ADVERTISEMENT

ಹಿಂದಿ ಹೇರಿಕೆ: ನಮ್ಮ ನೆಲದಲ್ಲಿ ನಾವೇಕೆ ಇಂಥ ಪಾಡು ಅನುಭವಿಸಬೇಕು

ಸ್ಥಳೀಯರು ಪಡುತ್ತಿರುವ ಪಾಡೇನು?

ಆರ್‌.ಜೆ.ಯೋಗಿತಾ
Published 13 ಸೆಪ್ಟೆಂಬರ್ 2019, 4:31 IST
Last Updated 13 ಸೆಪ್ಟೆಂಬರ್ 2019, 4:31 IST
   

ರಾಷ್ಟ್ರೀಯ ಭಾಷೆ ಎಂದು ಹೇಳುತ್ತಾ, ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸಿಹಿಂದಿ ಹೇರಿಕೆ ನಡೆಯುತ್ತಿದೆ. ಇದರಿಂದಸ್ಥಳೀಯರು ವಿವಿಧ ಸೇವೆಗಳನ್ನು ಪಡೆಯುವಲ್ಲಿಅನುಭವಿಸುತ್ತಿರುವ ತೊಂದರೆ ಬಗ್ಗೆ ಈ ವರದಿಯಲ್ಲಿ ಬೆಳಕು ಚೆಲ್ಲಲಾಗಿದೆ.

---

‘ನನ್ನ ಚೆಕ್‌ಬುಕ್‌ ಮುಗಿದು ಹೋಗಿದೆ.. ಹೊಸ ಚೆಕ್‌ಬುಕ್‌ ಬೇಕು'ಎಂದು ಕೆನರಾ ಬ್ಯಾಂಕ್‌ ಕೌಂಟರ್‌ನಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರು ಅಲ್ಲಿನ ಸಿಬ್ಬಂದಿಯನ್ನು ಕೇಳುತ್ತಿದ್ದರು.

ADVERTISEMENT

ಅದಕ್ಕೆ ಆ ಸಿಬ್ಬಂದಿ, ‘ಹಿಂದಿ ಔರ್‌ ಇಂಗ್ಲಿಷ್‌ ಮೇ ಬೊಲಿಯೇ’ ಎಂದರು. 'ನಹಿ... ನಹಿ...' ಎನ್ನುತ್ತಾ ಆ ವ್ಯಕ್ತಿ ಸಹಾಯಕ್ಕಾಗಿ ಯಾರಾದರು ಸಿಗುತ್ತಾರೆಯೇ ಎಂದು ಸುತ್ತಲೂ ಕಣ್ಣಾಡಿಸಿದರು.

ಇದನ್ನು ನೋಡಿದ ಸಿಬ್ಬಂದಿ ಅವರ ಹಿಂದೆಯೇ ಇದ್ದ ಯುವಕನ ಬಳಿ ‘ಇಲ್ಲಿ ಕೆಲಸಕ್ಕೆ ಸೇರಿ ಕೆಲವು ತಿಂಗಳಷ್ಟೇ ಆಗಿದೆ. ಕನ್ನಡ ಬರುವುದಿಲ್ಲ. ಅವರು ಹೇಳಿದ್ದನ್ನು ಹಿಂದಿಯಲ್ಲಿ ವಿವರಿಸಲು ಸಾಧ್ಯವಾ?’ ಎಂದು ಹಿಂದಿಯಲ್ಲಿಯೇಉಸುರಿದರು. ಸರಿ ಎಂದ ಆ ಯುವಕ ಇಂಗ್ಲಿಷ್‌ನಲ್ಲಿ ಚೆಕ್‌ಬುಕ್‌ ಬೇಕೆಂದು ಹೇಳಿ, ಅವರಿಗೆ ನೆರವಾದ. ಅರ್ಜಿ ಭರ್ತಿ ಮಾಡಿ ಕೊಟ್ಟು ಹೊರಗೆ ಹೋಗುವಷ್ಟರಲ್ಲಿ ಎಸಿಯಲ್ಲಿಯೂ ಆ ಹಿರಿಯರು ಬೆವರಿ ಹೋಗಿದ್ದರು.

