ADVERTISEMENT

ಎಚ್‌ಎಂಟಿ | ಮಧ್ಯಂತರ ಅರ್ಜಿಯೇ ನಿಯಮ ಬಾಹಿರ: ಈಶ್ವರ ಖಂಡ್ರೆ

443 ಎಕರೆಯಲ್ಲಿ ಲಾಲ್‌ಬಾಗ್‌ ಮಾದರಿ ಸಸ್ಯೋದ್ಯಾನ–ಸಚಿವ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 0:18 IST
Last Updated 16 ಅಕ್ಟೋಬರ್ 2024, 0:18 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬೆಂಗಳೂರು: ಪ್ರಸ್ತುತ ಎಚ್‌ಎಂಟಿ ವಶದಲ್ಲಿರುವ ಪೀಣ್ಯ ಪ್ಲಾಂಟೇಷನ್‌ನ 443 ಎಕರೆ ಅರಣ್ಯ ಭೂಮಿಯ ಡಿನೋಟಿಫಿಕೇಷನ್‌ಗೆ ಅನುಮತಿ ಕೋರಿ ಸುಪ್ರೀಂಕೋರ್ಟ್‌ಗೆ ಅಧಿಕಾರಿಗಳು ಸಲ್ಲಿಸಿರುವ ಮಧ್ಯಂತರ ಅರ್ಜಿಯೇ ನಿಯಮ ಬಾಹಿರ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

‘ಇದೇ ಸೆಪ್ಟೆಂಬರ್ 25ರಂದು ಸ್ಥಳ ಪರಿಶೀಲನೆ ನಡೆಸಿದಾಗ ನೂರಾರು ಎಕರೆ ಪ್ರದೇಶ ದಟ್ಟ ಅರಣ್ಯದಂತೆ ಇರುವುದನ್ನು ಕಂಡಿದ್ದೇನೆ. ಆದರೆ, ಇದು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ವರದಿ ತಯಾರಿಸಿ, ಡಿನೋಟಿಫಿಕೇಷನ್‌ಗೆ 2020ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇಡೀ ಪ್ರಕ್ರಿಯೆಯೇ ಕಾನೂನು ಬಾಹಿರ. ಹೀಗಾಗಿ ಮಧ್ಯಂತರ ಅರ್ಜಿ ಹಿಂಪಡೆಯಲು ಸೂಚಿಸಲಾಗಿದೆ’ ಎಂದು ಖಂಡ್ರೆ ಸ್ಪಷ್ಟನೆ ನೀಡಿದ್ದಾರೆ.

‘ವಿವಿಧ ಇಲಾಖೆ, ಸರ್ಕಾರಿ ಸ್ವಾಮ್ಯದ ಕಂಪನಿಗಳ ವಶದಲ್ಲಿರುವ ಮತ್ತು ಡಿನೋಟಿಫಿಕೇಷನ್‌ ಆಗದ ಅರಣ್ಯ ಭೂಮಿಯ ಕುರಿತು 2015ರಲ್ಲಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತಮಟ್ಟದ ಸಮಿತಿ ರಚಿಸಲಾಗಿತ್ತು. ಎಚ್‌ಎಂಟಿ ಅನಧಿಕೃತವಾಗಿ ತನ್ನ ಬಳಿ ಇರುವ ಅರಣ್ಯ ಭೂಮಿಯನ್ನು ಮಾರಾಟ ಮಾಡುತ್ತಿದೆ. ಅಲ್ಲಿ ಹಸಿರು ಹೊದಿಕೆ ಉಳಿದಿದ್ದು, ಇದು ಬೆಂಗಳೂರಿಗೆ ಜೀವರಕ್ಷಕ ಮತ್ತು ಅತ್ಯಗತ್ಯವಾದ ಶ್ವಾಸತಾಣವಾಗಿದೆ ಎಂದು ಸಮಿತಿ 2018ರ ಜುಲೈ 17ರಂದು ನಡೆದ ಸಭೆಯಲ್ಲಿ ಉಲ್ಲೇಖಿಸಿದೆ’ ಎಂದಿದ್ದಾರೆ.

