ಬೆಂಗಳೂರು: ಎಚ್‌ಎಂಟಿ ವಶದಲ್ಲಿರುವ ಅರಣ್ಯ ಜಮೀನಿನಲ್ಲಿ ‘ಟಾಕ್ಸಿಕ್’ ಎಂಬ ಸಿನಿಮಾ ಚಿತ್ರೀಕರಣಕ್ಕೆ ಬೃಹತ್ ಸೆಟ್ ಹಾಕಿ, ಮರ–ಗಿಡಗಳನ್ನು ಕಡಿದಿರುವುದಕ್ಕೆ ಕಾರಣರಾದವರ ವಿರುದ್ಧ ಅರಣ್ಯ ಅಪರಾಧ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
‘ಸಿನಿಮಾ ತಂಡ ನಿಯಮಾನುಸಾರ ಅನುಮತಿ ಪಡೆದಿದೆಯೆ? ಎಂಬುದನ್ನು ಪರಿಶೀಲಿಸಬೇಕು. ಅನುಮತಿ ಕೊಟ್ಟಿದ್ದರೆ ಅರಣ್ಯ ಜಮೀನಿನಲ್ಲಿ ಮರ ಕಡಿತಲೆಗೆ ಅನುಮತಿ ನೀಡಿದ ಅಧಿಕಾರಿ ವಿರುದ್ಧವೂ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಅವರು ಸೂಚನೆ ನೀಡಿದ್ದಾರೆ.
‘ಎಚ್‌ಎಂಟಿ ತನ್ನ ವಶದಲ್ಲಿರುವ ಅರಣ್ಯ ಜಮೀನನ್ನು ಸಿನಿಮಾ ಚಿತ್ರೀಕರಣಕ್ಕೆ ಮತ್ತು ಖಾಲಿ ಜಾಗವನ್ನು ದಿನದ ಆಧಾರದ ಮೇಲೆ ಬಾಡಿಗೆ ನೀಡುತ್ತಿರುವುದನ್ನೂ ಗಮನಿಸಲಾಗಿದೆ. ಕೆನರಾ ಬ್ಯಾಂಕ್‌ಗೆ ಎಚ್‌ಎಂಟಿ ಮಾರಾಟ ಮಾಡಿದೆ ಎನ್ನಲಾದ ಅರಣ್ಯ ಜಮೀನಿನಲ್ಲಿ ‘ಟಾಕ್ಸಿಕ್’ ಹೆಸರಿನ ಚಲನಚಿತ್ರದ ಚಿತ್ರೀಕರಣ ಹಲವು ತಿಂಗಳಿಂದ ನಡೆಯುತ್ತಿದೆ. ಇದಕ್ಕಾಗಿ ಬೃಹತ್ ಸೆಟ್ ಹಾಕಲಾಗಿದೆ. ಅಲ್ಲಿ ನೂರಾರು ಮರ, ಗಿಡಗಳನ್ನು ಕಡಿಯಲಾಗಿದೆ. ಮರ, ಗಿಡಗಳ ಅಕ್ರಮ ಕಡಿತಲೆ ದಂಡನೀಯ ಅಪರಾಧ. ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಿಂದ ಹಿಂದಿನ ಮತ್ತು ಈಗಿನ ಉಪಗ್ರಹ ಚಿತ್ರಗಳನ್ನು ಪಡೆದು ಎಷ್ಟು ಮರಗಳನ್ನು ಕಡಿಯಲಾಗಿದೆ ಎಂಬ ಮಾಹಿತಿ ಸಂಗ್ರಹಿಸಲಾಗಿದೆ’ ಎಂದು ಹೇಳಿದ್ದಾರೆ.
ಬೆಂಗಳೂರು ಪೀಣ್ಯ ಪ್ಲಾಂಟೇಷನ್ 1 ಮತ್ತು 2 ರಲ್ಲಿ ಒಟ್ಟು 599 ಎಕರೆ ಮೀಸಲು ಅರಣ್ಯ ಎಂದು ಅಧಿಸೂಚನೆ ಹೊರಡಿಸಲಾಗಿತ್ತು. ಇದನ್ನು 1960ರಲ್ಲಿ ಡಿನೋಟಿಫಿಕೇಷನ್ ಮಾಡದೇ ಕಾನೂನು ಬಾಹಿರವಾಗಿ ಎಚ್‌ಎಂಟಿ ಸಂಸ್ಥೆಗೆ ದಾನ, ಮಂಜೂರು ಹೆಸರಿನಲ್ಲಿ ಹಸ್ತಾಂತರಿಸಲಾಗಿದೆ. ಡಿನೋಟಿಫಿಕೇಷನ್ ಆಗದೆ, ಎಚ್‌ಎಂಟಿ ವಶದಲ್ಲಿರುವ ಜಮೀನು ಅರಣ್ಯವೇ ಆಗಿದೆ. ಎಚ್‌ಎಂಟಿ ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ಅಕ್ರಮವಾಗಿ ಮಾರಾಟ ಮಾಡಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.