ಭಾಷೆಯ ತೊಡಕು, ಅರ್ಥವಾದ ಅರ್ಜಿಗಳು, ಗ್ರಾಹಕರಿಗೆ ಇರಿಸುಮುರಿಸು ಉಂಟು ಮಾಡುವಸಿಬ್ಬಂದಿಯ ವರ್ತನೆ ಸೇರಿದಂತೆ ಹಲವು ಕಾರಣಗಳಿಂದಬ್ಯಾಂಕ್‌ ವ್ಯವಹಾರಗಳು ಈಗಲೂ ಅನೇಕರಿಗೆ ಕಬ್ಬಿಣದ ಕಡಲೆಯೇ ಆಗಿವೆ. ಆರ್‌ಬಿಐ ಗ್ರಾಹಕ ಸೇವೆ ಮಾಸ್ಟರ್ ಸುತ್ತೋಲೆ ನಿಯಮದ ಪ್ರಕಾರ ಬ್ಯಾಂಕ್‌ನ ಎಲ್ಲ ವ್ಯವಹಾರಗಳು ಸ್ಥಳೀಯ ಭಾಷೆಯಲ್ಲಿ ನಡೆಯಬೇಕಾದ್ದು ಕಡ್ಡಾಯ. ಆದರೆ ಕರ್ನಾಟಕದ ವಾಸ್ತವ ಸ್ಥಿತಿ ಹೇಗಿದೆ?

ಅನಕ್ಷರಸ್ಥರಿಗಷ್ಟೇ ಅಲ್ಲ, ಹಿಂದಿ ಗೊತ್ತಿಲ್ಲದ,ಇಂಗ್ಲಿಷ್‌ ಸುಲಲಿತವಾಗಿ ಮಾತನಾಡಲು ಬಾರದವರಷ್ಟೇ ಅಲ್ಲ,ಬ್ಯಾಂಕ್‌ ವ್ಯವಹಾರಗಳ ಬಗ್ಗೆ ಕನಿಷ್ಠ ಜ್ಞಾನ ಹೊಂದಿರುವವರಿಗೂ ಅಲ್ಲಿ ವ್ಯವಹರಿಸುವುದು ಕಷ್ಟ ಎನ್ನುವೇಅನೇಕರ ಅಭಿಪ್ರಾಯ. ‌ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ‘ಕನ್ನಡ್ಗೊತ್ತಿಲ್ಲ’ ಎನ್ನುವ ಉತ್ತರ ಭಾರತ, ತಮಿಳುನಾಡು, ಕೇರಳ ಮೂಲದವರೇ ಹೆಚ್ಚಾಗಿದ್ದಾರೆ.

‘ಭಾಷೆ ಗೊತ್ತಿಲ್ಲದ, ತಾಳ್ಮೆ ಇಲ್ಲದ ಈ ಬ್ಯಾಂಕ್‌ ಸಿಬ್ಬಂದಿಯೊಂದಿಗೆ ವ್ಯವಹರಿಸುವಷ್ಟರಲ್ಲಿ ಸಾಕಾಗಿ ಹೋಗುತ್ತದೆ. ಬ್ಯಾಂಕ್‌ ಹೋಗುವುದನ್ನು ಆದಷ್ಟು ತಪ್ಪಿಸಿಕೊಳ್ಳುತ್ತೇನೆ. ಆದರೆ, ಕೆಲವೊಂದಕ್ಕೆ ಹೋಗಲೇ ಬೇಕಾದ ಸ್ಥಿತಿಬರುತ್ತದೆ’ ಎನ್ನುತ್ತಾರೆ ಗೃಹಿಣಿ ಸುಜಾತಾ.

ನಗರದ ಪ್ರದೇಶದಲ್ಲಿರುವವರ ಪಾಡೇ ಹೀಗಾದರೆ ಇನ್ನೂ ಗ್ರಾಮೀಣ ಪ್ರದೇಶದಲ್ಲಿರುವವರ ಕಥೆ ಹೇಳತೀರದಂತಿದೆ. ಬ್ಯಾಂಕ್‌ ಪಾಸ್‌ ಬುಕ್‌, ಎಟಿಎಂ ಕಾರ್ಡ್‌, ಚೆಕ್‌ಬುಕ್‌, ಸಾಲ ಪಡೆಯಲು, ತೀರಿಸಲು, ಒಡವೆ ಅಡವಿಡಲು, ಸರ್ಕಾರದಿಂದ ಬರುವ ಪಿಂಚಣಿ... ಹೀಗೆ ಯಾವುದೇ ಬ್ಯಾಂಕ್‌ ಸೇವೆ ಪಡೆಯಲು ಗ್ರಾಮೀಣ ಜನರು ಭಾಷೆಯ ಕಾರಣದಿಂದಪರದಾಡುವಂತಾಗಿದೆ. ಕನ್ನಡದಲ್ಲಿ ವ್ಯವಹರಿಸುವುದೂ ಗ್ರಾಹಕ ಸ್ನೇಹಿಯಾಗಿರುವುದರ ಲಕ್ಷಣ ಎಂದು ಬ್ಯಾಂಕ್‌ಗಳ ಆಡಳಿತ ಮಂಡಳಿಗಳಿಗೆ ಅರ್ಥವಾಗುವುದು ಎಂದು?

ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್‌ ವ್ಯವಹಾರ ಅರಿತ, ಆರ್ಥಿಕ ಸಾಕ್ಷರರ ಸಂಖ್ಯೆ ಕಡಿಮೆಯೇ. ಅಲ್ಲಿಯೂ ಕನ್ನಡ ಬಾರದ ಸಿಬ್ಬಂದಿಯನ್ನು ಕೂರಿಸಿ, ಬ್ಯಾಂಕ್‌ ವ್ಯವಹಾರಗಳನ್ನು ನಡೆಸಲು ಮಕ್ಕಳನ್ನೋ, ಕಲಿತವರನ್ನೋ ಅವಲಂಬಿಸುವಂತೆ ಮಾಡಿದೆ. ಈಗಲೂ ಅನೇಕ ಹಳ್ಳಿಗಳಲ್ಲಿ ಬ್ಯಾಂಕ್‌ಗಳ ಮುಂದೆ ಚಲನ್‌ ತುಂಬಲು ಯಾರಾದರೂ ಸಿಗುತ್ತಾರೊ ಎಂದು ಕೈಕಟ್ಟಿ ಕಾಯುವವರನ್ನು ನಾವು ಕಾಣುತ್ತೇವೆ.

'ನಾವು ಶಾಲೆ ಕಲಿತಿಲ್ಲ. ರೈತರಿಗಾಗಿ ಸರ್ಕಾರ ನೀಡುವ ಹಣಕಾಸು ಯೋಜನೆಗಳನ್ನು ಬ್ಯಾಂಕ್‌ಗಳ ಮೂಲಕವೇ ಪಡೆಯಬೇಕು. ಅಲ್ಲಿ ಹೋಗಿ ಅರ್ಜಿಗಳನ್ನು ಭರ್ತಿ ಮಾಡಲು ನಮಗೆ ಕಷ್ಟ. ಬ್ಯಾಂಕ್‌ ಸಿಬ್ಬಂದಿಯನ್ನು ಕೇಳುವ ಎಂದರೆ, ಅಲ್ಲಿ ಕನ್ನಡ ತಿಳಿದವರು ಇರುವುದೇ ಒಂದಿಬ್ಬರು. ಅವರು ಎಷ್ಟು ಜನಕ್ಕೆ ಅಂತ ಸಹಾಯ ಮಾಡುತ್ತಾರೆ. ಗ್ರಾಮೀಣ ಭಾಗದಲ್ಲಿ ಕನ್ನಡ ತಿಳಿದ ಸಿಬ್ಬಂದಿಯನ್ನೇ ನಿಯೋಜಿಸಬೇಕು’ ಎಂದು ರೋಣದ ರೈತ ಶರಣಪ್ಪ ಆಗ್ರಹಿಸಿದರು.

‘ಇತ್ತೀಚೆಗೆ ಐಬಿಪಿಎಸ್‌ ಬ್ಯಾಂಕ್‌ ನೇಮಕಾತಿ ಪರೀಕ್ಷೆಯನ್ನುಕನ್ನಡದಲ್ಲಿ ಬರೆಯುವ ಅವಕಾಶವನ್ನು ನೀಡಿದೆ. ಇದು ಇತರ ಬ್ಯಾಂಕ್‌ಗಳಿಗೂ ಮಾದರಿಯಾಗಬೇಕು. ಅನಂತರವಾದರೂ ಗ್ರಾಮೀಣ ಜನರು ಕನ್ನಡೇತರ ಬ್ಯಾಂಕ್‌ ಸಿಬ್ಬಂದಿಯ ಜೊತೆಗೆ ಹೆಣಗಾಡುವುದು ತಪ್ಪುತ್ತದೆಯೇ ನೋಡಬೇಕು’ ಎಂದು ನಿವೃತ್ತ ಪೊಲೀಸ್‌ ಅಧಿಕಾರಿ ಸತ್ಯನಾರಾಯಣ ತಿಳಿಸಿದರು.

