ಬೆಂಗಳೂರು:ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಇಫ್ತಾರ್ ಕೂಟ ಆಯೋಜನೆಗೆ ಅವಕಾಶ ನೀಡಬಾರದೆಂದು ಒತ್ತಾಯಿಸಿ ರಾಷ್ಟ್ರ ರಕ್ಷಣಾ ಪಡೆಯ ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
‘ಹಲಾಲ್ ಬಹಿಷ್ಕರಿಸಿ–ಭಯೋತ್ಪಾದನೆ ನಿಲ್ಲಿಸಿ, ‘ಹಲಾಲ್ ಬಹಿಷ್ಕರಿಸಿ–ದೇಶ ಮತ್ತೊಮ್ಮೆ ತುಂಡಾಗುವುದನ್ನು ತಡೆಯಿರಿ’, ‘ಹಲಾಲ್ ನಿಷೇಧಿಸಿ–ಸಂವಿಧಾನ ಉಳಿಸಿ’ ಎಂಬ ಭಿತ್ತಿಪತ್ರಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು. ಘೋಷಣೆಗಳನ್ನೂ ಕೂಗಿದರು.
‘ಇಫ್ತಾರ್ ಕೂಟವು ಜಾತ್ಯಾತೀತ ಸರ್ಕಾರವೊಂದು ನಡೆಸಿಕೊಂಡು ಬಂದಿರುವ ಹಳೆಯ ಸಂಪ್ರದಾಯ. ನಿರ್ದಿಷ್ಟ ಧರ್ಮವೊಂದರ ಓಲೈಕೆಗಾಗಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ಸಾರ್ವಜನಿಕರ ಹಣವನ್ನು ಬಳಸಿಕೊಂಡು ಈ ಕೂಟವನ್ನು ಆಯೋಜಿಸುತ್ತಾ ಬಂದಿದ್ದಾರೆ. ಈ ಸಂಸ್ಕೃತಿ ಕೊನೆಗಾಣಬೇಕು. ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಇನ್ನು ಮುಂದೆ ಇಫ್ತಾರ್ ಕೂಟ ಆಯೋಜಿಸಲು ಅವಕಾಶ ನೀಡಬಾರದು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
‘ಕಾಂಗ್ರೆಸ್‌ನವರು ಆರಂಭಿಸಿರುವ ಈ ಕೆಟ್ಟ ಸಂಸ್ಕೃತಿಗೆ ಅಂತ್ಯ ಹಾಡಬೇಕು. ಬಿಜೆಪಿ ಸರ್ಕಾರವು ಇದಕ್ಕೆ ಅವಕಾಶ ಕೊಡಬಾರದು. ಇಫ್ತಾರ್ ಕೂಟದ ವೇಳೆ ಹಲಾಲ್ ಮಾಡಿದ ಆಹಾರ ಬಳಸಲಾಗುತ್ತದೆ. ಅದಕ್ಕೆ ನಿರ್ಬಂಧ ಹೇರಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.