ADVERTISEMENT

Explainer | ಭೂಗತ ಲೋಕದ ಜಾತಕ: ಈ ಅಡ್ಡ ಅಳತೆಗೆ ಸಿಗದಷ್ಟು ದೊಡ್ಡ!

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 4:36 IST
Last Updated 27 ಫೆಬ್ರುವರಿ 2020, 4:36 IST
ಭೂಗತ ಲೋಕ (ಸಾಂದರ್ಭಿಕ ಚಿತ್ರ)
ಭೂಗತ ಲೋಕ (ಸಾಂದರ್ಭಿಕ ಚಿತ್ರ)   
""
""
""
""

ಭೂವ್ಯಾಜ್ಯಗಳನ್ನು ಪರಿಹರಿಸುವ ನೆಪದಲ್ಲಿ ಸುಲಿಗೆ ಮಾಡುವುದು, ಬೆದರಿಕೆ ಹಾಕುವುದು, ಸುಪಾರಿ ಪಡೆದು ಕೊಲೆ ಮಾಡುವುದು ಮೊದಲಾದ ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗುವ ಗ್ಯಾಂಗ್‌ಸ್ಟರ್‌ಗಳು, ವಿದೇಶಗಳಲ್ಲಿ ಹಾರಿ ನೆಲೆ ಕಂಡುಕೊಳ್ಳುವುದು ವಾಡಿಕೆಯಾಗಿಬಿಟ್ಟಿದೆ. ಹಾಗೆ ವಿದೇಶಕ್ಕೆ ಹಾರಿದ್ದ ರವಿ ಪೂಜಾರಿಯನ್ನು ರಾಜ್ಯ ಪೊಲೀಸರು ಈಗ ಬಂಧಿಸಿ ಕರೆತಂದಿದ್ದಾರೆ. ಅದೇ ನೆಪದಲ್ಲಿ ರಾಜ್ಯದ ಭೂಗತದ ಲೋಕದ ಮೇಲಿನ ಒಂದು ಅವಲೋಕನ ಇಲ್ಲಿದೆ...

ಮಲ್ಪೆಯಿಂದ ಸೆನೆಗಲ್‌ವರೆಗೆ...

ಎಸ್‌ಎಸ್‌ಎಲ್‌ಸಿಗೇ ಶಾಲೆ ಬಿಟ್ಟ ಮಲ್ಪೆಯ ರವಿ ಪ್ರಕಾಶ್ ಪೂಜಾರಿ, ಕೆಲಸ ಅರಸಿ ಹೋಗಿದ್ದು ಮುಂಬೈಗೆ. ಸ್ಥಳೀಯ ರೌಡಿಗಳ ಜೊತೆ ಸೇರಿ ಮಾಡಿದ್ದು ಗ್ಯಾಂಗ್‌ಸ್ಟರ್ ಬಾಲಾ ಜಲ್ಟೆ ಮರ್ಡರ್. ನಂತರ, ಸೇರಿದ್ದು ಛೋಟಾ ರಾಜನ್ ಗ್ಯಾಂಗ್. ಬೆದರಿಕೆ ಕರೆ ಹಾಗೂ ಗುಂಡಿನ ದಾಳಿ ಮಾಡಿಸುವ ಮೂಲಕ ಹೆಸರು ಮಾಡಿದ ಪೂಜಾರಿ, ಕೆಲ ವರ್ಷಗಳಲ್ಲೇ ಭೂಗತ ಲೋಕದ ದೊರೆಯಾದ.

ADVERTISEMENT

ಮುಂಬೈ ಪೊಲೀಸರು ಬಂಧನಕ್ಕೆ ಬೆನ್ನು ಬೀಳುತ್ತಿದ್ದಂತೆ ದೇಶವನ್ನೇ ತೊರೆದ ಆತ, ನಾನಾ ದೇಶಗಳಲ್ಲಿ ಸುತ್ತಾಡುತ್ತಲೇ ಭೂಗತ ಜಗತ್ತಿನ ಚಟುವಟಿಕೆಗಳಲ್ಲಿ ತೊಡಗಿದ್ದ. ಸೆನೆಗಲ್‌ ದೇಶದಲ್ಲಿ ನೆಲೆ ಕಂಡುಕೊಂಡಿದ್ದ ಪೂಜಾರಿ, ‘ದಾನ’ವನ್ನೇ ಅಸ್ತ್ರ ಮಾಡಿಕೊಂಡು ಸಮಾಜಸೇವಕನ ಸೋಗಿನಲ್ಲಿದ್ದ. 2018ರ ಡಿಸೆಂಬರ್‌ನಲ್ಲಿ ಆಯೋಜಿಸಿದ್ದ ‘ಕ್ರಿಕೆಟ್ ಟೂರ್ನಿ ‌ಯಲ್ಲಿ ಭಾಗವಹಿಸಿದ್ದ ಪೂಜಾರಿಯ ಫೋಟೊ ಮಾಧ್ಯಮಗಳಲ್ಲಿ ರಾರಾಜಿಸಿತ್ತು. ಅದೇ ಸುಳಿವು ಆಧರಿಸಿ ಆತನ ಮುಖವಾಡ ಕಳಚಿದ ಕರ್ನಾಟಕ ಪೊಲೀಸರು, ಆತನನ್ನು ರಾಜ್ಯಕ್ಕೆ ಕರೆತಂದಿದ್ದಾರೆ.

