ಬೆಂಗಳೂರು: ಎಂಟನೇ ತರಗತಿ ಪಾಸ್ ಆಗಿರುವ ನನಗೆ ಉನ್ನತ ಶಿಕ್ಷಣ ಬೇಡ’ ಎಂದು ಕ್ಯಾತೆ ತೆಗೆದಿದ್ದ ಸಚಿವ ಜಿ.ಟಿ. ದೇವೇಗೌಡ ಕೊನೆಗೂ ಅದೇ ಖಾತೆಯನ್ನು ಒಪ್ಪಿಕೊಂಡಿದ್ದಾರೆ.
ಶುಕ್ರವಾರ ಬೆಳಿಗ್ಗೆ ಅವರು ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಸಿ.ಎಂ ಸಚಿವಾಲಯ ತಿಳಿಸಿದೆ.
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಎರಡು ದಿನಗಳ ಬಳಿಕ ಖಾತೆ ಹಂಚಿಕೆ ಮಾಡಲಾಗಿತ್ತು. ಅದಾದ ಮರುದಿನವೇ ಉನ್ನತ ಶಿಕ್ಷಣ ಬೇಡ; ಇಂಧನ ಖಾತೆಯನ್ನೇ ನೀಡಿ ಎಂದು ದೇವೇಗೌಡ ಪಟ್ಟು ಹಿಡಿದಿದ್ದರು.
ಅದೇ ಖಾತೆಯನ್ನು ಒಪ್ಪಿಕೊಳ್ಳಿ ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದರು. ಆದರೂ ಗೌಡರು ಬಗ್ಗಿರಲಿಲ್ಲ. ‘ಉನ್ನತ ಶಿಕ್ಷಣ ಮಹತ್ವದ ಖಾತೆ ಎಂಬುದು ಅವರಿಗೆ ಮನವರಿಕೆಯಾಗಿದೆ. ಖಾತೆ ನಿಭಾಯಿಸುವುದಾಗಿ ಮುಖ್ಯಮಂತ್ರಿಗೆ ಜಿ.ಟಿ ದೇವೇಗೌಡ ತಿಳಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.