ADVERTISEMENT

ವೀಸಾ ಅವಧಿ ಮುಗಿದರೂ ನೆಲೆಸಿದ ವಿದೇಶಿಗರ ಗಡಿಪಾರು: ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 20:40 IST
Last Updated 10 ಆಗಸ್ಟ್ 2022, 20:40 IST
   

ಬೆಂಗಳೂರು: ‘ವೀಸಾ ಅವಧಿ ಮುಗಿ ದರೂ ದೇಶದಲ್ಲಿಯೇ ಉಳಿದುಕೊಳ್ಳು ತ್ತಿರುವ ವಿದೇಶಿ ವಲಸಿಗರು, ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಅಪಾಯ ಇದೆ. ಹೀಗಾಗಿ, ಅವರನ್ನು ಗಡಿಪಾರು ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದು ಇಲಾಖೆಯ ಅಧಿಕಾರಿಗಳಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚಿಸಿದರು.

ಅಕ್ರಮ ವಿದೇಶಿ ವಲಸಿಗರನ್ನು ಹಿಡಿದಿಡುವ ದಿಗ್ಬಂಧನ ಕೇಂದ್ರದ ಸಾಮರ್ಥ್ಯವನ್ನು ಇಮ್ಮಡಿಗೊಳಿಸುವ ಕುರಿತು ಚರ್ಚಿಸಲು ಬುಧವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೂಡಾ ಸಭೆಯಲ್ಲಿದ್ದರು.

ಅಕ್ರಮ ವಿದೇಶಿ ವಲಸಿಗರಿಗೆ ತಾತ್ಕಾಲಿಕ ವಸತಿ ಕಲ್ಪಿಸುವ ‘ದಿಗ್ಬಂಧನ ಕೇಂದ್ರ’ದ ವಾಸವನ್ನು ವಿಸ್ತರಿಸಿ ಸಾಮರ್ಥ್ಯ ಹೆಚ್ಚಿಸುವ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸಭೆಯಲ್ಲಿ ಪ್ರಸ್ತಾಪಿಸಿದರು. ‘ಅಕ್ರಮ ಬಾಂಗ್ಲಾದೇಶಿ ನಾಗರಿಕರೂ ಸೇರಿದಂತೆ ಇತರ ದೇಶಗಳ ವಲಸಿ ಗರನ್ನು, ಕಾನೂನಿನಂತೆ ಬಂಧಿಸಿ, ಯಾವುದೇ ಕಾರಾಗೃಹಗಳಲ್ಲಿ ಇಡದೆ, ಅವರಿಗೆಂದೇ ಇರುವ ದಿಗ್ಬಂಧನ ಕೇಂದ್ರದಲ್ಲಿ ವಸತಿ ಕಲ್ಪಿಸಬೇಕಿದೆ. ಆದರೆ, ನೆಲಮಂಗಲದಲ್ಲಿ ಮಾತ್ರ ದಿಗ್ಬಂಧನ ಕೇಂದ್ರ ಕಾರ್ಯಾಚರಿಸುತ್ತಿದ್ದು, ಅಲ್ಲಿ ಸ್ಥಳಾವಕಾಶದ ಕೊರತೆ ಇದೆ’ ಎಂದು ಹೇಳಿದರು.

ADVERTISEMENT

‘ದಿಗ್ಬಂಧನ ಕೇಂದ್ರದ ಸಾಮರ್ಥ್ಯ ವಿಸ್ತರಣೆಗೆ ಸಮಾಜ ಕಲ್ಯಾಣ ಇಲಾಖೆ ಅನುದಾನ ಒದಗಿಸಬೇಕು. ಅನುದಾನ ಬಿಡುಗಡೆ ವಿಳಂಬ ಆಗದಂತೆ ಕ್ರಮ ಕೈಗೊಳ್ಳಬೇಕು‘ ಎಂದು ಸಚಿವ ಕೋಟ ಅವರ ಬಳಿ ಗೃಹ ಸಚಿವರು ವಿನಂತಿಸಿದರು. ಈ ಪ್ರಸ್ತಾವನೆಯನ್ನು ಆದ್ಯತೆಯಲ್ಲಿ ಪರಿಗಣಿಸಲಾಗುವುದು ಎಂದು ಕೋಟ ಭರವಸೆ ನೀಡಿದರು.

ಬೆಂಗಳೂರು ನಗರ ಪೊಲೀಸ್ ಕಮಿಷನರ್‌ ಪ್ರತಾಪ್ ರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.