ರಾಜ್ಯ ಪೋಲೀಸರ ವಶದಲ್ಲಿ
ಭೂಗತ ಪಾತಕಿ ರವಿ ಪೂಜಾರಿ

ಕ್ಷೌರದ ಅಂಗಡಿಯಲ್ಲಿ ಕೂದಲಿಗೆ ಬಣ್ಣ ಹಚ್ಚಿಸಿಕೊಳ್ಳಲು ಬಂದಿದ್ದ ವೇಳೆಯಲ್ಲೇ ಆತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ‘ನಾನು ರವಿ ಪೂಜಾರಿ’ ಅಲ್ಲವೆಂದೇ ಆತ ವಾದಿಸಿದ್ದ. ಕುಟುಂಬಸ್ಥರ ಡಿಎನ್‌ಎ ಮೂಲಕವೇ ಆತನೇ ರವಿ ಪೂಜಾರಿ ಎಂಬುದನ್ನು ಸಾಬೀತುಪಡಿಸಲಾಗಿತ್ತು.

ಮುಂಬೈ, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ ಹಾಗೂ ಇತರೆ ನಗರಗಳಲ್ಲಿ ಹೆಚ್ಚು ಕೃತ್ಯ ಎಸಗುತ್ತಿದ್ದ. ಪ್ರತಿಯೊಂದು ನಗರದಲ್ಲೂ ತನ್ನದೇ ಗ್ಯಾಂಗ್ ಕಟ್ಟಿಕೊಂಡು ಮಾಹಿತಿ ಸಂಗ್ರಹಿಸುತ್ತಿದ್ದ ಪೂಜಾರಿ, ಅವರ ಮೂಲಕವೇ ದಾಳಿಗಳನ್ನು ಮಾಡಿಸುತ್ತಿದ್ದ. ಅದಕ್ಕೆ ಶಸ್ತ್ರಾಸ್ತ್ರ ಹಾಗೂ ಹಣವನ್ನು ಈತನೇ ಕೊಡುತ್ತಿದ್ದ.

ಇಲ್ಲಿ ಹಿಂದೂ, ಅಲ್ಲಿ ಕ್ರಿಶ್ಚಿಯನ್
ಹಿಂದೂ ಆಗಿದ್ದ ಪೂಜಾರಿಯ ಹೆಸರನ್ನು ಛೋಟಾ ರಾಜನ್‌ನೇ ‘ತನೀಫ್ ಫರ್ನಾಂಡೀಸ್’ ಎಂದು ಬದಲಾಯಿಸಿ ಕ್ರಿಶ್ಚಿಯನ್‌ ಆಗಿ ಮಾಡಿದ್ದ. 1994ರಲ್ಲೇ ದೇಶ ತೊರೆದು ನೇಪಾಳ, ಉಗಾಂಡ, ಬುರ್ಕಿನಾ ಪಾಸ್ತೊ ದೇಶಗಳಲ್ಲಿ ಓಡಾಡಿ ಸೆನೆಗಲ್‌ ಸೇರಿದ್ದ ಪೂಜಾರಿ, ‘ಅಂಥೋನಿ ಫರ್ನಾಂಡೀಸ್’ ಹಾಗೂ ‘ರಾಕಿ ಫರ್ನಾಂಡೀಸ್‌’ ಆಗಿಯೂ ಗುರುತಿಸಿಕೊಂಡಿದ್ದ. ಬ್ಯಾಂಕಾಕ್‌ನಲ್ಲಿದ್ದ ಛೋಟಾ ರಾಜನ್ ಹತ್ಯೆಗೆ 2000ರಲ್ಲಿ ಯತ್ನ ನಡೆದಿತ್ತು. ಅದನ್ನು ಮಾಡಿಸಿದ್ದು ಪೂಜಾರಿಯೇ ಎಂಬ ಅನುಮಾನ ರಾಜನ್‌ಗೆ ಬಂದಿತ್ತು. ಅಂದಿನಿಂದಲೇ ರಾಜನ್ ಗ್ಯಾಂಗ್‌ನಿಂದ ಬೇರೆಯಾಗಿದ್ದ ಪೂಜಾರಿ, ನಕಲಿ ಪಾಸ್‌ಪೋರ್ಟ್‌ ಮೂಲಕ ವಿವಿಧ ದೇಶಗಳಲ್ಲಿ ಸುತ್ತಾಡುತ್ತಿದ್ದ.

