ADVERTISEMENT

ಹಿಂದಿ ಹೇರಿಕೆಗೆ ಖಂಡನೆ: ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಟ್ವಿಟರ್ ಅಭಿಯಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಸೆಪ್ಟೆಂಬರ್ 2021, 1:13 IST
Last Updated 14 ಸೆಪ್ಟೆಂಬರ್ 2021, 1:13 IST
ಟಿ.ಎ.ನಾರಾಯಣಗೌಡ ಅವರ ಫೇಸ್‌ಬುಕ್ ಪೋಸ್ಟ್‌
ಟಿ.ಎ.ನಾರಾಯಣಗೌಡ ಅವರ ಫೇಸ್‌ಬುಕ್ ಪೋಸ್ಟ್‌   

ಬೆಂಗಳೂರು: ಹಿಂದಿಯನ್ನು ಹಿಂದಿಯೇತರ ಭಾಷಿಕ ಸಮುದಾಯಗಳ ಮೇಲೆ ಹೇರುವ ಒಕ್ಕೂಟ ಸರ್ಕಾರದ ದುರುದ್ದೇಶವನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ಇಂದು (ಸೆ.14) ಬೆಳಿಗ್ಗೆ ಹತ್ತು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ #StopHindiImposition ಮತ್ತು #ಹಿಂದಿಹೇರಿಕೆನಿಲ್ಲಿಸಿ ಎಂಬ ಹ್ಯಾಷ್‌ ಟ್ಯಾಗ್‌ ಬಳಸಿ ಟ್ವಿಟರ್ ಅಭಿಯಾನ ಹಮ್ಮಿಕೊಂಡಿದೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ‘ಹಿಂದಿ ದಿವಸ’, ‘ಹಿಂದಿ ಸಪ್ತಾಹ’, ‘ಹಿಂದಿ ಪಕ್ವಾಡಾ’ ಇತ್ಯಾದಿ ಹೆಸರುಗಳಲ್ಲಿ ನಮ್ಮೆಲ್ಲರ ತೆರಿಗೆ ಹಣವನ್ನು ಬಳಸಿ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರಲಾಗುತ್ತಿದೆ. ಇದನ್ನು ಖಂಡಿಸಿ, ಎಲ್ಲ ಕನ್ನಡಿಗರು #StopHindiImposition ಮತ್ತು #ಹಿಂದಿಹೇರಿಕೆನಿಲ್ಲಿಸಿ ಎಂಬ ಹ್ಯಾಷ್‌ ಟ್ಯಾಗ್ ಬಳಸಿ ಟ್ವೀಟ್ ಮಾಡಲು ಕೋರುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

‘ಬಹುಭಾಷೆಗಳನ್ನು ಆಡುವ ಜನರಿರುವ ಭಾರತವು ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸುತ್ತದೆ. ಆದರೆ, ಇಡೀ ದೇಶಕ್ಕೆ ಒಂದೇ ಭಾಷೆಯಿರಬೇಕು ಎಂಬ ಕುತಂತ್ರ ಮನಸ್ಥಿತಿಯವರಿಂದಾಗಿ ಹಿಂದಿ ಹೇರಿಕೆ ಎಗ್ಗಿಲ್ಲದೆ ಸಾಗುತ್ತಿದೆ. ಇದನ್ನು ನಾವು ಪ್ರಬಲವಾಗಿ ವಿರೋಧಿಸೋಣ’ ಎಂದು ಕರೆ ನೀಡಿದ್ದಾರೆ.

ಹಿಂದಿ ಹೇರಿಕೆಯು ಕೇವಲ ಭಾಷೆಯ ಹೇರಿಕೆಯ ವಿಷಯ ಮಾತ್ರವಲ್ಲ. ಇದು ಕನ್ನಡಿಗರೂ ಸೇರಿದಂತೆ ದೇಶದ ಇತರ ಭಾಷಿಕರ ಉದ್ಯೋಗಗಳನ್ನು ಕಿತ್ತುಕೊಳ್ಳುತ್ತಿದೆ. ಇತರ ಭಾಷಾ ಸಮುದಾಯಗಳ ಸಂಸ್ಕೃತಿ, ಪರಂಪರೆಯನ್ನು ನಗಣ್ಯಗೊಳಿಸುತ್ತಿದೆ. ಇತರ ಭಾಷಿಕರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರ ವಿರುದ್ಧ ದೂರಿದ್ದಾರೆ.

ADVERTISEMENT

ನಾವು ಯಾವ ಭಾಷೆಯ ಅಥವಾ ಭಾಷಿಕರ ವಿರೋಧಿಗಳಲ್ಲ. ಆದರೆ ಸರ್ಕಾರವೇ ಒಂದು ಭಾಷೆಯನ್ನು, ನಮ್ಮದೇ ತೆರಿಗೆ ಹಣ ಬಳಸಿ, ವ್ಯವಸ್ಥಿತವಾಗಿ ನಮ್ಮ ಮೇಲೆ ಹೇರುವುದನ್ನು ಸಹಿಸುವುದು ಸಾಧ್ಯವಿಲ್ಲ. ಹಿಂದಿ ಹೇರಿಕೆಯು ದೇಶದ ಐಕ್ಯತೆಯನ್ನು ಒಡೆಯುತ್ತಿದೆ ಎಂಬುದನ್ನು ಒಕ್ಕೂಟ ಸರ್ಕಾರ ಈಗಲಾದರೂ ಅರ್ಥ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸೆಪ್ಟೆಂಬರ್ 14ರಂದು ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲಿ ಸಾವಿರಾರು ಬ್ಯಾಂಕ್‌ಗಳ ಮುಂಭಾಗ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಸ್ಥಳೀಯ ಶಾಸಕರು, ಸಂಸದರಿಗೆ ಆಗ್ರಹ ಪತ್ರಗಳನ್ನು ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಕನ್ನಡಿಗರು, ವಿವಿಧ ಕ್ಷೇತ್ರಗಳ ಗಣ್ಯರು ಸೆ.14 ರಂದು ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್‌ ಆ್ಯಪ್‌, ಕ್ಲಬ್ ಹೌಸ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿ ದಿವಸ ಆಚರಣೆ ವಿರುದ್ಧ ಧ್ವನಿ ಎತ್ತಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮನವಿ ಮಾಡಲಾಗುತ್ತಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.