ಬೆಂಗಳೂರು: ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಯಾವುದೇ ಅಸಮಾಧಾನ ಇದ್ದರೆ, ಅದನ್ನು ಸರ್ಕಾರದ ಒಳಗೇ ಬಗೆಹರಿಸಿಕೊಳ್ಳಬೇಕು. ರಾಜ್ಯಪಾಲರ ಅಂಗಳಕ್ಕೆ ಒಯ್ಯವುದು ಸರಿಯಲ್ಲ ಎಂದು ಗೃಹ ಮತ್ತು ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮುಖ್ಯಮಂತ್ರಿಯವರ ಭೇಟಿಯ ಬಳಿಕ ಅವರು ಮಾತನಾಡಿ, ನಮ್ಮದು ಶಿಸ್ತಿನ ಪಕ್ಷವಾಗಿದ್ದು, ಶಿಸ್ತಿನ ಉಲ್ಲಂಘನೆಯಾಗಬಾರದು ಎಂದು ತಿಳಿಸಿದರು.
ಇದನ್ನೂ ಓದಿ... ಈಶ್ವರಪ್ಪ ಬಹಿರಂಗ ದೂರು ನೀಡಬಾರದಿತ್ತು: ಅರುಣ್ ಸಿಂಗ್
ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಸರ್ಕಾರ ರಚನೆ ಆಗಿದೆ. ಅವರ ಮಾರ್ಗದರ್ಶನದಲ್ಲಿಯೇ ಕೆಲಸ ಮಾಡುತ್ತಿದ್ದೇವೆ. ಯಾವುದೇ ಸಮಸ್ಯೆ, ಸಂದೇಹಗಳಿದ್ದರೆ ಸಚಿವ ಸಂಪುಟ ಅಥವಾ ಸರ್ಕಾರದ ಇತರ ವೇದಿಕೆಗಳಲ್ಲಿ ಚರ್ಚೆ ಮಾಡಬಹುದು. ರಾಜ್ಯಪಾಲರ ಬಳಿ ಹೋಗುವ ಹೊಸ ಪದ್ಧತಿ ಸರಿಯಲ್ಲ ಎಂದರು.
ಅನುದಾನ ಬಿಡುಗಡೆ ಆಗಿಲ್ಲ ಎಂದು ಶಾಸಕರು ದೂರುಗಳು ಬಂದ ಕಾರಣ, ಅನುದಾವನ್ನು ಬೇಗ ಮುಟ್ಟಿಸಲು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಯವರ ಅನುದಾನ ಬಿಡುಗಡೆ ಮಾಡಿದ್ದಾರೆ.
ಈಶ್ವರಪ್ಪ ಮತ್ತು ಯಡಿಯೂರಪ್ಪ ಒಟ್ಟಿಗೆ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ವರಿಷ್ಠರ ಬಳಿಯಾಗಲಿ ಅಥವಾ ರಾಜ್ಯಪಾಲರ ಬಳಿ ಹೋಗುವ ಅಗತ್ಯವಿಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ.
ಮುಖ್ಯಮಂತ್ರಿಯವರು ಹಣಕಾಸು ಸಚಿವರಾಗಿರುವುದರಿಂದ ನೇರವಾಗಿ ಹಣ ಬಿಡುಗಡೆ ಮಾಡುವ ಅಧಿಕಾರ ಇದೆ. ಸಂಬಂಧಪಟ್ಟ ಸಚಿವರ ಜವಾಬ್ದಾರಿಯೂ ಅಷ್ಟೇ ಇದೆ. ಪ್ರವಾಹ ಮತ್ತು ಕೋವಿಡ್ ಕಾರಣದಿಂದ ಗ್ರಾಮಾಂತರ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸಗಳು ನಿಂತು ಹೋಗಿವೆ. ಹಣಕಾಸು ಪರಿಸ್ಥಿತಿ ತುಂಬಾ ಕಷ್ಟವಿತ್ತು.4–5 ತಿಂಗಳಲ್ಲಿ ಚೇತರಿಕೆ ಆಗಿದೆ. ಈ ಹಂತದಲ್ಲಿ ಬದ್ಧ ವೆಚ್ಚವನ್ನು ಪರಿಶೀಲಿಸಿ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿಯವರ ಹಣ ಬಿಡುಗಡೆ ಮಾಡಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ಸರ್ಕಾರದ ವರ್ಚಸ್ಸಿಗೆ ಧಕ್ಕೆ: ಸಚಿವ ಈಶ್ವರಪ್ಪ ಅವರು ಏನೇ ಸಮಸ್ಯೆ ಇದ್ದರೂ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಬಗೆಹರಿಸಿಕೊಳ್ಳಬೇಕು, ರಾಜ್ಯಪಾಲರು, ಪ್ರಧಾನಿಯವರಿಗೆ ದೂರು ಕೊಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಉಪಚುನಾವಣೆ ಸಂದರ್ಭದಲ್ಲಿ ಈ ರೀತಿ ಆದರೆ ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗುತ್ತದೆ. ಆದ್ದರಿಂದ ನಾಲ್ಕು ಗೋಡಗಳ ಮಧ್ಯೆ ಕುಳಿತು ಚರ್ಚೆ ಮಾಡಬೇಕು. ನಾವು ಹಲವು ಶಾಸಕರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಗ್ರಾಮೀಣಾಭಿವೃದ್ಧಿಗೆ ಅನುದಾನ ಬಿಡಬೇಕು ಎಂದು ಮನವಿ ಮಾಡಿದ್ದೆವು. ನಮ್ಮ ಒತ್ತಾಯಕ್ಕೆ ಮಣಿದು, ಅಭಿವೃದ್ಧಿ ಕೆಲಸಗಳು ಬೇಗನೆ ಆಗಬೇಕು ಎಂಬ ಕಾರಣಕ್ಕೆ ಅನುದಾನ ಬಿಡುಗಡೆ ಮಾಡಿದ್ದಾರೆ. ಯಡಿಯೂರಪ್ಪ ಅವರು ಈಶ್ವರಪ್ಪ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.