ಹೋಟೆಲ್‌ ಉದ್ಯಮ
ಸೆನೆಗಲ್‌ ಸೇರಿದಂತೆ ಹಲವು ದೇಶಗಳಲ್ಲಿ ಪೂಜಾರಿ, ಹೋಟೆಲ್ ಉದ್ಯಮ ನಡೆಸುತ್ತಿದ್ದ. ಸೆನೆಗಲ್‌ನ ‘ನಮಸ್ತೆ ಇಂಡಿಯಾ’ ಭಾರತೀಯ ಹೋಟೆಲ್‌ ಸ್ಥಳೀಯರ ಮೆಚ್ಚುಗೆ ಗಳಿಸಿತ್ತು. ಅದರ ಜೊತೆಗೆ ಜವಳಿ, ಎಲೆಕ್ಟ್ರಾನಿಕ್ ಉತ್ಪನ್ನಗಳ ಮಾರಾಟದಲ್ಲೂ ಆತ ತೊಡಗಿದ್ದ.

ಕೊತ್ವಾಲ್‌

ರಾಜಕಾರಣಿಗಳೇ ಬೆಳೆಸಿದ ಡಾನ್‌ಗಳು
ಬೆಂಗಳೂರಿನ ಭೂಗತಲೋಕಕ್ಕೂ, ರಾಜ್ಯ ರಾಜಕಾರಣಕ್ಕೂ ನೇರ ಸಂಬಂಧವಿತ್ತು. 70ರ ದಶಕದಲ್ಲಿ ಮುನ್ನೆಲೆಗೆ ಬಂದ ಬೆಂಗಳೂರು ಭೂಗತ ಲೋಕಕ್ಕೆ ನೀರೆರೆದಿದ್ದೇ ಅಂದಿನ ಪ್ರಭಾವಿ ರಾಜಕಾರಣಿಗಳು ಎಂಬುದನ್ನು ಅಗ್ನಿ ಶ್ರೀಧರ್ ಅವರ ಆತ್ಮಕತೆ ‘ದಾದಾಗಿರಿಯ ದಿನಗಳು’ ತೆರೆದಿಡುತ್ತದೆ.

ಬೆಂಗಳೂರಿನಲ್ಲಿ ಭೂಗತಲೋಕ ರೂಪುಗೊಳ್ಳುವುದಕ್ಕೂ ಮುನ್ನ, ಇಲ್ಲಿನ ರೌಡಿಗಳು ಕೆಲವಾರು ದಂಧೆಗಳನ್ನು ನಿಯಂತ್ರಿಸಲಷ್ಟೇ ಶಕ್ತರಾಗಿದ್ದರು. ಕೇಬಲ್ ಟಿ.ವಿ., ವೇಶ್ಯಾವಾಟಿಕೆ, ಆಸ್ತಿವ್ಯಾಜ್ಯ ಮತ್ತು ರೋಲ್‌ಕಾಲ್‌ಗಳು ಈ ದಂಧೆಗಳಲ್ಲಿ ಮುಖ್ಯವಾಗಿದ್ದವು. ಪೆಟ್ರೋಲ್ ಮತ್ತು ಡೀಸೆಲ್ ಕಲಬೆರಕೆಯೂ ಒಂದು ಪ್ರಮುಖ ದಂಧೆಯಾಗಿತ್ತು. ಈ ದಂಧೆಯ ಕಿಂಗ್‌ಪಿನ್ ಆಗಿದ್ದ ಕುಮಾರ್, ಆಯಿಲ್ ಕುಮಾರ್ ಎಂದೇ ಕುಖ್ಯಾತನಾಗಿದ್ದ. ಭೂಗತಲೋಕವು ದಕ್ಷಿಣ ಬೆಂಗಳೂರಿನ ವಿಜಯನಗರ, ಮಾಗಡಿ ರಸ್ತೆ, ಮೈಸೂರು ರಸ್ತೆ, ಜಯನಗರ, ಬಸವನಗುಡಿ, ಚಾಮರಾಜಪೇಟೆ, ಜೆ.ಪಿ.ನಗರದಲ್ಲಿ ಕೇಂದ್ರೀಕೃತವಾಗಿತ್ತು. ಮತ್ತೊಂದೆಡೆ ಶಿವಾಜಿನಗರ ಸಹ ಭೂಗತಲೋಕದ ಕೇಂದ್ರವಾಗಿ ಬೆಳೆದಿತ್ತು.

ರಾಜಕಾರಣಿಗಳು ಚುನಾವಣೆಗಳಲ್ಲಿ ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲು ರೌಡಿಗಳನ್ನು ಬೆಳೆಸತೊಡಗಿದರು. 70ರ ದಶಕದ ಮುಖ್ಯಮಂತ್ರಿಯ ಸಂಬಂಧಿ ನಟರಾಜ್ ನೇತೃತ್ವದಲ್ಲಿ ರಚನೆಯಾದ ಇಂದಿರಾ ಬ್ರಿಗೇಡ್, ರೌಡಿಗಳನ್ನು ಬೆಳೆಸಿತು. ಈ ಬ್ರಿಗೇಡ್‌ನ ನೆರವಿನಲ್ಲೇ ರೌಡಿ ಜಯರಾಜ್ ದೊಡ್ಡ ಡಾನ್‌ ಆಗಿ ಬೆಳೆದ. ಬೆಂಗಳೂರಿನ ಬಹುತೇಕ ಎಲ್ಲಾ ದಂಧೆಗಳಲ್ಲೂ ಈತನಿಗೆ ದೊಡ್ಡ ಪಾಲು ಸಲ್ಲಬೇಕಿತ್ತು. ಈತನಿಗೆ ರಾಜಕಾರಣಿಗಳ ರಕ್ಷಣೆ ಇದ್ದ ಕಾರಣ, ಹಲವು ವರ್ಷ ಬೆಂಗಳೂರು ಭೂಗತಲೋಕದ ದೊರೆಯಾಗಿ ಮೆರೆದ.