ಉದ್ಯೋಗದಲ್ಲಿ ಅನುಸರಿಸಬೇಕಾದ ಭಾಷೆಯ ನಿಯಮಗಳು ಎಷ್ಟರಮಟ್ಟಿಗೆ ಪಾಲನೆಯಾಗುತ್ತಿವೆ?

ಒಕ್ಕೂಟ ವ್ಯವಸ್ಥೆಯಲ್ಲಿ ಭಾಷಾವಾರು ಆಧಾರದಲ್ಲಿ ವಿಭಜನೆಗೊಂಡ ರಾಜ್ಯಗಳ ಜನರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕೆಂಬ ಕಾನೂನಿದೆ. ವಿವಿಧ ರಾಜ್ಯಗಳು ತಮ್ಮದೆಯಾದ ಉದ್ಯೋಗ ನೀತಿಗಳನ್ನು ಮಾಡಿಕೊಂಡಿವೆ.

ರಾಜ್ಯದಲ್ಲಿ ಕನ್ನಡಿಗರ ಉದ್ಯೋಗಕ್ಕೆ ಸಂಬಂಧಿಸಿದಂತೆ ಸುಮಾರು 30 ವರ್ಷಗಳ ಹಿಂದೆ ಸರೋಜಿನಿ ಮಹಿಷಿ ಅವರು ವರದಿ ಸಲ್ಲಿಸಿದ್ದರು. ದೂಳು ಹಿಡಿದಿದ್ದ ಈ ವರದಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಎಸ್.ಜಿ. ಸಿದ್ದರಾಮಯ್ಯ ನೇತೃತ್ವದ ಸಮಿತಿ 14 ಪ್ರಮುಖ ಶಿಫಾರಸುಗಳನ್ನು ಮಾಡಿ 2018ರಲ್ಲಿ ಸರ್ಕಾರಕ್ಕೆ ಸಲ್ಲಿಸಿತ್ತು. ಆ ಶಿಫಾರಸುಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಅನುಷ್ಠಾನಕ್ಕೆ ತರಲಾಗಿದೆ.

ಸರೋಜಿನಿ ಮಹಿಷಿ ವರದಿಯಲ್ಲಿ ಏನಿದೆ?

ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯಲ್ಲಿ ಒಟ್ಟು ಮೂರು ಭಾಗಗಳಿವೆ. ಮೊದಲ ಭಾಗದಲ್ಲಿ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಬೇಕಾದ ಅಂಶಗಳ 14 ಶಿಫಾರಸುಗಳಿವೆ. ಎರಡನೇ ಭಾಗದಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾಗಿರುವ ಸಲಹೆಗಳ ಒಂಬತ್ತು ಅಂಶಗಳನ್ನು ಒಳಗೊಂಡ ಶಿಫಾರಸುಗಳಿವೆ. ಮೂರನೇ ಭಾಗದಲ್ಲಿ ಡಾ. ಸರೋಜಿನಿ ಮಹಿಷಿ ವರದಿಯ ಸಂಪೂರ್ಣ ಶಿಫಾರಸುಗಳ ಮಾಹಿತಿ ಇದೆ.

ವರದಿಯಲ್ಲಿನ ಪ್ರಮುಖ ಶಿಫಾರಸುಗಳು

* ಐ.ಟಿ, ಬಿ.ಟಿ ಸೇರಿದಂತೆ ಎಲ್ಲ ಖಾಸಗಿ ವಲಯದಲ್ಲಿ ‘ಸಿ’, ‘ಡಿ’ ವರ್ಗದ ಹುದ್ದೆಗಳಲ್ಲಿ ಶೇ 100ರಷ್ಟು ಮತ್ತು ಉನ್ನತ ಹುದ್ದೆಗಳಲ್ಲಿ ಶೇ 80ರಷ್ಟು ಕನ್ನಡಿಗರಿಗೆ ಮೀಸಲಿಡಬೇಕು.

*ರಾಜ್ಯದಲ್ಲಿರುವ ಸರ್ಕಾರಿ ವಲಯದ ಉದ್ಯಮಗಳಲ್ಲಿ ಎಲ್ಲ ಹುದ್ದೆಗಳಿಗೆ ಕನ್ನಡಿಗರನ್ನೇ ಆಯ್ಕೆ ಮಾಡಬೇಕು.

