ADVERTISEMENT

ಹಿರೇಕೆರೂರು ಅಖಾಡದಲ್ಲೊಂದು ಸುತ್ತು| ಆಗ ಸೆಣಸಾಟ ಈಗ ಜೋಡಿಯಾಟ

ಹಿರೇಕೆರೂರು ಬಿಜೆಪಿ– ಕಾಂಗ್ರೆಸ್‌ ನಡುವೆ ನೇರ ಹಣಾಹಣಿ

ಬಿ.ಎನ್.ಶ್ರೀಧರ
Published 1 ಡಿಸೆಂಬರ್ 2019, 10:36 IST
Last Updated 1 ಡಿಸೆಂಬರ್ 2019, 10:36 IST
   

ಹಿರೇಕೆರೂರು: ಸರ್ವಜ್ಞನ ನಾಡು, ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಕಣ ರಂಗೇರುತ್ತಿದೆ. 15 ವರ್ಷಗಳ ಕಾಲ ಮದಗಜಗಳಂತೆ ಪರಸ್ಪರ ಸೆಣಸಾಡಿದವರೇ ಈಗ ಜೋಡೆತ್ತುಗಳಂತೆಜನರ ಮುಂದೆ ಕೈಮುಗಿದು ಮತ ಕೇಳುತ್ತಿದ್ದಾರೆ. ಇವರನ್ನು ನಂಬಬೇಕೇ ಬೇಡವೇ ಎನ್ನುವ ಚಿಂತೆಯಲ್ಲಿ ಮತದಾರರಿದ್ದಾರೆ.

ಮೂರು ಬಾರಿ ಶಾಸಕರಾಗಿದ್ದ ಬಿ.ಸಿ.ಪಾಟೀಲ ಎಲ್ಲ ಪಕ್ಷಗಳನ್ನೂ (ಜೆಡಿಎಸ್‌, ಕಾಂಗ್ರೆಸ್‌) ಸುತ್ತಾಡಿ ಈಗ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಒಂದೊಂದು ಬಾರಿಯೂ ಒಂದೊಂದು ಪಕ್ಷದ ಜತೆ ಗುರುತಿಸಿ ಕೊಂಡ ಅವರು ತಮ್ಮ ವಿರುದ್ಧ ಯಾರು ಸ್ಪರ್ಧಿಸಿ, ಎದುರಾಳಿಗಳಾಗಿದ್ದರೊ ಅವರ ಜತೆ ಸೇರಿಯೇ ಚುನಾವಣೆಗಳನ್ನು ಎದುರಿಸಿರುವುದು ವಿಶೇಷ!

ಮಾಜಿ ಶಾಸಕ, ಬಿಜೆಪಿಯ ಯು.ಬಿ.ಬಣಕಾರ ಇವರ ಪರಮ ‘ವೈರಿ’. ಆದರೆ, ಈಗ ಅವರೇ ಬಿ.ಸಿ.ಪಾಟೀಲರ ಗೆಲುವಿಗೆ ಶ್ರಮಿಸಬೇಕಾದ ಅನಿವಾರ್ಯ ಸ್ಥಿತಿಗೆ ಸಿಲುಕಿದ್ದಾರೆ. ‘30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಪಾಟೀಲರನ್ನು ಗೆಲ್ಲಿಸದಿದ್ದರೆ ಬಣಕಾರಗೆ ಅವಮಾನ ಮಾಡಿದಂತೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಚುನಾವಣಾ ಭಾಷಣದಲ್ಲಿ ಹೇಳಿ ಹೋಗಿದ್ದಾರೆ. ಇವೇ ಮಾತುಗಳು ಕ್ಷೇತ್ರದಲ್ಲಿ ರಿಂಗಣಿಸುತ್ತಿವೆ. ಬಣಕಾರ ಮರ್ಯಾದೆ ಉಳಿಸುವುದಕ್ಕಾದರೂ ಪಾಟೀಲರ ಕೈಹಿಡಿಯ ಬೇಕು ಎನ್ನುವ ಚರ್ಚೆ ಕ್ಷೇತ್ರದಲ್ಲಿ ನಡೆದಿದೆ.