ಕೆಲವು ಪ್ರಕರಣಗಳಲ್ಲಿ ಜಯರಾಜ್‌ಗೆ 10 ವರ್ಷ ಸಜೆಯಾಯಿತು. ಜಯರಾಜ್‌ ಅನುಪಸ್ಥಿತಿಯಲ್ಲಿ ಶಿವಮೊಗ್ಗ ಮೂಲದ ಕೊತ್ವಾಲ್ ರಾಮಚಂದ್ರ ಬೆಂಗಳೂರಿನ ಭೂಗತಲೋಕದ ದೊರೆ ಆಗಲು ಹವಣಿಸಿದ್ದ. ಆದರೆ ಜಯರಾಜ್‌ನ ಬಿಡುಗಡೆ, ಇತರ ರೌಡಿಗಳ ಜತೆ ಕೊತ್ವಾಲ್ ರಾಮಚಂದ್ರ ಬೆಳೆಸಿಕೊಂಡಿದ್ದ ಹಗೆ ಆತ ತನ್ನ ಗುರಿ ತಲುಪದಂತೆ ಮಾಡಿದ್ದವು. ಮುಖ್ಯಮಂತ್ರಿ ಹುದ್ದೆಯಲ್ಲಿದ್ದವರ ಸಖ್ಯವಿದ್ದರೂ, ಕೊತ್ವಾಲ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಜಯರಾಜ್‌, ಜಯರಾಜ್‌ನ ಶಿಷ್ಯರಾದ ರೇಜರ್ ವಾಸು ಮತ್ತು ಮೊಹಮ್ಮದ್ ಬ್ಲಾಕ್ ಅಲಿ ಜನಸಾಮಾನ್ಯರ ಮೇಲೆ ಎಂದೂ ದಾಳಿ ನಡೆಸಿರಲಿಲ್ಲ ಎನ್ನುತ್ತದೆ ದಾದಾಗಿರಿಯ ದಿನಗಳು ಕೃತಿ. ಶಿವಾಜಿನಗರದ ಕೋಳಿ ಫಯಾಜ್, ಮೈಸೂರು ರಸ್ತೆಯ ಬಾಲ, ಬೆಕ್ಕಿನಕಣ್ಣು ರಾಜೇಂದ್ರ, ಖಲೀಲ್, ಕೊರಂಗು ಮೊದಲಾದ ರೌಡಿಗಳ್ಯಾರೂ ಜನರ ಮೇಲೆ ದಾಳಿ ನಡೆಸಿ, ಭಯಹುಟ್ಟಿಸುವ ಕೆಲಸಕ್ಕೆ ಕೈ ಹಾಕಿರಲಿಲ್ಲ. ಕೊತ್ವಾಲನ ಪ್ರವೇಶದಿಂದ ಬೇರೆ ದಿಕ್ಕಿಗೆ ತಿರುಗಿದ್ದ ಬೆಂಗಳೂರಿನ ಭೂಗತಲೋಕವು, ಆತನ ಹತ್ಯೆಯೊಂದಿಗೆ ಸ್ವಲ್ಪ ಶಾಂತವಾಯಿತು. ಜಯರಾಜ್ ಹತ್ಯೆಯು ಭೂಗತಲೋಕದ ಕಾವನ್ನು ತಣ್ಣಗಾಗಿಸಿತ್ತು. ಇವರ ಹಿಂಬಾಲಕ ರೌಡಿಗಳ ಹತ್ಯೆಯ ಜತೆ ಬೆಂಗಳೂರು ಭೂಗತಲೋಕವೂ ಮಸುಕಾಯಿತು ಎನ್ನುತ್ತದೆ ದಾದಾಗಿರಿಯ ದಿನಗಳು.

ಈಗಿನ ಭೂಗತಲೋಕವು ಪ್ರಮುಖವಾಗಿ ಭೂವ್ಯಾಜ್ಯ, ಆಸ್ತಿವ್ಯಾಜ್ಯಗಳನ್ನು ಬಗೆಹರಿಸುವ ದಂಧೆಗೆ ಸೀಮಿತವಾಗಿದೆ.