*ನೂರಕ್ಕೂ ಹೆಚ್ಚು ನೌಕರರಿರುವ ಉದ್ಯಮಗಳಲ್ಲಿ ನೇಮಕಾತಿ ಆಯ್ಕೆ ಸಮಿತಿಯಲ್ಲಿ ರಾಜ್ಯ ಸರ್ಕಾರದ ಕನ್ನಡ ಪ್ರತಿನಿಧಿ ಇರಬೇಕು.

*ಕನ್ನಡದಲ್ಲಿ ‘ಉದ್ಯೋಗ ವಾರ್ತೆ’ ಪ್ರಕಟಿಸಬೇಕು.

*ಐ.ಸಿ.ಎಸ್‌.ಸಿ, ಸಿ.ಬಿ.ಎಸ್‌.ಇ, ಕೇಂದ್ರೀಯ ವಿದ್ಯಾಲಯ ಸೇರಿದಂತೆ ಎಲ್ಲ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ 10ನೇ ತರಗತಿವರೆಗೆ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಕಡ್ಡಾಯ ಮಾಡಬೇಕು.

*ರಾಷ್ಟ್ರೀಯ ಉದ್ಯೋಗ ನೀತಿ ರೂಪಿಸಲು ಎಲ್ಲ ಮುಖ್ಯಮಂತ್ರಿಗಳ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಆಗ್ರಹಿಸಬೇಕು.

*ಕೇಂದ್ರ ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಎಲ್ಲ ಭಾಷೆಗಳಲ್ಲೂ ನಡೆಸುವಂತೆ ಕೇಂದ್ರ ಹಣಕಾಸು ಸಚಿವರನ್ನು ಒತ್ತಾಯಿಸಬೇಕು.

ಮೇ 24ರಂದು ಕುಮಾರಸ್ವಾಮಿ ನೇತೃತ್ವದ ಸರ್ಕಾರ ಕರ್ನಾಟಕ ಕೈಗಾರಿಕ ಉದ್ಯೋಗಗಳ ಅಧಿನಿಯಮಕ್ಕೆ ತಿದ್ದುಪಡಿ ತಂದು ಅಧಿಸೂಚನೆ ಹೊರಡಿಸಿತ್ತು. ಪರಿಷ್ಕೃತ ವರದಿಯಲ್ಲಿ ನೀಡಿದ್ದ ಅಂಶಗಳನ್ನು ಬದಲಿಸಿದೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಅನೇಕರು ಆಕ್ಷೇಪಿಸಿದ್ದಾರೆ.

ರಾಜ್ಯ ಸರ್ಕಾರದ ಅಧೀನದ ಉದ್ಯಮಗಳ ಎಲ್ಲ ಹುದ್ದೆಗಳಿಗೂ ಕನ್ನಡಿಗರ ಆಯ್ಕೆ ಕಡ್ಡಾಯ. ಅನಿವಾರ್ಯ ಸಂದರ್ಭದಲ್ಲಿ ಹೊರರಾಜ್ಯದವರನ್ನು ನೇಮಿಸುವುದಿದ್ದರೆ ಸರ್ಕಾರದ ಅನುಮತಿ ಪಡೆದಿರಬೇಕು. ಖಾಸಗಿ ಬ್ಯಾಂಕ್‌ಗಳಲ್ಲಿ ಗುಮಾಸ್ತರನ್ನು ನೇಮಿಸುವಾಗ ಎಸ್‌ಬಿಐ ಮಾದರಿ ಅನುಸರಿಸಬೇಕು. ಅಂದರೆ ಕನ್ನಡ ಭಾಷಾ ಜ್ಞಾನ ಕಡ್ಡಾಯಗೊಳಿಸಲು ರಾಜ್ಯಭಾಷಾ ಪರೀಕ್ಷೆ ನಡೆಸಬೇಕು. 10ನೇ ತರಗತಿಯಲ್ಲಿ ರಾಜ್ಯಭಾಷೆಯನ್ನು ಒಂದು ಭಾಷೆಯಾಗಿ ಅಭ್ಯಸಿಸಿ ಪಾಸಾದವರಿಗೆ ಈ ಪರೀಕ್ಷೆಯಿಂದ ವಿನಾಯಿತಿ ನೀಡಬೇಕು ಎಂಬ ಶಿಫಾರಸು ವರದಿಯಲ್ಲಿತ್ತು. ಆದರೆ, ಈ ಎಲ್ಲಾ ನೀತಿಗಳು ಸಂಪೂರ್ಣವಾಗಿ ಪಾಲನೆಯಾಗುತ್ತಿಲ್ಲ ಎಂಬುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪದೇ ಪದೇ ಭುಗಿಲೇಳುವ ‘ಕನ್ನಡಿಗರಿಗೆ ಉದ್ಯೋಗ ನೀಡಿ’ ಎನ್ನುವ ಕೂಗೇ ಸಾಕ್ಷಿ.

