ADVERTISEMENT

ಎಚ್‌ಎಂಟಿ ಭೂವಿವಾದ: ₹14,300 ಕೋಟಿ ಜಾಗಕ್ಕೆ ಜಟಾಪಟಿ

ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸಂಸ್ಥೆ ಮೊರೆ

ಮಂಜುನಾಥ್ ಹೆಬ್ಬಾರ್‌
Published 15 ಅಕ್ಟೋಬರ್ 2024, 1:33 IST
Last Updated 15 ಅಕ್ಟೋಬರ್ 2024, 1:33 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ನವದೆಹಲಿ: ಬೆಂಗಳೂರು ಉತ್ತರ ತಾಲ್ಲೂಕಿನ ಪೀಣ್ಯ ಪ್ಲಾಂಟೇಷನ್‌ನಲ್ಲಿರುವ 443 ಎಕರೆ ಜಾಗದ ಮಾಲೀಕತ್ವದ ವಿಷಯದಲ್ಲಿ ಎಚ್‌ಎಂಟಿ ಹಾಗೂ ಕರ್ನಾಟಕ ಅರಣ್ಯ ಇಲಾಖೆ ನಡುವಿನ ಸಂಘರ್ಷ ಮತ್ತೊಂದು ಮಜಲು ತಲುಪಿದೆ. ಡಿನೋಟಿಫೈ ಮಾಡಬಹುದು ಎಂದು ನಾಲ್ಕು ವರ್ಷಗಳ ಹಿಂದಷ್ಟೇ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಕರ್ನಾಟಕ ಸರ್ಕಾರವು ರಾಜಕೀಯ ಕಾರಣಗಳಿಂದಾಗಿ ಏಕಾಏಕಿ ನಿಲುವು ಬದಲಿಸಿದೆ ಎಂದು ಆರೋಪಿಸಿ ಎಚ್‌ಎಂಟಿ ಸಂಸ್ಥೆಯು ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದೆ. 

₹14,300 ಕೋಟಿ ಮೌಲ್ಯದ ಈ ಜಾಗದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಭಾರಿ ಕೈಗಾರಿಕೆ ಸಚಿವಾಲಯದ ಅಧೀನದ ಎಚ್‌ಎಂಟಿ ನಡುವೆ ದಶಕಗಳಿಂದ ವಿವಾದ ಇದೆ. ಈ ಜಾಗವನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶ ನೀಡಿದ ಬಳಿಕ ಭೂ ಸಂಘರ್ಷ ತೀವ್ರ ಸ್ವರೂಪಕ್ಕೆ ಹೋಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿರುವ ಈ ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಕೋರಿರುವ ಎಚ್‌ಎಂಟಿ, ‘ಈ ಜಾಗವನ್ನು ರಾಜ್ಯ ಸರ್ಕಾರ ಸ್ವಾಧೀನಪಡಿಸಿಕೊಂಡರೆ ಸಂಸ್ಥೆಯ ಪುನರುಜ್ಜೀವನ ಕಾರ್ಯಕ್ಕೆ ಭಾರಿ ಹೊಡೆತ ಬೀಳಲಿದೆ ಹಾಗೂ ಸಾವಿರಾರು ನೌಕರರು ಬೀದಿಪಾಲು ಆಗಲಿದ್ದಾರೆ’ ಎಂದು ಹೇಳಿದೆ.

ADVERTISEMENT

ಎಚ್‌ಎಂಟಿ ವಾದವೇನು: 

