ಮಡಿಕೇರಿ: ಮುಂಗಾರು ಮಳೆಯ ಸಂದರ್ಭದಲ್ಲಿ ಕೊಡಗಿನ ಹೋಂ ಸ್ಟೇಗಳಲ್ಲಿ ವಾಸ್ತವ್ಯ ಮಾಡಬೇಕು ಅಂದುಕೊಂಡ ಪ್ರವಾಸಿಗರ ಕನಸು ಈ ಬಾರಿ ಈಡೇರುವುದು ಕಷ್ಟ. ಏಕೆಂದರೆ ಮಳೆಗಾಲದ ಮೂರು ತಿಂಗಳು, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರವಾಸಿಗರಿಗೆ ಹೋಮ್ ಸ್ಟೇಗಳು ಸಿಗುವುದಿಲ್ಲ.
ಜಿಲ್ಲೆಯ 13 ಗ್ರಾಮಗಳನ್ನು ಸೂಕ್ಷ್ಮ ಪ್ರದೇಶಗಳ ಪಟ್ಟಿಗೆ ಸೇರಿಸಲಾಗಿದ್ದು ಅಲ್ಲಿ ಭೂಕುಸಿತ ಸಾಧ್ಯತೆಯಿದೆ ಎಂದು ಭೂವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಎಚ್ಚರಿಕೆಯ ಬೆನ್ನಲ್ಲೇ ಜೂನ್, ಜುಲೈ ಹಾಗೂ ಆಗಸ್ಟ್‌ನಲ್ಲಿ ಹೋಂಸ್ಟೇ ಕಾಯ್ದಿರಿಸುವ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಮಕ್ಕಂದೂರು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಚೆಂಗಪ್ಪ ಸೂಚನೆ ನೀಡಿದ್ದಾರೆ.
‘ಈ ಪಂಚಾಯ್ತಿ ವ್ಯಾಪ್ತಿಯ ಎರಡು ಗ್ರಾಮಗಳಲ್ಲಿ ನೋಂದಣಿಯಾದ 21 ಹೋಂಸ್ಟೇ ಹಾಗೂ ಒಂದು ರೆಸಾರ್ಟ್ ಇದೆ. ಮಳೆಗಾಲ ಮುಕ್ತಾಯವಾಗುವ ತನಕವೂ ಮುನ್ನೆಚ್ಚರಿಕಾ ಕ್ರಮವಾಗಿ ಹೋಂಸ್ಟೇ ಬುಕಿಂಗ್ ಸೇವೆ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಭೂಕುಸಿತ– ರಸ್ತೆ ಸಂಪರ್ಕ ಕಡಿತದಿಂದ ಪ್ರವಾಸಿಗರಿಗೆ ತೊಂದರೆ ಆಗಬಾರದೆಂದು ಈ ಕ್ರಮ ಕೈಗೊಳ್ಳಲಾಗಿದೆ. ಇದೊಂದು ಮಳೆಗಾಲದಲ್ಲಿ ಸ್ಥಳೀಯರು ಎಚ್ಚರಿಕೆಯಿಂದ ಇರಲು ಕೋರಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಭೂವಿಜ್ಞಾನಿಗಳ ವರದಿಯಂತೆ ಮಡಿಕೇರಿ ತಾಲ್ಲೂಕಿನ ನಿಡುವಟ್ಟು, ಬಾರಿಬೆಳಚ್ಚು, ಹೆಬ್ಬಟ್ಟಗೇರಿ, ದೇವಸ್ತೂರು, ತಂತಿಪಾಲ, ಬಾಡಿಗೇರಿ, ಮುಕ್ಕೊಡ್ಲು, ಮೇಘತ್ತಾಳು, ಮಕ್ಕಂದೂರು, ಉದಯಗಿರಿ, ಕಾಟಕೇರಿ, ಮದೆ (ಜೋಡುಪಾಲ), 2ನೇ ಮೊಣ್ಣಂಗೇರಿ ಗ್ರಾಮಗಳನ್ನು ಸೂಕ್ಷ್ಮ ಪ್ರದೇಶದ ಪಟ್ಟಿಗೆ ಸೇರಿಸಲಾಗಿದೆ. ಕಳೆದ ವರ್ಷ ಇಲ್ಲಿ ದೊಡ್ಡ ಪ್ರಮಾಣದ ಭೂಕುಸಿತ ಸಂಭವಿಸಿತ್ತು. ಇಲ್ಲೂ ಹೋಂಸ್ಟೇ ವಾಸ್ತವ್ಯಕ್ಕೆ ಅವಕಾಶ ನೀಡದಂತೆ ಸೂಚಿಸಲಾಗಿದೆ.
ಸೂಚನೆ ಮೀರಿ ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಅವಕಾಶ ನೀಡಿದರೆ ಮಾಲೀಕರನ್ನೇ ಹೊಣೆ ಮಾಡುವುದಾಗಿಯೂ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
’13 ಸೂಕ್ಷ್ಮ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ತೊಂದರೆ ಇಲ್ಲ. ಮಳೆಗಾಲದಲ್ಲೂ ಉಳಿದ ಪ್ರದೇಶಕ್ಕೆ ವೀಕ್ಷಿಸಲು ಬರಬಹುದು. ಆದರೆ, 2018ರಲ್ಲಿ ಭೂಕುಸಿತವಾಗಿದ್ದ ಪ್ರದೇಶದ ವೀಕ್ಷಣೆಗೆ ಅವಕಾಶ ಇರುವುದಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದರು.
ನಿರಾಶ್ರಿತರ ವಾಸ್ತವ್ಯಕ್ಕೆ ಹೋಮ್ ಸ್ಟೇ ಬಳಕೆ
‘ಈ ಬಾರಿಯೂ ಅತಿವೃಷ್ಟಿಯಿಂದ ಭೂಕುಸಿತ ಹಾಗೂ ಪ್ರವಾಹ ಉಂಟಾದರೆ, ಜಿಲ್ಲೆಯ ಸುರಕ್ಷಿತ ಪ್ರದೇಶದಲ್ಲಿರುವ ಹೋಂಸ್ಟೇಗಳನ್ನು ನಿರಾಶ್ರಿತರ ವಾಸ್ತವ್ಯಕ್ಕೆ ಬಳಸಿಕೊಳ್ಳಲು ಚಿಂತಿಸಲಾಗಿದೆ.ಮಳೆ ಪರಿಸ್ಥಿತಿ ನೋಡಿಕೊಂಡು ಅಂತಿಮ ತೀರ್ಮಾನ ಮಾಡುತ್ತೇವೆ’ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿ ರಾಘವೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.
ಕಳೆದ ಬಾರಿಸಂತ್ರಸ್ತರನ್ನು ರಕ್ಷಿಸಿದ ಬಳಿಕ ಸಮುದಾಯ ಭವನ,ವಿದ್ಯಾರ್ಥಿ ನಿಲಯ, ಶಾಲಾ– ಕಾಲೇಜುಗಳಲ್ಲಿ 55 ಪರಿಹಾರ ಕೇಂದ್ರ ತೆರೆದು ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಈ ಬಾರಿ, ಪರಿಹಾರ ಕೇಂದ್ರಗಳಿಗಾಗಿ ಮೊದಲೇ ಸೂಕ್ತ ಸ್ಥಳಗಳನ್ನು ಜಿಲ್ಲಾಡಳಿತ ಗುರುತಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.