ಸಮಾಜಸೇವೆಯ ಮುಖ
ಒಂದಾನೊಂದು ಕಾಲದಲ್ಲಿ ಕರ್ನಾಟಕ ಭೂಗತ ಜಗತ್ತನ್ನು ಆಳುತ್ತಾ, ಹೆಸರು ಹೇಳಿದರೆ ಬೆಚ್ಚಿಬೀಳಿಸುವಷ್ಟು ಕ್ರೌರ್ಯ ಮೆರೆದು ಕುಖ್ಯಾತರಾಗಿದ್ದವರು ಇಳಿವಯಸ್ಸಿನತ್ತ ಸಾಗುತ್ತಿದ್ದಂತೆ ‘ಸಜ್ಜನ’ರಾಗುವ ಯತ್ನ ನಡೆಸಿದ್ದು ಈಗ ಇತಿಹಾಸ. ಈಗ ಪೊಲೀಸರು ಸೆರೆ ಹಿಡಿದಿರುವ ರವಿ ಪೂಜಾರಿ ಕೂಡ ಮುಂದೊಂದು ದಿನ ಸಮಾಜಸೇವೆಯತ್ತ ಮುಖ ಮಾಡಲಿದ್ದಾರೆಯೇ ಎಂಬ ಚರ್ಚೆ ಆರಂಭವಾಗಿದೆ.ಜಯರಾಜ್‌, ಕೊತ್ವಾಲ್ ರಾಮಚಂದ್ರನ ಹತ್ಯೆ ನಂತರ ಭೂಗತ ಜಗತ್ತನ್ನು ತೆಕ್ಕೆಗೆ ತೆಗೆದುಕೊಂಡವರು ಮುತ್ತಪ್ಪ ರೈ ಹಾಗೂ ಅಗ್ನಿ ಶ್ರೀಧರ್‌. ಮುತ್ತಪ್ಪ ರೈ ಎಂದರೆ ಭೀತಿ ಹುಟ್ಟುವ ಕಾಲವೊಂದಿತ್ತು. ಬೆಂಗಳೂರು–ಮಂಗಳೂರು ಎರಡೂ ಕಡೆ ಕೈಚಾಚಿದ್ದ ರೈ, ರಕ್ತಸಿಕ್ತ ಅಧ್ಯಾಯವನ್ನೂ ಬರೆದವರು. ಪಾತಕ ಕೃತ್ಯ ಸಾಕೆನಿಸಿದಾಗ, ಸಮಾಜ ಸೇವೆಯತ್ತ ಮುಖ ಮಾಡಿದರು. ‘ಜಯ ಕರ್ನಾಟಕ’ ಸಂಘಟನೆಯನ್ನು ಕಟ್ಟಿ ಕನ್ನಡದ ಕೆಲಸ, ಸಮಾಜಸೇವೆ, ಧಾರ್ಮಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡರು.

ಅಗ್ನಿಶ್ರೀಧರ್ ಕೂಡ ಇದೇ ಹಾದಿಯಲ್ಲೇ ನಡೆದರು. ‘ಕರುನಾಡ ಸೇನೆ’ ಕಟ್ಟಿಕೊಂಡು ಹೋರಾಟ ಆರಂಭಿಸಿದರು. ‘ಅಗ್ನಿ’ ವಾರಪತ್ರಿಕೆಯನ್ನೂ ದಶಕಗಳ ಕಾಲ ನಡೆಸಿದರು. ತಮ್ಮ ಹಿಂದಿನ ಕೃತ್ಯದ ಕುರಿತು ತೀವ್ರ ವಿಷಾದದ ನೆಲೆಯಲ್ಲಿ ‘ಆ ದಿನಗಳ’ನ್ನು ನೆನಪಿಸಿಕೊಂಡು, ‘ಎದೆಗಾರಿಕೆ’ಗೆ ಕಾರಣವಾದ ಸಂಗತಿಗಳನ್ನು ಬರೆದರು. ಸಿನಿಮಾ ಮಾಡಿದರು. ಅಕ್ರಮ ಗಣಿಗಾರಿಕೆ ವಿರುದ್ಧ, ಮಹದಾಯಿ ನೀರಿಗಾಗಿ ಪಾದಯಾತ್ರೆ ನಡೆಸಿದರು. ನೇರವಾಗಿ ಭೂಗತ ಜಗತ್ತಿನ ಕೃತ್ಯಗಳಿಂದ ದೂರ ಉಳಿದರೂ ‘ರಿಯಲ್ ಎಸ್ಟೇಟ್‌’ ವ್ಯವಹಾರವನ್ನು ರೈ ಮತ್ತು ಶ್ರೀಧರ್‌ ಬಿಡಲಿಲ್ಲ. ಭೂಗತ ಜಗತ್ತನ್ನು ತೊರೆದರೂ ಇವರ ಹತ್ತಾರು ಬಾಡಿಗಾರ್ಡ್‌ಗಳ ನೆರವಿಲ್ಲದೇ ಏಕಾಂಗಿಯಾಗಿ ಓಡಾಡುವ ಅವಕಾಶ ಈ ಇಬ್ಬರಿಗೆ ಇವತ್ತಿಗೂ ಸಿಕ್ಕಿಲ್ಲ. ಮತ್ತೊಂದು ಮಾರ್ಗವನ್ನು ಹುಡುಕಿದವರು ಜೇಡರಹಳ್ಳಿ ಕೃಷ್ಣಪ್ಪ ಹಾಗೂ ಕೆ. ಗೋಪಾಲಯ್ಯ. ಜೇಡರಹಳ್ಳಿ ಚುನಾವಣೆಗೆ ನಿಂತರೂ ರಾಜಕೀಯ ಅವರಿಗೆ ಒಲಿಯಲಿಲ್ಲ. ಆದರೆ, ಜೆಡಿಎಸ್‌ನಿಂದ ರಾಜಕೀಯ ರಂಗಕ್ಕೆ ಬಂದ ಗೋಪಾಲಯ್ಯ, ಬಿಜೆಪಿಗೆ ಸೇರಿ ಸಚಿವರೂ ಆಗಿದ್ದಾರೆ.

