ಬೆಂಗಳೂರು: ‘ಒಂದು ಸಮಾಜದಲ್ಲಿ ಜನರು ಬಳಸುವ ಭಾಷೆಯ ಘನತೆ ಕುಸಿದರೆ ಅದು ನಾಗರಿಕತೆಯ ಅವಸಾನದ ಸಂಕೇತ. ಜನನಾಯಕರು ತಮ್ಮ ಮಾತುಗಳ ಮೇಲೆ ಹಿಡಿತ ಹೊಂದಿರಬೇಕು. ಇಂಥವರನ್ನು ಕಂಡೇ ಕನಕದಾಸರು ನಾಲಗೆ ಕುಲವ ಅರುಹಿತು ಎಂದು ಹೇಳಿದ್ದಾರೆ’ ಎಂದು ಹೈಕೋರ್ಟ್, ಮಂಗಳೂರು ಉತ್ತರ ಕ್ಷೇತ್ರದ ಶಾಸಕ, ದಂತವೈದ್ಯ ಡಾ. ವೈ.ಭರತ್ ಶೆಟ್ಟಿ ಮಾತುಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
‘ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ನಿಂದನಾತ್ಮಕ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಬೇಕು’ ಎಂದು ಕೋರಿ ಭರತ್ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ‘ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್, ‘ಭರತ್ ಶೆಟ್ಟಿ ಯಾವುದೇ ಧರ್ಮಗಳ ಮಧ್ಯೆ ಸಂಘರ್ಷ ಉಂಟು ಮಾಡುವಂತಹ ಹೇಳಿಕೆ ನೀಡಿಲ್ಲ’ ಎಂದು ಸಮರ್ಥಿಸಿಕೊಳ್ಳಲು ಮುಂದಾದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಜನಪ್ರತಿನಿಧಿಗಳು ತಾವು ಆಡುವ ಮಾತಿನ ಮೇಲೆ ಹಿಡಿತ ಇಟ್ಟುಕೊಂಡಿರಬೇಕು. ನಾಲಗೆಯನ್ನು ಬೇಕಾಬಿಟ್ಟಿ ಹರಿಬಿಡಬಾರದು. ಇವರನ್ನೆಲ್ಲಾ ಗಮನಿಸುವ ಮಕ್ಕಳು ಭವಿಷ್ಯದಲ್ಲಿ ತಮ್ಮ ಮೇಷ್ಟ್ರು, ಪೋಷಕರ ವಿರುದ್ಧವೂ ಇಂತಹುದೇ ಭಾಷೆ ಬಳಸಲಾರಂಭಿಸುತ್ತಾರೆ. ಭಾಷೆಯನ್ನು ಯಾವತ್ತೂ ಸುಂದರವಾಗಿ ಬಳಸಬೇಕು’ ಎಂದು ಕಾಳಜಿ ವ್ಯಕ್ತಪಡಿಸಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಚಾರಣಾ ನ್ಯಾಯಾಲಯದಲ್ಲಿನ ಮುಂದಿನ ನ್ಯಾಯಿಕ ಪ್ರಕ್ರಿಯೆಗಳಿಗೆ ಮಧ್ಯಂತರ ತಡೆ ನೀಡಿದ ನ್ಯಾಯಪೀಠ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿತು.
ಪ್ರಕರಣವೇನು?: ‘ಇದೇ 8ರಂದು ಬೆಳಿಗ್ಗೆ ಕಾವೂರು ಜಂಕ್ಷನ್‌ನಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಭರತ್ ಶೆಟ್ಟಿ ಬಾಷಣ ಮಾಡಿದ್ದರು. ರಾಹುಲ್ ಗಾಂಧಿ ಒಬ್ಬ ಹುಚ್ಚ. ಅವನನ್ನು ಸಂಸತ್‌ನಿಂದ ಹೊರಹಾಕಬೇಕು. ಆತನ ಮಾತಿನ ಶೈಲಿ ನೋಡಿದರೆ ಹಿಂದೂ ಆದ ನಾನು ಲೋಕಸಭೆಗೆ ಹೋಗಿ ಕೆನ್ನೆಗೆ ಎರಡು ಹೊಡೆಯಬೇಕು ಎನಿಸುತ್ತದೆ. ಹಿಂದುತ್ವದ ವಿಚಾರ ಮಾತನಾಡಿದರೆ ಶಸ್ತ್ರಾಸ್ತ್ರ ಉಪಯೋಗಿಸಿ ಯಾವುದೇ ಹೋರಾಟಕ್ಕೂ ಸಿದ್ಧರಿದ್ದೇವೆ...’ ಎಂದು ಸುದೀರ್ಘ ಭಾಷಣ ಮಾಡಿದ್ದಾಗಿ ಆರೋಪಿಸಲಾಗಿತ್ತು.
ಈ ಸಂಬಂಧ ಮಂಗಳೂರಿನ ಅನಿಲ್ ಕುಮಾರ್, ಕಾವೂರು ಠಾಣೆಗೆ ದೂರು ನೀಡಿದ್ದರು. ದೂರನ್ನು ಆಧರಿಸಿ, ಭರತ್ ಶೆಟ್ಟಿ ಮತ್ತು ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 351 (3) (ಕ್ರಿಮಿನಲ್ ಬೆದರಿಕೆ), 353 (ಪ್ರಚೋದನೆ) ಅಡಿ ಎಫ್ಐಆರ್ ದಾಖಲಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.