ಎಚ್‌ಎಂಟಿ ಕಾರ್ಖಾನೆ ಸ್ಥಾಪಿಸುವ ಸಂಬಂಧ ಜಾರಕಬಂಡೆ ಕಾವಲ್‌ನಲ್ಲಿರುವ 649 ಎಕರೆ ಜಾಗವನ್ನು ಕರ್ನಾಟಕ ಸರ್ಕಾರ 1960–1965ರಲ್ಲಿ ನೀಡಿತ್ತು. ಇದರಲ್ಲಿ 178 ಎಕರೆಯನ್ನು ಸ್ವಾಧೀನಪಡಿಸಿಕೊಂಡಿದ್ದರೆ, 259 ಎಕರೆಯನ್ನು ಮಂಜೂರು ಮಾಡಲಾಗಿತ್ತು. 211 ಎಕರೆಯನ್ನು ಉಡುಗೊರೆ ರೂಪದಲ್ಲಿ ಕೊಡಲಾಗಿತ್ತು. ಇದರಲ್ಲಿ 443 ಎಕರೆಯನ್ನು ಎಚ್‌ಎಂಟಿ ಅಭಿವೃದ್ಧಿಪಡಿಸಿತ್ತು. ಇದರಲ್ಲಿ ಕಾರ್ಖಾನೆಗಳು, ಟೌನ್‌ಶಿಪ್‌ಗಳು, ಕಟ್ಟಡಗಳು, ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು, ವಸತಿ ಸಂಕೀರ್ಣಗಳು, ಸಭಾಂಗಣಗಳು ನಿರ್ಮಾಣವಾಗಿವೆ. 

ಕರ್ನಾಟಕ ಅರಣ್ಯ ಕಾಯ್ದೆ 1963ರ ಉಲ್ಲಂಘನೆ ಹಾಗೂ ಅರಣ್ಯ ಜಮೀನು ಒತ್ತುವರಿ ಆರೋಪದ ಕಾರಣ ಕರ್ನಾಟಕ ಸರ್ಕಾರವು 2015ರಲ್ಲಿ ಉನ್ನತಾಧಿಕಾರ ಸಮಿತಿ ರಚಿಸಿತ್ತು. ದಾಖಲೆಗಳ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತ್ತು. ಈ ಪ್ರದೇಶವು ಅರಣ್ಯವೇ ಎಂಬುದನ್ನು ಪತ್ತೆ ಹಚ್ಚಲು ಜಂಟಿ ಸಮೀಕ್ಷೆ ನಡೆಸುವಂತೆ ಅರಣ್ಯ ಇಲಾಖೆಗೆ ಉನ್ನತಾಧಿಕಾರ ಸಮಿತಿ ನಿರ್ದೇಶನ ನೀಡಿತ್ತು. ಪ್ರಸ್ತುತ ಈ ಜಾಗವು ಅರಣ್ಯ ಸ್ವರೂಪ ಉಳಿಸಿಕೊಂಡಿಲ್ಲ ಎಂದು ಅರಣ್ಯ ಇಲಾಖೆ 2016ರಲ್ಲಿ ವರದಿ ಸಲ್ಲಿಸಿತ್ತು. 

ಈ ನಡುವೆ, ಪೀಣ್ಯ ಪ್ಲಾಂಟೇಷನ್‌ನಲ್ಲಿ ಎಚ್‌ಎಂಟಿ ಹಾಗೂ ಪ್ರೆಸ್ಟೀಜ್‌ ಎಸ್ಟೇಟ್‌ ಪ್ರಾಜೆಕ್ಟ್‌ ಒತ್ತುವರಿ (ಒಟ್ಟು 599 ಎಕರೆ) ಮಾಡಿಕೊಂಡಿದೆ ಎಂದು ಆರೋಪಿಸಿ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವಿಚಕ್ಷಣಾ) ಅವರು 2015ರಲ್ಲಿ ನೋಟಿಸ್‌ ನೀಡಿ ಈ ಜಾಗವನ್ನು ವಶಪಡಿಸಿಕೊಳ್ಳಬೇಕು ಎಂದು ಆದೇಶ ಹೊರಡಿಸಿದ್ದರು. 

ಒತ್ತುವರಿ ತೆರವು ಆದೇಶ ಪ್ರಶ್ನಿಸಿ ಪ್ರೆಸ್ಟೀಜ್‌ ಸಂಸ್ಥೆಯು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನ್ಯಾಯಾಲಯದ ಮೊರೆ ಹೋಗಿತ್ತು. ಎಚ್‌ಎಂಟಿ ಅನಧಿಕೃತವಾಗಿ ಜಾಗ ಪಡೆದಿಲ್ಲ ಎಂಬ ಕಾರಣ ನೀಡಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಎಪಿಸಿಸಿಎಫ್‌ ಆದೇಶಕ್ಕೆ ತಡೆ ನೀಡಿದ್ದರು. ಬಳಿಕ ಈ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

