ಬೆಂಗಳೂರು: ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ಕುರಿತಂತೆ ತೀರ್ಪು ನೀಡಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿದ ಆರೋಪದಡಿ ತಮಿಳುನಾಡಿನ ಇಬ್ಬರು ಆರೋಪಿಗಳ ವಿರುದ್ಧದ ಪ್ರಕರಣದಲ್ಲಿ; ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಯ ಆಂಗ್ಲ ಭಾಷೆಯ ಅನುವಾದಿತ ಪ್ರತಿಗಳನ್ನು ಒದಗಿಸುವಂತೆ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಸಂಬಂಧ ಪ್ರಕರಣದ ಆರೋಪಿಗಳಾದ ಆರ್.ರಹಮತ್‌ಉಲ್ಲಾ ಮತ್ತು ಜಮಾಲ್ ಮೊಹಮ್ಮದ್ ಉಸ್ಮಾನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ವೇಲನ್, ‘ನಮ್ಮ ಕಕ್ಷಿದಾರರಿಗೆ ಕನ್ನಡ ಭಾಷೆ ಅರ್ಥವಾಗುವುದಿಲ್ಲ, ಓದಲು ಅಥವಾ ಬರೆಯಲೂ ಬರುವುದಿಲ್ಲ. ಆದ್ದರಿಂದ, ಆಂಗ್ಲ ಭಾಷೆಗೆ ಅನುವಾದಿಸಲಾದ ಪ್ರತಿಗಳನ್ನು ಒದಗಿಸಬೇಕು’ ಎಂದು ಮನವಿ ಮಾಡಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ದೋಷಾರೋಪ ಪಟ್ಟಿಯ ಭಾಷಾಂತರ ಪ್ರತಿಗಳು ಮತ್ತು ದೋಷಾರೋಪ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿರುವ ವಿಷಯಗಳನ್ನು ಅರ್ಜಿದಾರರ ಪರ ವಕೀಲರಿಗೆ ಆಂಗ್ಲ ಭಾಷೆಯಲ್ಲಿ ಒದಗಿಸಿ’ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ಅರ್ಜಿ ವಿಲೇವಾರಿ ಮಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.