ಅಗ್ನಿ ಶ್ರೀಧರ್, ಮುತ್ತಪ್ಪ ರೈ, ಜೇಡರಹಳ್ಳಿ ಕೃಷ್ಣಪ್ಪ

ವ್ಯಾಜ್ಯ ಪರಿಹಾರ ನೆಪ; ಸುಲಿಗೆಯೇ ತಂತ್ರ
ಗ್ಯಾಂಗ್‌ಸ್ಟರ್‌ಗಳು ವಿವಿಧ ದೇಶಗಳಲ್ಲಿ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿದರೂ ತಮ್ಮ ಮೇಲೆ ಯಾವುದೇ ಪ್ರಕರಣ ದಾಖಲಾಗಿಲ್ಲದ ದೇಶದಲ್ಲಿ ವಾಸಿಸುತ್ತಾರೆ ಎನ್ನುವುದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ನೀಡುವ ಮಾಹಿತಿ. ಭಾರತದಲ್ಲಿ ಇದ್ದುಕೊಂಡು ಅವರು ಯಾವುದೇ ಕಾರ್ಯಾಚರಣೆ ಮಾಡುವುದಿಲ್ಲ. ಆದರೆ ಸುಲಿಗೆ, ಬೆದರಿಕೆ ಮೊದಲಾದ ಚಟುವಟಿಕೆಗಳನ್ನು ಸಹಚರರ ಮೂಲಕ ನಡೆಸುತ್ತಾರೆ.

ಭಾರತದಲ್ಲಿ ಭೂ ವ್ಯಾಜ್ಯಗಳು ಅಧಿಕ. ದಾಖಲೆಗಳನ್ನು ಸಂಗ್ರಹಿಸಿಡುವ ಡಾಟಾಬೇಸ್ ಕಳಪೆ. ದಾಖಲೆಗಳನ್ನು ಪಡೆಯಬೇಕೆಂದರೆ ಅದು ದೀರ್ಘಾವಧಿಯ ಪ್ರಕ್ರಿಯೆ.ನ್ಯಾಯಾಂಗ ಪ್ರಕ್ರಿಯೆಯೂ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಭೂಗತ ದೊರೆಗಳಿಗೆಇವೆಲ್ಲವೂ ವರದಾನ. ಮಧ್ಯಪ್ರವೇಶಿಸುವ ಅವರು ವ್ಯಾಜ್ಯವನ್ನು ಪರಿಹರಿಸಿಕೊಡಲು ಮುಂದಾಗುತ್ತಾರೆ. ಇದಕ್ಕಾಗಿ ಎರಡೂ ಕಡೆಯವರಿಂದ ಹಣ ವಸೂಲಿ ಮಾಡುತ್ತಾರೆ. ನಗದು ರೂಪದಲ್ಲಿ ಮಾತ್ರ ವ್ಯವಹರಿಸುತ್ತಾರೆ. ಕೆಲವು ಬ್ಯಾಂಕ್ ಅಧಿಕಾರಿಗಳೂ ಈ ರಹಸ್ಯ ಜಾಲದ ಭಾಗೀದಾರರಾಗಿರುತ್ತಾರೆ.ಬಹುತೇಕರ ಕೇಂದ್ರ ಸ್ಥಾನ ದುಬೈ. ಇಲ್ಲಿ ಆದಾಯ ತೆರಿಗೆ ಇಲ್ಲ. ನಕಲಿ ಇನ್‌ವಾಯ್ಸ್‌ಗಳನ್ನು ಸೃಷ್ಟಿಸಿ ಎರಡೂ ದೇಶಗಳ ನಡುವೆ ನಗದು ಹಣ ವರ್ಗಾವಣೆ ಮಾಡುತ್ತಾರೆ ಎನ್ನುತ್ತಾರೆ ಅಧಿಕಾರಿ.