ಇವರು ತುಸು ಪರವಾಗಿಲ್ಲ

ರೈಲಿನಲ್ಲಿ ಪ್ರಯಾಣಿಸುವವರಿಗೆ ಟಿ.ಸಿ ಎಂದೊಡನೇ ಕಣ್ಣಮುಂದೆ ಬರುವವರು ಉತ್ತರ ಭಾರತದವರೆ. ರೈಲ್ವೆಯಲ್ಲಿ ಈಗ ಸಾಕಷ್ಟು ಬದಲಾವಣೆಗಳು ಆಗಿರುವುದರಿಂದ ಟಿ.ಸಿಗಳೊಂದಿಗೆ ಮಾತನಾಡುವ ಪ್ರಮೇಯ ತಗ್ಗಿದೆ. ಕೆಲ ತಿಂಗಳುಗಳ ಹಿಂದೆ ಕಾಯ್ದಿರಿಸಿದ ಸೀಟುಗಳಿಗೆ ರೈಲು ಹೊರಡುವ ಅರ್ಧ ತಾಸಿಗೂಮುನ್ನ ಹೆಸರುಗಳ ಚಾರ್ಟ್‌ ಅಂಟಿಸುತ್ತಿದ್ದರು. ಅದರಲ್ಲಿ ಖಾಲಿಯಿರುವ ಸೀಟುಗಳ ಬಗ್ಗೆ ವಿಚಾರಿಸಲು ಟಿ.ಸಿಗಳೊಂದಿಗೆ ಮಾತನಾಡುವ ಸಂದರ್ಭ ಹೆಚ್ಚಿತ್ತು. ಈಗ ಇಲ್ಲವೆಂದಲ್ಲ, ಆ ಪ್ರಮಾಣ ಕಡಿಮೆ.

‘ಬ್ಯಾಂಕ್‌ ಸಿಬ್ಬಂದಿಯಂತೆ ಇವರು ದರ್ಪ ತೋರಿಸುವುದಿಲ್ಲ. ಹಾಗಾಗಿ ಅವರೊಡನೆ ಸಂಭಾಷಣೆ ಕಷ್ಟವಾಲ್ಲ. ತೀರಾ ಅರ್ಥವಾಗದಿದ್ದರೆ, ರೈಲಿನಲ್ಲಿರುವ ಸಹ ಪ್ರಯಾಣಿಕರು ನೆರವು ನೀಡುತ್ತಾರೆ. ಹೀಗಾಗಿ ಟಿ.ಸಿಗಳ ಹಿಂದಿ ಸಂಭಾಷಣೆ ತೊಡಕು ಎನಿಸಿಲ್ಲ’ ಎನ್ನುವುದು ಅನೇಕ ಪ್ರಯಾಣಿಕರ ಮಾತು.

ಒಂದು ಕಾಲದಲ್ಲಿ ರೈಲ್ವೆ ಇಲಾಖೆಯಲ್ಲಿ ಕನ್ನಡಿಗರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಜಾಫರ್ ಷರೀಫ್‍ ಅವರು ರೇಲ್ವೆ ಸಚಿವರಾದ ನಂತರ ಪರಿಸ್ಥಿತಿ ಸುಧಾರಿಸಿತ್ತು. ಕೇಂದ್ರದ ಹುದ್ದೆಗಳಲ್ಲಿಭಾಷೆಯ ಕಾರಣಕ್ಕಾಗಿಯೇ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ಹಿಂದಿ ರಾಷ್ಟ್ರೀಯ ಭಾಷೆ ಎಂಬ ಮೀಥ್ಯೆವನ್ನು ಬಿತ್ತಿ, ಕೇಂದ್ರದ ಹುದ್ದೆಗಳ ಲಿಖಿತ ಪರೀಕ್ಷೆಗಳನ್ನು ಹಿಂದಿಯಲ್ಲಿ ಬರೆಯಲು ಅವಕಾಶ ನೀಡಲಾಗಿದೆ. ಇದರಿಂದಪ್ರಾದೇಶಿಕ ಭಾಷಿಗರು ಅವಕಾಶ ವಂಚಿತರಾಗಿದ್ದಾರೆ ಎಂದು ಕನ್ನಡ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.