ADVERTISEMENT

ಕಾಂಗ್ರೆಸ್‌ ಕಟ್ಟಾಳುವಾಗಿದ್ದ ಪಾಟೀಲರು ‘ಕ್ಷೇತ್ರದ ಅಭಿವೃದ್ಧಿಗಾಗಿ’ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ ಮೇಲೆ ಕಾಂಗ್ರೆಸ್‌ಗೆ ಪ್ರಮುಖ ಸ್ಪರ್ಧಾಳುವೇ ಇಲ್ಲದಂತಾಯಿತು. ಬಹುತೇಕ ಚುನಾವಣಾ ರಾಜಕಾರಣದಿಂದ ದೂರ ಸರಿದಿದ್ದ, ಮಾಜಿ ಶಾಸಕ ಬಿ.ಎಚ್‌.ಬನ್ನಿಕೋಡ ಅವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್‌ ಕೊಟ್ಟು ಇಳಿವಯಸ್ಸಿನಲ್ಲಿ ಹೋರಾಟಕ್ಕೆ ಇಳಿಸಲಾಗಿದೆ. ಸಜ್ಜನ– ಪ್ರಾಮಾಣಿಕ ರಾಜಕಾರಣಿ, ತುಂಗಾ ಮೇಲ್ದಂಡೆ ಯೋಜನೆಯ ರೂವಾರಿ.. ಹೀಗೆ ಅವರ ಬಗ್ಗೆ ಒಳ್ಳೆಯ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ಆದರೆ, ಅವೆಲ್ಲವೂ ಮತಗಳಾಗಿ ಪರಿವರ್ತನೆ ಆಗುತ್ತವೆಯೇ ಎನ್ನುವುದು ಚರ್ಚೆಯ ಪ್ರಮುಖ ಅಂಶ.ಹಿರೇಕೆರೂರು ಮತ್ತು ರಟ್ಟಿಹಳ್ಳಿ– ಎರಡು ತಾಲ್ಲೂಕುಗಳು ಕ್ಷೇತ್ರದಲ್ಲಿ ಬರುತ್ತವೆ. ಹಿರೇಕೆರೂರು ಭಾಗದಲ್ಲಿ ಪಾಟೀಲರದ್ದು,

ರಟ್ಟಿಹಳ್ಳಿ ಭಾಗದಲ್ಲಿ ಬನ್ನಿಕೋಡ ಪ್ರಭಾವ ಇದೆ. ಬಣಕಾರ ಬಗ್ಗೆ ಒಳ್ಳೆಯ ಮಾತುಗಳನ್ನಾಡುವ ಜನರು, ಅವರು ಚುನಾವಣೆಗೆ ಸ್ಪರ್ಧಿಸದೇ ಇದ್ದದ್ದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ. ಪಕ್ಷ ನಿಷ್ಠೆ ಹಾಗೂ ಯಡಿಯೂರಪ್ಪ ಅವರ ಮಾತಿಗೆ ಬೆಲೆ ಕೊಟ್ಟು ದೂರ ಸರಿದಿರುವ ಅವರ ರಾಜಕೀಯ ಭವಿಷ್ಯ ಏನು ಎನ್ನುವ ಪ್ರಶ್ನೆಯೂ ಅವರ ಬೆಂಬಲಿಗರನ್ನು ಕಾಡುತ್ತಿದೆ. ಬಣಕಾರ ಬೆಂಬಲಿಗರು ಎನ್ನುವ ಕಾರಣಕ್ಕೆ ಪಾಟೀಲರು ತಮಗೆ ಕಿರುಕುಳ ನೀಡಿದರು. ಈಗ ಅವರೊಟ್ಟಿಗೆ ಹೋಗಿ ಮತ ಕೇಳುವುದು ಹೇಗೆ ಎಂದೂ ಕೆಲವರು ಪ್ರಶ್ನಿಸುತ್ತಾರೆ. ಹೀಗಾಗಿ ಮೇಲ್ಮಟ್ಟದಲ್ಲಿ ನಾಯಕರು ಒಂದಾಗಿದ್ದರೂ ತಳಮಟ್ಟದಲ್ಲಿ ಇನ್ನೂ ಆ ಹೊಂದಾಣಿಕೆ ಕಾಣುತ್ತಿಲ್ಲ. ಈ ನಡುವೆ ಎಲ್ಲ ಕಾಂಗ್ರೆಸ್ಸಿಗರೂ ಪಾಟೀಲರನ್ನು ಹಿಂಬಾಲಿಸಿಲ್ಲ. ಹೀಗಾಗಿ ಎಲ್ಲರನ್ನೂ ಪರಸ್ಪರ ‘ಸೇರಿಸುವ’ ಕಸರತ್ತುಗಳು ನಡೆಯುತ್ತಿದ್ದು, ಒಂದು ವೇಳೆ ಅವರಿಬ್ಬರೂ ನಿಜವಾಗಿಯೂ ಒಂದಾದರೆ, ಪಾಟೀಲರ ವೋಟ್‌ 1.5 ಲಕ್ಷ ದಾಟಬೇಕು. ಆದರೆ, ಅದು ಸಾಧ್ಯವೇ?

ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಸಿದ್ದ ರಟ್ಟಿಹಳ್ಳಿಯ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಕಣದಿಂದ ಹಿಂದೆ ಸರಿದಿದ್ದು, ಜೆಡಿಎಸ್‌ ಹೆಸರು ಹೇಳುವವರೇ ಇಲ್ಲದಂತಾಗಿದೆ. ಪಂಚಪೀಠದ ಸ್ವಾಮೀಜಿಗಳ ಮಧ್ಯಪ್ರವೇಶದ ನಂತರ ಇಷ್ಟೆಲ್ಲ ಆಗಿದ್ದು, ರಾಜಕಾರಣಕ್ಕೂ ಮಠಗಳಿಗೂ ಎತ್ತಣದಿಂದೆತ್ತಣ ಸಂಬಂಧವಯ್ಯ ಎಂದೂ ವಿಶ್ಲೇಷಿಸಲಾಗುತ್ತಿದೆ.

ವಿಷಯವೇ ಅಲ್ಲ: ಬಿ.ಸಿ.ಪಾಟೀಲ, ಅನರ್ಹ ಶಾಸಕ ಎನ್ನುವುದು ಇಲ್ಲಿ ಚರ್ಚೆಯ ವಿಷಯವೇ ಆಗಿಲ್ಲ. ‘ತಪ್ಪೇನಿದೆ ಬಿಡಿ, ಅಭಿವೃದ್ಧಿಗಾಗಿ ಅವರು ಹೋಗಿದ್ದಾರೆ. ಪಾಟೀಲರು ಶಾಸಕರಾದ ಮೇಲೆ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿದೆ’ ಎಂದೂ ಹೇಳುತ್ತಾರೆ.

ಎಲ್ಲರೂ ಸಾದರ ಲಿಂಗಾಯತರು!

1957ರಿಂದ 2018ರವರೆಗೆ ಕ್ಷೇತ್ರದಲ್ಲಿ ನಡೆದ ಎಲ್ಲ ಸಾರ್ವತ್ರಿಕ ಚುನಾವಣೆಗಳಲ್ಲಿ ಗೆದ್ದಿರುವುದು ಸಾದರ ಲಿಂಗಾಯತರು. ಗಣನೀಯ ಸಂಖ್ಯೆಯಲ್ಲಿ ಇರುವ ಈ ಸಮುದಾಯದ ನೇತಾರರನ್ನೇ ಎಲ್ಲ ಪಕ್ಷಗಳೂ ಕಣಕ್ಕೆ ಇಳಿಸುವುದು ಇಲ್ಲಿನ ವಿಶೇಷ. ಈ ಬಾರಿ ಕಣದಲ್ಲಿ ಇರುವ ಬಿ.ಸಿ.ಪಾಟೀಲ, ಬನ್ನಿಕೋಡ ಕೂಡ ಇದೇ ಸಮುದಾಯಕ್ಕೆ ಸೇರಿದವರು.

ಹಿರೇಕೆರೂರು: ಮತದಾರರ ವಿವರ

ಒಟ್ಟು: 1,82,796

ಪುರುಷರು:94,238

ಮಹಿಳೆಯರು:88,554

ಇತರೆ:4

ಮತಗಟ್ಟೆ: 229

2018ರ ಚುನಾವಣೆ ಯಾರಿಗೆ ಎಷ್ಟು ಮತ?

ಅಭ್ಯರ್ಥಿ ಪಕ್ಷ ಪಡೆದ ಮತ

ಬಿ.ಸಿ.ಪಾಟೀಲ ಕಾಂಗ್ರೆಸ್‌ 72,461

ಯು.ಬಿ.ಬಣಕಾರ ಬಿಜೆಪಿ 71,906

ಸಿದ್ದಪ್ಪ ಲಕ್ಕಪ್ಪ ಗುಡ್ಡಪ್ಪನವರ ಜೆಡಿಎಸ್‌ 3,597

ಗೆಲುವಿನ ಅಂತರ 565

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.