೆ ರಾಜೀನಾಮೆ ಕೊಡಬೇಕು. ಎಫ್‌ಐಆರ್ ಆಗಿ ಜಾಮೀನಿನ ಮೇಲೆ ಇರುವ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆ ಕೊಟ್ಟಿದ್ದಾರೆಯೇ’ ಎಂದೂ ಪ್ರಶ್ನಿಸಿದರು.

ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯವರು ಪ್ರತಿಭಟನೆ ಹಮ್ಮಿಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಅವರನ್ನು ನಾವು ಎದುರಿಸುತ್ತೇವೆ’ ಎಂದು ಕೋಪದಿಂದಲೇ ಹೇಳಿದರು.

‘ಮುಡಾ ಪ್ರಕರಣದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್‌ 17ಎ ಅಡಿ ತನಿಖೆ ಮಾಡಲು ಆದೇಶ ನೀಡಿದ ಮಾತ್ರಕ್ಕೆ ನಾನು ತಪ್ಪು ಮಾಡಿದ್ದೇನೆ ಎಂದಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ’ ಎಂದರು.

ಕಾಂಗ್ರೆಸ್ ಪಕ್ಷದ ಡಿಎನ್ಎಯಲ್ಲೇ ಭ್ರಷ್ಟಾಚಾರ ಇದೆ. ಸಿದ್ದರಾಮಯ್ಯ ಅವರು ಇದಕ್ಕೆ ಹೊರತಾಗಿಲ್ಲ. ನಿಯಮಗಳನ್ನು ಗಾಳಿಗೆ ತೂರಿ ಅವರು ಅಧಿಕಾರ ದುರುಪಯೋಗ ಮಾಡಿದ್ದಾರೆ. ಇಡೀ ದೇಶಕ್ಕೆ ರಾಹುಲ್‌ ಗಾಂಧಿ ಅವರು ನೈತಿಕತೆಯ ನಕಲಿ ಪಾಠ ಹೇಳುತ್ತಾರೆ. ನೈತಿಕತೆ ಕಳೆದುಕೊಂಡಿರುವ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ರಾಹುಲ್ ಸೂಚಿಸಬೇಕು
–ಪ್ರಲ್ಹಾದ ಜೋಶಿ, ಕೇಂದ್ರ ಆಹಾರ ಸಚಿವ 
ತಮ್ಮ ಜೀವನ ತೆರೆದ ಪುಸ್ತಕ ಎಂದು ಸಿದ್ದರಾಮಯ್ಯ ಪದೇ ಪದೇ ಹೇಳಿಕೆ ನೀಡಿದ್ದಾರೆ. ಆ ಪುಸ್ತಕ ಈಗ ಎಲ್ಲಿ ಕಳೆದು ಹೋಗಿದೆ ಎಂಬುದು ಗೊತ್ತಿಲ್ಲ. ಹೈಕೋರ್ಟ್ ಆದೇಶ ಗೌರವಿಸಿ ಹಾಗೂ ಪ್ರಕರಣದ ಗಾಂಭೀರ್ಯ ಗಮನಿಸಿ ಅವರು ಕೂಡಲೇ ರಾಜೀನಾಮೆ ನೀಡಬೇಕು. ತಪ್ಪು ಮಾಡುವುದು ಸಹಜ. ಅದನ್ನು ತಿದ್ದಿಕೊಳ್ಳಬೇಕು. 
–ವಿ.ಸೋಮಣ್ಣ, ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ 
ದಲಿತರ ಜಮೀನನ್ನು ಪಡೆದು ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆ. ಜತೆಗೆ, ಸಾಂವಿಧಾನಿಕ ಹುದ್ದೆಯಲ್ಲಿದ್ದು ಪತ್ನಿ ಹೆಸರಿನಲ್ಲಿ 14 ನಿವೇಶನಗಳನ್ನು ಪಡೆದಿದ್ದಾರೆ. ರಾಜ್ಯಪಾಲರ ವಿರುದ್ಧ ರಾಜಕೀಯ ಪ್ರೇರಿತ ದುರುದ್ದೇಶದ ಆರೋಪ ಮಾಡಿರುವ ಅವರು ಹುದ್ದೆಯಲ್ಲಿ ಯಾವುದೇ ಕಾರಣಕ್ಕೂ ಮುಂದುವರಿಯಬಾರದು. 
–ಶೋಭಾ ಕರಂದ್ಲಾಜೆ, ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವೆ 
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ತಂದೆ ಬಿ.ಎಸ್‌.ಯಡಿಯೂರಪ್ಪ ಅವರು ಪೋಕ್ಸೊ ಪ್ರಕರಣದ ಆರೋಪಿ. ಸಿದ್ದರಾಮಯ್ಯ ರಾಜೀನಾಮೆ ಕೇಳಲು ವಿಜಯೇಂದ್ರ ಅವರಿಗೆ ನೈತಿಕತೆ ಇಲ್ಲ. ಮೊದಲು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. 
–ಪ್ರಿಯಾಂಕ್‌ ಖರ್ಗೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ 
ಪಕ್ಷ ಅಥವಾ ಸರ್ಕಾರ ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ದೆಹಲಿಯಿಂದ ಹಳ್ಳಿಯವರೆಗೂ ಕಾಂಗ್ರೆಸ್, ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಲಿದೆ. ಕಾನೂನು ಹೋರಾಟ ಮಾಡುತ್ತೇವೆ
–ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
40 ವರ್ಷಗಳ ರಾಜಕೀಯ ಜೀವನದಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲ ಎಂದು ಎದೆ ತಟ್ಟಿಕೊಂಡು ಹೇಳುತ್ತಿದ್ದ ಸಿದ್ದರಾಮಯ್ಯ ಅವರು ಹೈಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ತಕ್ಷಣವೇ ರಾಜೀನಾಮೆ ನೀಡಲಿ.
–ಆರ್‌.ಅಶೋಕ ವಿಧಾನಸಭೆ ವಿರೋಧ ಪಕ್ಷದ ನಾಯಕ
ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ಒತ್ತಾಯ ಮಾಡುವುದಿಲ್ಲ. ಕಾನೂನಿನಲ್ಲಿ ರಕ್ಷಣೆ ಪಡೆಯಲು ಅವಕಾಶ ಇದೆ. ಕಾನೂನು ಬಾಹಿರ ಚಟುವಟಿಕೆ ಮಾಡಿದ್ದರೆ, ಕೋರ್ಟ್‌ ತೀರ್ಪು ಕೊಡುತ್ತದೆ
–ಎಚ್‌.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ
ಮುಡಾ ಹಗರಣದಲ್ಲಿ ತಮ್ಮ ಪಾತ್ರ ಇಲ್ಲ ಎನ್ನುತ್ತಿದ್ದ ಸಿದ್ದರಾಮಯ್ಯ ಅವರು ರಾಜ್ಯಪಾಲರ ತೇಜೋವಧೆಯಲ್ಲಿ ನಿರತರಾಗಿದ್ದರು. ಹೈಕೋರ್ಟ್‌ ತೀರ್ಪಿನಲ್ಲಿ ಸತ್ಯ ಹೊರಬಂದಿದೆ. ರಾಜೀನಾಮೆಗೆ ಇನ್ನು ತಡವೇಕೆ?
–ಬಿ.ವೈ.ವಿಜಯೇಂದ್ರ, ಅಧ್ಯಕ್ಷ, ರಾಜ್ಯ ಬಿಜೆಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.