ADVERTISEMENT

ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2020ರಲ್ಲಿ ನಡೆದ ಸಭೆಯಲ್ಲಿ 1980ರ ಪೂರ್ವದಲ್ಲಿ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ನೀಡಿದ್ದ ಜಮೀನು ಮಂಜೂರಾತಿಗಳ ಬಗ್ಗೆ ಅಡ್ವೊಕೇಟ್‌ ಜನರಲ್‌ ಅವರ ಅಭಿಪ್ರಾಯಪಡೆದು, ಅಂತಹ ಅರಣ್ಯಪ್ರದೇಶಗಳ ಡಿನೋಟಿಫಿಕೇಶನ್‌ ಪ್ರಸ್ತಾವವನ್ನು ಸಚಿವ ಸಂಪುಟದ ನಿರ್ಧಾರಕ್ಕಾಗಿ ಸಲ್ಲಿಸಲು ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿತ್ತು. ಆದರೆ, ಸಂಪುಟದ ಗಮನಕ್ಕೆ ತಾರದೇ ಡಿನೋಟಿಫಿಕೇಷನ್‌ಗೆ ಅನುಮತಿ ಕೋರಿ ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ. ಇದು ಕರ್ನಾಟಕ ಸರ್ಕಾರದ ಕಾರ್ಯ ಕಲಾಪಗಳ ನಿರ್ವಹಣಾ ನಿಯಮಾವಳಿ 1977ರ ಉಲ್ಲಂಘನೆಯೂ ಆಗಿದೆ. ಈ ಎಲ್ಲ ಕಾರಣಗಳಿಂದ ಮಧ್ಯಂತರ ಅರ್ಜಿ ಹಿಂಪಡೆಯಲು ಸೂಚಿಸಲಾಗಿದೆ. ಕರ್ತವ್ಯ ಲೋಪಕ್ಕೆ ಕಾರಣ ಕೇಳಿ ಅಧಿಕಾರಿಗಳಿಗೂ ನೋಟಿಸ್‌ ನೀಡಲಾಗಿದೆ. ಇದರ ಹಿಂದೆ ಯಾವುದೇ ರಾಜಕೀಯ ಕಾರಣ, ದ್ವೇಷವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಗೆಜೆಟ್ ಅಧಿಸೂಚನೆಯೇ ಇಲ್ಲ:

ಎಚ್‌ಎಂಟಿಗೆ ನೀಡಿದ 400 ಎಕರೆಗೂ ಹೆಚ್ಚು ಭೂಮಿಗೆ ಗೆಜೆಟ್‌ ಅಧಿಸೂಚನೆಯೇ ಆಗಿಲ್ಲ. 64 ಎ ಪ್ರಕ್ರಿಯೆ ಆದೇಶಕ್ಕೆ ಅರಣ್ಯಾಧಿಕಾರಿ ಅಲ್ಲದ ಐಎಎಸ್‌ ಅಧಿಕಾರಿ ತಡೆ ನೀಡಿದ್ದಾರೆ. ಇದೂ ಕೂಡ ಕಾನೂನು ಬಾಹಿರ. ಹೀಗಾಗಿ ಅರಣ್ಯೇತರ ಉದ್ದೇಶಕ್ಕೆ ಪರಿವರ್ತನೆ ಆಗದ ಎಚ್‌ಎಂಟಿ ಜಮೀನು ಅರಣ್ಯವೇ ಆಗಿದೆ ಎಂದಿದ್ದಾರೆ.

165 ಎಕರೆ ಅಕ್ರಮ ಪರಭಾರೆ 

ಎಚ್‌ಎಂಟಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ₹14300 ಕೋಟಿ ಬೆಲೆ ಬಾಳುವ ಜಮೀನು ಎಂದು ಹೇಳಿಕೊಂಡಿದೆ. ಆದರೆ ಈಗಾಗಲೇ 165 ಎಕರೆ ಅರಣ್ಯ ಭೂಮಿಯನ್ನು ₹300 ಕೋಟಿಗೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಿದೆ. ಡಿನೋಟಿಫಿಕೇಷನ್ ಆಗದ ಅರಣ್ಯ ಭೂಮಿ ಮಾರಾಟ ಮಾಡಿರುವುದೂ ಅಕ್ರಮ ಮತ್ತು ಕಾನೂನು ಬಾಹಿರ ಎಂದು ಈಶ್ವರ ಖಂಡ್ರೆ ಟೀಕಿಸಿದ್ದಾರೆ.

ಎಚ್ಎಂಟಿ ಭೂಮಿ ಕನ್ನಡಿಗರ ಆಸ್ತಿ 

ಭೂಮಿಯನ್ನು ದಾನದ ಮೂಲಕ ಮಂಜೂರು ಮಾಡಲಾಗಿದೆ. ಅರಣ್ಯ ಭೂಮಿಯನ್ನು ದಾನ ನೀಡಲು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಯಾವ ಅಧಿಕಾರವಿದೆ. ಎಚ್‌ಎಂಟಿ ವಶದಲ್ಲಿರುವ ಭೂಮಿ ಕನ್ನಡಿಗರ ಆಸ್ತಿ. ಅಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ  ಸಸ್ಯೋದ್ಯಾನ ಮಾಡಿ ಹಸಿರು ಹೊದಿಕೆ ಹೆಚ್ಚಳ ಮಾಡಲಾಗುವುದು. ರಿಯಲ್‌ ಎಸ್ಟೇಟ್‌ ಪಾಲಾಗಲು ಬಿಡುವುದಿಲ್ಲ ಎಂದು ಸಚಿವ ಖಂಡ್ರೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.