ADVERTISEMENT

ರೇಣುಕಸ್ವಾಮಿ ಹತ್ಯೆ ಪ್ರಕರಣ | ಸಚಿವ, ಶಾಸಕರ ಒತ್ತಡ ಇಲ್ಲ: ಪರಮೇಶ್ವರ್‌

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 15:38 IST
Last Updated 18 ಜೂನ್ 2024, 15:38 IST
ಚಿತ್ರದುರ್ಗದಲ್ಲಿನ ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದ ಗೃಹಸಚಿವ ಡಾ.ಜಿ.ಪರಮೇಶ್ವರ್‌ ಎದುರು ರೇಣುಕಸ್ವಾಮಿ ಪತ್ನಿ, ತಂದೆ ಹಾಗೂ ತಾಯಿ ನೋವು ತೋಡಿಕೊಂಡರು
ಚಿತ್ರದುರ್ಗದಲ್ಲಿನ ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದ ಗೃಹಸಚಿವ ಡಾ.ಜಿ.ಪರಮೇಶ್ವರ್‌ ಎದುರು ರೇಣುಕಸ್ವಾಮಿ ಪತ್ನಿ, ತಂದೆ ಹಾಗೂ ತಾಯಿ ನೋವು ತೋಡಿಕೊಂಡರು   

ಚಿತ್ರದುರ್ಗ: ‘ರೇಣುಕಸ್ವಾಮಿ ಹತ್ಯೆ ಪ್ರಕರಣದ ತನಿಖೆಯನ್ನು ನಮ್ಮ ಪೊಲೀಸರು ಸಮರ್ಥವಾಗಿ ನಡೆಸುತ್ತಿದ್ದಾರೆ. ಪೊಲೀಸರ ಮೇಲೆ ಯಾವುದೇ ಸಚಿವರಾಗಲೀ, ಶಾಸಕರಾಗಲೀ ಒತ್ತಡ ಹಾಕಿಲ್ಲ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಅವಶ್ಯಕತೆ ಇಲ್ಲ’ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.

ರೇಣುಕಸ್ವಾಮಿ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘ರೇಣುಕಸ್ವಾಮಿ ಹತ್ಯೆ ಪ್ರಕರಣದ ಕುರಿತು ಕೆಲವರು ರಾಜಕೀಯ ಹೇಳಿಕೆ ನೀಡುತ್ತಿರುವುದನ್ನು ಗಮನಿಸುತ್ತಿದ್ದೇನೆ. ತನಿಖೆ ನ್ಯಾಯಯುತವಾಗಿ ನಡೆಯುತ್ತಿದೆ. ಇದನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು’ ಎಂದರು.

ADVERTISEMENT

‘ಘಟನೆ ನಡೆದು 48 ಗಂಟೆಯೊಳಗೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾರ ಮುಲಾಜು, ಒತ್ತಡಕ್ಕೂ ಅವರು ಒಳಗಾಗಿಲ್ಲ. ಇಲ್ಲಿಯವರೆಗೆ 17 ಜನ ಆರೋಪಿಗಳನ್ನು ಬಂಧಿಸಲಾಗಿದೆ. ತ್ವರಿತಗತಿಯಲ್ಲಿ ಎಲ್ಲ ಮಾಹಿತಿಗಳನ್ನೂ ಕಲೆಹಾಕಿದ್ದಾರೆ. ಆರೋಪಿಗಳ ವಿರುದ್ಧ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು. 

‘ರೇಣುಕಸ್ವಾಮಿ ಪತ್ನಿ, ತಂದೆ–ತಾಯಿಯನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದೇನೆ. ಈ ಘಟನೆ ನಡೆಯಬಾರದಿತ್ತು. ನಮಗೂ ನೋವಾಗಿದೆ. ರೇಣುಕಸ್ವಾಮಿ ಪತ್ನಿಗೆ ಸರ್ಕಾರಿ ಕೆಲಸ ನೀಡುವಂತೆ ಕುಟುಂಬ ಸದಸ್ಯರು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ವೈಯಕ್ತಿಕವಾಗಿ ₹ 2 ಲಕ್ಷ ನೆರವಿನ ಚೆಕ್‌ ವಿತರಿಸಿದರು.

ಕಾನೂನು ನೆರವಿಗೆ ಕುಟುಂಬಸ್ಥರ ಮನವಿ

ಆರೋಪಿಗಳ ವಿರುದ್ಧ ರೇಣುಕಸ್ವಾಮಿ ಕುಟುಂಬ ಸದಸ್ಯರೂ ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಸರ್ಕಾರದಿಂದಲೇ ವಕೀಲರೊಬ್ಬರನ್ನು ನೇಮಿಸಿಕೊಡಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದರು.