159 ಎಕರೆ ಪರಭಾರೆ

ಆರ್ಥಿಕ ಸಂಕಷ್ಟ ಹಾಗೂ ಸಾಲದ ಕಾರಣ ಎಚ್‌ಎಂಟಿಯ ಮೂರು ಸಂಸ್ಥೆಗಳನ್ನು ಮುಚ್ಚಲು ಭಾರಿ ಕೈಗಾರಿಕೆ
ಇಲಾಖೆ 2016ರಲ್ಲಿ ಒಪ್ಪಿಗೆ ನೀಡಿತ್ತು. ಸಂಸ್ಥೆಯ ₹3,588 ಕೋಟಿ ಮೊತ್ತ ಸ್ಥಿರ ಆಸ್ತಿ ಮಾರಲು ಅನುಮೋದನೆ ನೀಡಲಾಗಿತ್ತು.

ಮಾರುಕಟ್ಟೆ ದರದಲ್ಲಿ ಆದಾಯ ತೆರಿಗೆ ಇಲಾಖೆಗೆ 5.80 ಎಕರೆಯನ್ನು 2016ರಲ್ಲಿ ಮಾರಲಾಗಿತ್ತು. ರಾಮನ್ ಸಂಶೋಧನಾ ಸಂಸ್ಥೆಗೆ 0.74 ಎಕರೆ ಜಾಗವನ್ನು ಪರಭಾರೆ ಮಾಡಲಾಗಿತ್ತು. ₹1,191 ಕೋಟಿ ಮೊತ್ತಕ್ಕೆ 88 ಎಕರೆಯನ್ನು ಇಸ್ರೊ ಸಂಸ್ಥೆಗೆ ಮಾರಲು ಕೇಂದ್ರ ಸಂಪುಟ 2017ರಲ್ಲಿ ಒಪ್ಪಿಗೆ ನೀಡಿತ್ತು. ಗೇಲ್ ಸಂಸ್ಥೆಗೆ 1 ಎಕರೆ ನೀಡಲಾಗಿತ್ತು. ಈ ರೀತಿಯಾಗಿ ಸರ್ಕಾರಿ ಸಂಸ್ಥೆಗಳಿಗೆ 111 ಎಕರೆಯನ್ನು ಹಾಗೂ ಖಾಸಗಿ ಸಂಸ್ಥೆಗಳಿಗೆ 48 ಎಕರೆಯನ್ನು ಪರಭಾರೆ ಮಾಡಲಾಗಿದೆ. 

ಹೊಸ ಪ್ರಮಾಣಪತ್ರಕ್ಕೆ ಸಿದ್ಧತೆ 

2020ರಲ್ಲಿ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದ ಅರಣ್ಯ ಇಲಾಖೆ, ‘443 ಎಕರೆಯನ್ನು ಎಚ್‌ಎಂಟಿ ಹೆಸರಿಗೆ ಡಿನೋಟಿಫೈ ಮಾಡಬಹುದು’ ಎಂದು ಉಲ್ಲೇಖಿಸಿತ್ತು. ಅರಣ್ಯ ಇಲಾಖೆಗೆ ಸೇರಿರುವ 599 ಎಕರೆಯ ಒತ್ತುವರಿ ತೆರವುಗೊಳಿಸಬೇಕು ಎಂದು ಸಚಿವ ಖಂಡ್ರೆ ಅವರು ಆಗಸ್ಟ್‌ನಲ್ಲಿ ಆದೇಶಿಸಿದ್ದರು.

2020ರಲ್ಲಿ ಸಲ್ಲಿಸಿದ್ದ ಪ್ರಮಾಣಪತ್ರವನ್ನು ವಾಪಸ್‌ ಪಡೆಯಬೇಕು ಹಾಗೂ ಪ್ರಮಾಣಪತ್ರ ಸಲ್ಲಿಸಿದ್ದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದರು.

2–3 ದಿನಗಳಲ್ಲಿ ಸುಪ್ರೀಂ ಕೋರ್ಟ್‌ಗೆ ಅರಣ್ಯ ಇಲಾಖೆ ಪ್ರಮಾಣಪತ್ರ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.