ADVERTISEMENT

ಹಿಜಾಬ್ ವಿವಾದ: ಕರ್ನಾಟಕ ಹೈಕೋರ್ಟ್ ತೀರ್ಪು ಸಂವಿಧಾನಕ್ಕೆ ವಿರುದ್ಧ ಎಂದ ಸಿಎಫ್‌ಐ

ಐಎಎನ್ಎಸ್
Published 15 ಮಾರ್ಚ್ 2022, 16:02 IST
Last Updated 15 ಮಾರ್ಚ್ 2022, 16:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಶಾಲಾ, ಕಾಲೇಜು ತರಗತಿಗಳಲ್ಲಿ ಹಿಜಾಬ್‌ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ಕರ್ನಾಟಕ ಹೈಕೋರ್ಟ್‌ನ ತೀರ್ಪು ಸಂವಿಧಾನಕ್ಕೆ ವಿರುದ್ಧವಾದುದು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಅಧ್ಯಕ್ಷ ಅತಾವುಲ್ಲಾ ಪುಂಜಾಲಕಟ್ಟೆ ಹೇಳಿದ್ದಾರೆ.

ನ್ಯಾಯಾಲಯದ ಆದೇಶವನ್ನು ವಿರೋಧಿಸಿರುವ ಅವರು, 'ಹಿಜಾಬ್ ಹಕ್ಕಿಗಾಗಿ ಹೋರಾಡುತ್ತಿರುವ ಆರು ಜನ ವಿದ್ಯಾರ್ಥಿನಿಯರಿಗೆ ನಾವು ಬೆಂಬಲವನ್ನು ಮುಂದುವರಿಸುತ್ತೇವೆ. ತರಗತಿಗಳಿಗೆ ಹಾಜರಾಗಬೇಕೆ ಅಥವಾ ಬೇಡವೇ ಎನ್ನುವುದು ಆ ಮಕ್ಕಳಿಗೆ ಬಿಟ್ಟದ್ದು. ಈ ಕುರಿತು ಅವರ ಪೋಷಕರು ನಿರ್ಧಾರ ತೆಗೆದುಕೊಳ್ಳಬೇಕು' ಎಂದಿದ್ದಾರೆ.

'ಹಿಜಾಬ್ ವಿವಾದ ಭುಗಿಲೇಳುತ್ತಿದ್ದಂತೆ ಸಿಎಫ್‌ಐ ರಾಜ್ಯದ 21 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿತ್ತು. ಸುಮಾರು 11 ಸಾವಿರ ಬಾಲಕಿಯರನ್ನು ಶಿಕ್ಷಣದಿಂದ ಹೊರಗಿಡಲಾಗಿದೆ. ಮಹಿಳೆಯರು ಮುಖವನ್ನು ಮುಚ್ಚಿಕೊಳ್ಳಬೇಕೆಂದು ಕುರಾನ್‌ನಲ್ಲಿ ಹೇಳಲಾಗಿದೆ. ವೈಯಕ್ತಿಕ ಹಕ್ಕುಗಳನ್ನು ರಕ್ಷಿಸಬೇಕಿದೆ. ಸರ್ಕಾರ ವಿಶಾಲ ಮನೋಭಾವವನ್ನು ಹೊಂದಿರಬೇಕು. ಇದು 'ಬೇಟಿ ಬಚಾವೋ ಬೇಟಿ ಪಡಾವೋ'' ನೀತಿಗೆ ವಿರುದ್ಧವಾಗಿದೆ ಎಂದು ದೂರಿದ್ದಾರೆ.

ADVERTISEMENT

ಈ ಮಧ್ಯೆ, ಯಾದಗಿರಿ ಜಿಲ್ಲೆಯ ಕೆಂಭಾವಿಯಲ್ಲಿ 35 ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಪರೀಕ್ಷೆಗೆ ಕುಳಿತುಕೊಳ್ಳಲು ನಿರಾಕರಿಸಿದ್ದಾರೆ. ಅವರನ್ನು ವಾಪಸ್ ಕಳುಹಿಸಲಾಗಿದೆ.

ಹೈಕೋರ್ಟ್ ತೀರ್ಪಿಗೆ ವಕ್ಫ್ ಮಂಡಳಿ ವಿರೋಧ

ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಶಫಿ ಅಸ್ಸಾದಿ ಮಾತನಾಡಿ, 'ಸಮುದಾಯದ ಮುಖಂಡರೊಂದಿಗೆ ಚರ್ಚೆ ನಡೆಸುತ್ತಿದ್ದೇನೆ. ಹೈಕೋರ್ಟ್‌ನ ವಿಶೇಷ ಪೀಠದಲ್ಲಿ ಮುಸ್ಲಿಂ ನ್ಯಾಯಾಧೀಶರಿದ್ದರು. ಹೀಗಿದ್ದರೂ, ಅವರು ಹಿಜಾಬ್ ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಲ್ಲ ಎಂಬ ತೀರ್ಮಾನಕ್ಕೆ ಹೇಗೆ ಬರುತ್ತಾರೆ. ನ್ಯಾಯಾಲಯದ ತೀರ್ಪು ಸ್ವೀಕಾರಾರ್ಹವಲ್ಲ ಮತ್ತು ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುತ್ತದೆ' ಎಂದರು.

ಈ ತೀರ್ಪು ವಿದ್ಯಾರ್ಥಿಗಳ ನಡುವೆ ಬಿರುಕು ಮೂಡಿಸುತ್ತದೆ ಮತ್ತು ಸಮಗ್ರತೆಗೆ ಸವಾಲು ಎಸೆಯುತ್ತದೆ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.

ಧಾರ್ಮಿಕ ಹಕ್ಕು ಸಾಂವಿಧಾನಿಕವಾಗಿದ್ದರೂ ಕೂಡ ಒಂದು ಸಮುದಾಯವನ್ನು ಗುರಿಯಾಗಿಸಲಾಗಿದೆ. ತ್ರಿವಳಿ ತಲಾಖ್, ಧಾರ್ಮಿಕ ಮತಾಂತರ ಮತ್ತು ಗೋಹತ್ಯೆ ಕುರಿತ ಕಾನೂನುಗಳ ಸರಣಿಗಳು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡಿವೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.