‘ಪೊಲೀಸರ ಕ್ರಮದ ಬಗ್ಗೆ ಸಮಾಧಾನವಿದೆ. ಆದರೆ, ಆರೋಪಿಗಳು ಪ್ರಭಾವಿಗಳಾಗಿದ್ದಾರೆ. ತನಿಖೆಯ ದಿಕ್ಕು ತಪ್ಪಿಸುವ ಸಾಧ್ಯತೆ ಇದೆ. ಜಾಮೀನಿನ ಮೇಲೆ ಹೊರಬಂದು ಸಾಕ್ಷ್ಯ ನಾಶಪಡಿಸುವ ಸಂಭವವೂ ಇದೆ. ಸರ್ಕಾರಿ ಅಭಿಯೋಜಕರ ಜೊತೆಗೆ ನಮ್ಮ ಕಡೆಯಿಂದ ವಕೀಲರೊಬ್ಬರನ್ನು ನೇಮಿಸಬೇಕು. ಇದಕ್ಕಾಗಿ ಸರ್ಕಾರವೇ ನೆರವು ನೀಡಬೇಕು’ ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಬಿಜೆಪಿಯಿಂದ ₹ 2 ಲಕ್ಷ ನೆರವು

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರೇಣುಕಸ್ವಾಮಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

‘ಪಕ್ಷದ ವತಿಯಿಂದ ಕುಟುಂಬ ಸದಸ್ಯರಿಗೆ ₹ 2 ಲಕ್ಷ ನೆರವು ನೀಡಿದ್ದೇವೆ. ಈ ಅಮಾನುಷ ಕೃತ್ಯದ ಕುರಿತು ರಾಷ್ಟ್ರಮಟ್ಟದಲ್ಲೂ ಚರ್ಚೆಯಾಗುತ್ತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದರು. 

‘ಆರೋಪಿಗಳು ಎಷ್ಟೇ ಪ್ರಭಾವಿಗಳಾದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ತನಿಖೆ ದಿಕ್ಕು ತಪ್ಪದಂತೆ ನೋಡಿಕೊಳ್ಳಬೇಕು. ಈ ವಿಷಯದಲ್ಲಿ ನಾವು ರಾಜಕಾರಣ ಮಾಡುವುದಿಲ್ಲ. ರೇಣುಕಸ್ವಾಮಿ ಪತ್ನಿಗೆ ಸರ್ಕಾರಿ ಕೆಲಸ ಕೊಡಿಸಬೇಕು’ ಎಂದು ಒತ್ತಾಯಿಸಿದರು.

ಕಾನೂನಿನ ನೆರವಿಗೆ ಕುಟುಂಬಸ್ಥರ ಮನವಿ ಆರೋಪಿಗಳ ವಿರುದ್ಧ ರೇಣುಕಸ್ವಾಮಿ ಕುಟುಂಬ ಸದಸ್ಯರೂ ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಸರ್ಕಾರದಿಂದಲೇ ವಕೀಲರೊಬ್ಬರನ್ನು ನೇಮಿಸಿಕೊಡಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರಿಗೆ ಮನವಿ ಸಲ್ಲಿಸಿದರು. ‘ಪೊಲೀಸರ ಕ್ರಮದ ಬಗ್ಗೆ ಸಮಾಧಾನವಿದೆ. ಆದರೆ ಆರೋಪಿಗಳು ಪ್ರಭಾವಿಗಳಾಗಿದ್ದಾರೆ. ತನಿಖೆಯ ದಿಕ್ಕು ತಪ್ಪಿಸುವ ಸಾಧ್ಯತೆ ಇದೆ. ಜಾಮೀನಿನ ಮೇಲೆ ಹೊರಬಂದು ಸಾಕ್ಷ್ಯ ನಾಶಪಡಿಸುವ ಸಂಭವವೂ ಇದೆ. ಸರ್ಕಾರಿ ಅಭಿಯೋಜಕರ ಜೊತೆಗೆ ನಮ್ಮ ಕಡೆಯಿಂದ ವಕೀಲರೊಬ್ಬರನ್ನು ನೇಮಿಸಬೇಕು. ಇದಕ್ಕಾಗಿ ಸರ್ಕಾರವೇ ನೆರವು ನೀಡಬೇಕು’ ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

‘2021ರಲ್ಲಿ ದರ್ಶನ್‌ ಅವರ ಒಳ್ಳೆಯದ್ದಕ್ಕೆ ನಾನು ಹೇಳಿದ್ದೆ. ಅವತ್ತು ಸುಧಾರಣೆಯಾಗಿದ್ದರೆ, ಇಂದು ಈ ಅನಾಹುತ ಆಗುತ್ತಿರಲಿಲ್ಲ. ರೇಣುಕಸ್ವಾಮಿ ಪತ್ನಿಗೆ ನ್ಯಾಯ ಕೊಡಿಸಬೇಕು. ವೈಯಕ್ತಿಕವಾಗಿ ₹20 ಸಾವಿರ ನೆರವು ನೀಡುತ್ತೇನೆ. ಚಿತ್ರರಂಗದವರು ಕೂಡ ಆರ್ಥಿಕ ನೆರವು ನೀಡಲಿ.
–ಇಂದ್ರಜಿತ್‌ ಲಂಕೇಶ್‌, ಚಲನಚಿತ್ರ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.