ADVERTISEMENT

₹8.92 ಕೋಟಿ ಮೌಲ್ಯದ 12 ಐಷಾರಾಮಿ ಕಾರು ಜಪ್ತಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 4:05 IST
Last Updated 27 ಡಿಸೆಂಬರ್ 2022, 4:05 IST
   

ಬೆಂಗಳೂರು: ಕಾರು ಮಾರಾಟ ಹಾಗೂ ಖರೀದಿ ಸೋಗಿನಲ್ಲಿ ಮಾಲೀಕರನ್ನು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕಬ್ಬನ್‌ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ನಿವಾಸಿ ಸೈಯದ್ ಜಿಬ್ರಾನ್ (28) ಹಾಗೂ ಹೈದರಾಬಾದ್‌ನ ಪರ್ವತಮ್‌ ಹೇಮಚಂದ್ರ (42) ಬಂಧಿತರು. ಇವರಿಂದ ₹ 8.92 ಕೋಟಿ ಮೌಲ್ಯದ 12 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಏಜೆಂಟ್‌ನಾಗಿದ್ದ ಜಿಬ್ರಾನ್, ಔಡಿ, ಬೆನ್ಜ್, ರೇಂಜ್ ರೋವರ್, ಮಹೀಂದ್ರ ಥಾರ್ ಸೇರಿ ಹಲವು ಐಷಾರಾಮಿ ಕಾರುಗಳ ಮಾಲೀಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಉತ್ತಮ ಬೆಲೆಗೆ ಕಾರು ಮಾರಾಟ ಮಾಡಿಸುವುದಾಗಿ ಹೇಳಿ ಮುಂಗಡ ಹಣ ಕೊಡುತ್ತಿದ್ದ. ಮಾಲೀಕರ ನಂಬಿಕೆ ಗಳಿಸಿ ಕಾರು ತೆಗೆದುಕೊಂಡು ಹೋಗುತ್ತಿದ್ದ’ ಎಂದು ಹೇಳಿದರು.

ADVERTISEMENT

‘ಹಲವು ದಿನವಾದರೂ ಆರೋಪಿ ಬಾಕಿ ಹಣ ನೀಡುತ್ತಿರಲಿಲ್ಲ. ಕಾರು ಸಹ ವಾಪಸು ಕೊಡುತ್ತಿರಲಿಲ್ಲ. ಜಿಬ್ರಾನ್ ಕದ್ದು ತರುತ್ತಿದ್ದ ಕಾರುಗಳನ್ನು ಹೇಮಚಂದ್ರ ಖರೀದಿಸಿ, ಬೇರೆಯವರೆಗೆ ಮಾರುತ್ತಿದ್ದ’ ಎಂದು ತಿಳಿಸಿದರು.

ಉದ್ಯಮಿಗೆ ಜೀವ ಬೆದರಿಕೆ: ‘ಚೆನ್ನೈನ ಎಸ್. ರಾಜ್ ಎಂಬುವರನ್ನು ಪ್ರವೀಣ್‌ಕುಮಾರ್ ಎಂಬುವವರ ಮೂಲಕ ಆರೋಪಿ ಜಿಬ್ರಾನ್ ಪರಿಚಯ ಮಾಡಿಕೊಂಡಿದ್ದ. ರಾಜ್ ಮಾಲೀಕತ್ವದ ಸುಮಾರು ₹ 1.70 ಕೋಟಿ ಮೌಲ್ಯದ ರೇಂಜ್ ರೋವರ್ ಸ್ಪೋರ್ಟ್ಸ್ ಕಾರು ಮಾರಿಸುವುದಾಗಿ ಹೇಳಿದ್ದ. ಮುಂಗಡವಾಗಿ ₹ 18 ಲಕ್ಷ ಕೊಟ್ಟು, ಕಾರು ತೆಗೆದುಕೊಂಡು ಹೋಗಿದ್ದ’ ಎಂದು ಪ್ರತಾಪ್ ರೆಡ್ಡಿ ಹೇಳಿದರು.

‘ನಿಗದಿತ ದಿನದೊಳಗೆ ಆರೋಪಿ ಬಾಕಿ ಹಣ ನೀಡಿರಲಿಲ್ಲ. ಕಾರು ಸಹ ವಾಪಸು ಕೊಟ್ಟಿರಲಿಲ್ಲ. ಇದರಿಂದ ಬೇಸತ್ತ ರಾಜ್, ಕಾರು ವಾಪಸು ನೀಡುವಂತೆ ಆರೋಪಿಗೆ ಹೇಳಿದ್ದರು. ಕಾರು ನೀಡುವುದಿಲ್ಲವೆಂದು ಆರೋಪಿ ಜೀವ ಬೆದರಿಕೆಯೊಡ್ಡಿದ್ದ. ನೊಂದ ರಾಜ್, ಕಬ್ಬನ್‌ ಪಾರ್ಕ್‌ ಠಾಣೆಗೆ ದೂರು ನೀಡಿದ್ದರು. ಅದರ ತನಿಖೆ ಕೈಗೊಂಡಾಗಲೇ ಆರೋಪಿಗಳು ಸಿಕ್ಕಿಬಿದ್ದರು’ ಎಂದು ತಿಳಿಸಿದರು.

‘ತಮಿಳುನಾಡು, ಆಂಧ್ರಪ್ರದೇಶ, ಕೇರಳ, ತೆಲಂಗಾಣ, ಕರ್ನಾಟಕದ ಹಲವು ಕಾರು ಮಾಲೀಕರನ್ನು ಆರೋಪಿ ಗಳು ವಂಚಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ಮತ್ತಷ್ಟು ಆರೋಪಿಗಳನ್ನು ಬಂಧಿಸಲು ತನಿಖೆ ಮುಂದುವರಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.