ನವದೆಹಲಿ: ಕರ್ನಾಟಕದ ಹಿಪ್ಪರಗಿ ಬ್ಯಾರೇಜ್ ಯೋಜನೆಯಡಿ ಕಾಲುವೆಗಳ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡಿರುವ ಜಮೀನಿನ ಮಾಲೀಕರು ಎಲ್ಲ ಶಾಸನಬದ್ಧ ಪ್ರಯೋಜನಗಳು ಹಾಗೂ ಬಡ್ಡಿ ಸೇರಿದಂತೆ ಎಕರೆಗೆ ₹4.5 ಲಕ್ಷ ಪಡೆಯಲು ಅರ್ಹರು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಯೋಜನೆಗಾಗಿ ಭೂಮಿ ಕಳೆದುಕೊಂಡ ಶ್ರೀಪಾಲ್ ಹಾಗೂ ಇತರರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಸಂದೀಪ್ ಮೆಹ್ತಾ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.
ಈ ಯೋಜನೆಗಾಗಿ ಭೂಸ್ವಾಧೀನಕ್ಕೆ 2004–05ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಪ್ರತಿ ಎಕರೆಗೆ ₹1.31 ಲಕ್ಷ ಪರಿಹಾರ ನಿಗದಿಪಡಿಸಿ ವಿಶೇಷ ಭೂಸ್ವಾಧೀನ ಅಧಿಕಾರಿಯವರು ಆದೇಶ ಹೊರಡಿಸಿದ್ದರು. ಮಾರುಕಟ್ಟೆ ಮೌಲ್ಯದ ಪ್ರಕಾರ ಪ್ರತಿ ಎಕರೆಗೆ ₹3 ಲಕ್ಷ ಪರಿಹಾರ ನೀಡಬೇಕು ಎಂದು ಕೋರಿ ಭೂಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರತಿ ಎಕರೆಗೆ ₹3.69 ಲಕ್ಷ ಪರಿಹಾರ ನಿಗದಿಪಡಿಸಿ ಹೈಕೋರ್ಟ್ ಧಾರವಾಡ ಪೀಠ 2014ರಲ್ಲಿ ಆದೇಶಿಸಿತ್ತು. ಇದೇ ಯೋಜನೆಗಾಗಿ ಭೂಮಿ ಕಳೆದುಕೊಂಡವರಿಗೆ ಪ್ರತಿ ಎಕರೆಗೆ ₹5 ಲಕ್ಷ ಪರಿಹಾರ ನಿಗದಿಪಡಿಸಿ ಹೈಕೋರ್ಟ್ ಏಕಸದಸ್ಯ ಪೀಠ 2021ರಲ್ಲಿ ಆದೇಶ ಹೊರಡಿಸಿತ್ತು. ಉಳಿದ ಭೂಸಂತ್ರಸ್ತರಿಗೂ ₹5 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಭೂಮಾಲೀಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ‘2009ರಲ್ಲಿ ಅಧಿಸೂಚನೆ ಹೊರಡಿಸಿ ಭೂಮಿ ಕಳೆದುಕೊಂಡ ಭೂಮಾಲೀಕರಿಗೆ ₹5 ಲಕ್ಷ ಪರಿಹಾರ ನೀಡಲಾಗಿದೆ’ ಎಂದು ಕರ್ನಾಟಕ ನೀರಾವರಿ ನಿಗಮದ ವಕೀಲರು ವಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.