ವಿಲಾಸಿ ಜೀವನ:ಸಿನಿಮಾಗಳಲ್ಲಿ ’ಡಾನ್‌’ಗಳನ್ನು ಚಿತ್ರಿಸಿರುವಂತೆಯೇ ಭೂಗತಲೋಕದಲ್ಲಿ ರವಿ ಪೂಜಾರಿ ಗ್ಯಾಂಗ್ ವಿಲಾಸಿ ಜೀವನ ನಡೆಸುತ್ತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ‘ಹುಡುಗಿಯರ ಜತೆ ಕ್ಯಾಸಿನೋಗಳಲ್ಲಿ ಕಾಲಕಳೆಯುವುದು, ಐಷಾರಾಮಿ ಕಾರು ಬಳಕೆ ಸಾಮಾನ್ಯ. ತಾವು ಅವಿತಿರುವ ದೇಶಗಳ ಪೊಲೀಸರಿಗೆ ಯಥೇಚ್ಛ ಪ್ರಮಾಣದ ಲಂಚ ನೀಡಿ ಅಪಾಯಗಳಿಂದ ಪಾರಾಗುತ್ತಿದ್ದರು’ ಎಂದು ಹೇಳಿದ್ದಾರೆ.

ರಶೀದ್ ಶೇಖ್ ಹಾಗೂ ಸಾಧು ಶೆಟ್ಟಿ

ಕಡಲ ತೀರದ ಭೂಗತ ಲೋಕ
ಕರಾವಳಿಯ ಭೂಗತ ಲೋಕದ ಪ್ರಸ್ತಾಪ ಆದೊಡನೆ ಎದ್ದು ಕಾಣುವ ಪ್ರಮುಖ ಹೆಸರುಗಳೆಂದರೆ ರಶೀದ್‌ ಮಲಬಾರಿ, ಬನ್ನಂಜೆ ರಾಜ, ಸಾಧು ಶೆಟ್ಟಿ, ವಿಕ್ಕಿ ಶೆಟ್ಟಿ, ಹೇಮಂತ ಪೂಜಾರಿ, ಶರತ್‌ ಶೆಟ್ಟಿ ಹಾಗೂ ವಿಶ್ವನಾಥ ಶೆಟ್ಟಿ ಅವರದು.

ರಶೀದ್ ಶೇಖ್ ಅಲಿಯಾಸ್ ರಶೀದ್ ಮಲಬಾರಿ ಮಹಾರಾಷ್ಟ್ರದಲ್ಲಿ 1990ರ ದಶಕದಲ್ಲಿ ಭೂಗತ ಚಟುವಟಿಕೆಗಳಲ್ಲಿ ನಿಷ್ಣಾತನಾಗಿದ್ದ. ಈತ ಉಡುಪಿಯವನು. ಮುಂಬೈ ಭೂಗತ ಲೋಕದಲ್ಲಿ ಮಲಬಾರಿ ಎಂದು ಗುರುತಿಸಿಕೊಂಡು ಕ್ರಮೇಣ ಅದೇ ಹೆಸರನ್ನು ತನಗೆ ಅಂಟಿಸಿಕೊಂಡ. ಈತ ದಾವೂದ್ ಇಬ್ರಾಹಿಂ ತಂಡದ ಜತೆಗಿದ್ದ. ಬಳಿಕ ಛೋಟಾ ಶಕೀಲ್ ತಂಡದ ಸದಸ್ಯರಲ್ಲಿ ಒಬ್ಬನಾದ. ಮಂಗಳೂರು ಪೊಲೀಸರಿಂದ 2009ರಲ್ಲಿ ಬಂಧಿತನಾಗಿದ್ದ ರಶೀದ್‌ನನ್ನು ಬೆಳಗಾವಿ ಜೈಲಿನಲ್ಲಿ ಇಡಲಾಗಿತ್ತು. ನಂತರ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು. 2014ರ ಜುಲೈ 21ರಂದು ಜಾಮೀನಿನ ಮೇಲೆ ಬಿಡುಗಡೆಗೊಂಡ ಆತ ನ್ಯಾಯಾಲಯಕ್ಕೆ ಹಾಜರಾಗದೆ ಕಣ್ಮರೆಯಾದ. ಆತನ ವಿರುದ್ಧ ಲುಕ್‌ಔಟ್‌ ಹಾಗೂ ರೆಡ್‌ಕಾರ್ನರ್‌ ನೋಟಿಸ್‌ ಜಾರಿ ಮಾಡಲಾಗಿದೆ.

ಬನ್ನಂಜೆ ರಾಜ
ಭೂಗತ ಪಾತಕಿ ಬನ್ನಂಜೆ ರಾಜ ಮಲ್ಪೆ ಸಮೀಪದ ಕಲ್ಮಾಡಿ ಯವನು. 2015ರಲ್ಲಿ ಕೋಕಾ ಕಾಯ್ದೆಯಡಿ ಮೊರಾಕ್ಕೊದಲ್ಲಿ ರಾಜನನ್ನು ಬಂಧಿಸಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಹಾಕಲಾಗಿತ್ತು. ರಾಜನ ವಿರುದ್ಧ ಕೊಲೆ, ಶೂಟೌಟ್‌, ದರೋಡೆ ಸೇರಿದಂತೆ 15 ಕ್ರಿಮಿನಲ್ ಪ್ರಕರಣಗಳಿವೆ. ತಾಯಿ ವಿಲಾಸಿನಿ ಶೆಟ್ಟಿಗಾರ್ 2018ರ ಆ. 27ರಂದುಮೃತಪಟ್ಟಾಗ ಪರೋಲ್ ಮೇಲೆ ಬಂದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ. ಬನ್ನಂಜೆ ರಾಜನ ಸಂಬಂಧಿಗಳು ಈಗಲೂ ಉಡುಪಿಯಲ್ಲಿ ಇದ್ದಾರೆ. ಬನ್ನಂಜೆ ರಾಜ ಜೈಲಿನಲ್ಲಿದ್ದರೂ ಸಹಚರರ ಮೂಲಕ ಆಗಾಗ ಉದ್ಯಮಿಗಳಿಗೆ ಬೆದರಿಕೆ ಹಾಕಿಸುತ್ತಿದ್ದ ಎಂಬ ದೂರುಗಳಿವೆ. ಬ್ರಹ್ಮಾವರದ ಉದ್ಯಮಿ ರತ್ನಾಕರ ಶೆಟ್ಟಿ ಎಂಬುವರಿಗೆ ಹಫ್ತಾ ನೀಡುವಂತೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಮಾರ್ಚ್‌ 22, 2019ರಂದು ಬನ್ನಂಜೆ ರಾಜನ ಸಹಚರರನ್ನು ಬಂಧಿಸಲಾಗಿತ್ತು.

