ADVERTISEMENT

ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಆರೋಪಿ ಬಂಧನ: 'ಪ್ರಸಿದ್ಧಿ ಪಡೆಯಲು ಕೃತ್ಯ'

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 8:59 IST
Last Updated 21 ಆಗಸ್ಟ್ 2020, 8:59 IST
ಬಂಧಿತ ಆರೋಪಿ ವಸಂತ ಕೃಷ್ಣ ಶೇರಿಗಾರ
ಬಂಧಿತ ಆರೋಪಿ ವಸಂತ ಕೃಷ್ಣ ಶೇರಿಗಾರ   

ಮಂಗಳೂರು: ವಿಮಾನ ನಿಲ್ಸಾಣಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದ್ದು, ಈ ಹಿಂದೆ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿ ಸುದ್ದಿಯಾಗಿದ್ದ ಆರೋಪಿ ಆದಿತ್ಯ ರಾವ್ ನಂತೆ ಪ್ರಸಿದ್ದಿ ಪಡೆಯಬೇಕು ಎಂಬ ಉದ್ದೇಶದಿಂದ ಹುಸಿ ಬಾಂಬ್ ಕರೆ ಮಾಡಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 'ಏರ್ ಪೋರ್ಟ್ ಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ ಉಡುಪಿಯ ಕಾರ್ಕಳ ತಾಲ್ಲೂಕು ಮುದ್ರಾಡಿಯ ವಸಂತ ಕೃಷ್ಣ ಶೇರಿಗಾರ (33) ಈಗಾಗಲೇ ಬಂಧಿಸಲಾಗಿದ್ದು, ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ' ಎಂದರು.

ಆತನನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕಿದ್ದು, ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಪರೀಕ್ಷಾ ವರದಿ ನೆಗೆಟಿವ್‌ ಬಂದರೆ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಪೊಲೀಸ್‌ ಕಸ್ಟಡಿಗೆ ಪಡೆಯಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗುವುದು' ಎಂದು ಹೇಳಿದರು.

ADVERTISEMENT

ಬಂಧಿತ ಆರೋಪಿ ಈ ಹಿಂದೆ ಬೆಂಗಳೂರಿನ ಹೋಟೆಲ್‌ನಲ್ಲಿ 3-4 ವರ್ಷ ಕೆಲಸ ಮಾಡಿದ್ದು, ಬಳಿಕ ಉಡುಪಿಯ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಲಾಕ್‌ಡೌನ್ ಕಾರಣದಿಂದ ಮನೆಯಲ್ಲಿದ್ದು, ಗೂಗಲ್ ಮೂಲಕ ಮಾಜಿ ನಿರ್ದೇಶಕ ಎಂ. ಆರ್‌. ವಾಸುದೇವ ಮೊಬೈಲ್ ನಂಬರ್ ಪಡೆದುಕೊಂಡು ಬಾಂಬ್‌ ಇರಿಸಿರುವುದಾಗಿ ಬೆದರಿಕೆ ಹಾಕಿದ್ದ ಎಂದು ವಿವರಿಸಿದರು.

'ತ‌ಕ್ಷಣ ಕಾರ್ಯಪ್ರವೃತ್ತರಾದ ಮಂಗಳೂರು ಪೊಲೀಸರು ಉಡುಪಿ ಪೊಲೀಸರ ಸಹಕಾರದಿಂದ ಕರೆ ಬಂದ ನಾಲ್ಕೇ ತಾಸುಗಳಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಈತನ ವಿರುದ್ದ ಈಗಾಗಲೇ ಜಾಮೀನು ರಹಿತ ಸೆಕ್ಷನ್ ನಡಿ ಪ್ರಕರಣ ದಾಖಲಿಸಲಾಗಿದೆ'.

ಆರೋಪಿ ವಿಚಾರಣೆ ವೇಳೆ ಈ ಹಿಂದೆ ನಡೆದ ಬಾಂಬ್ ಘಟನೆಯಿಂದ ಪ್ರೇರಿತನಾಗಿ ತಾನು ಪ್ರಸಿದ್ಧನಾಗಬೇಕು ಎಂದು ಹುಸಿ ಕರೆ ಮಾಡಿರುವುದಾಗಿ ಬಾಯಿಬಿಟ್ಟಿದ್ದಾನೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.