ಕತ್ತಲ ಲೋಕ ಆಳಿದವರು
ಕರ್ನಾಟಕದ ರಕ್ತ ಸಿಕ್ತ ಅಧ್ಯಾಯದಲ್ಲಿ ಹೆಸರಾದವರ ಸಂಖ್ಯೆ ಅಪಾರ. ಹೆದರಿಸಿ, ಕೊಲೆ ಬೆದರಿಕೆ ಹಾಕಿ ಕುಖ್ಯಾತಿಗೆ ಬಂದವರು ಇವರು. ಜಯರಾಜ್‌, ಕೊತ್ವಾಲ್‌ ರಾಮಚಂದ್ರ ಅವರಿಂದ ಶುರುವಾದ ಈ ಕ್ರೌರ್ಯದ ಚರಿತ್ರೆ ಇಂದಿಗೂ ಮುಂದುವರಿದಿದೆ. ಜಯರಾಜ್‌ 10 ವರ್ಷ ಜೈಲಿನಲ್ಲಿದ್ದಾಗ ಭೂಗತ ಜಗತ್ತನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡವರು ಕೊತ್ವಾಲ್‌ ಹಾಗೂ ಆಯಿಲ್ ಕುಮಾರ್. ಇವರ ಕೊಲೆಯಾದ ಬಳಿಕ ರೈ ಮತ್ತು ಶ್ರೀಧರ್‌. ಬೆಕ್ಕಿನ ಕಣ್ಣು ರಾಜೇಂದ್ರ, ಕೋಳಿ ಅಲಿಯಾಸ್ ಮುರ್ಗಿ ಫಯಾಜ್‌, ತನ್ವೀರ್‌, ಬಚ್ಚನ್‌, ರೋಹಿತ್ ಅಲಿಯಾಸ್ ಒಂಟೆ, ಸೈಲೆಂಟ್ ಸುನೀಲ್, ಹೆಬ್ಬೆಟ್ಟು ಮಂಜ, ಬುಲೆಟ್ ರವಿ ಹೀಗೆ ಪಟ್ಟಿ ಉದ್ದುದ್ದ ಬೆಳೆಯುತ್ತಲೇ ಹೋಗುತ್ತದೆ.

ದಯಾವಾನ್‌ ಚಿತ್ರದ ದೃಶ್ಯ

ಬಾಲಿವುಡ್‌ನ ಭೂಗತಲೋಕದ ಸಿನಿಮಾಗಳು

*ಡಾನ್

*ಪರಿಂದಾ

*ಶಿವ

*ದಯಾವಾನ್

*ಸಡಕ್

*ವಾಸ್ತವ್‌

*ಕಂಪನಿ

*ಮಕ್ಬೂಲ್

*ಬ್ಲ್ಯಾಕ್‌ ಫ್ರೈಡೇ

*ಕಮೀನೆ

*ಒನ್ಸ್‌ ಅಪಾನ್‌ ಎ ಟೈಮ್‌ ಇನ್ ಮುಂಬೈ

*ಶೂಟೌಟ್‌ ಅಟ್‌ ಲೋಖಂಡ್‌ವಾಲ

*ಡಾನ್‌ 2

*ಅಪಹರಣ್‌

*ಅಬ್‌ ತಕ್‌ ಛಪ್ಪನ್

*ಗ್ಯಾಂಗ್‌ಸ್ಟರ್‌

*ಡಿ

*ಶೂಟೌಟ್‌ ಅಟ್‌ ವಡಾಲಾ

*ಫುಟ್‌‍ಪಾತ್‌

*ಸತ್ಯ

*ಡಿ ಡೇ

*ಶಾಗಿರ್ದ್

*ಅಗ್ನಿಪಥ್‌

ಕನ್ನಡ

*ಡೆಡ್ಲಿಸೋಮ

*ಆ ದಿನಗಳು

*ಎದೆಗಾರಿಕೆ

*ಬೆತ್ತನಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.