ADVERTISEMENT

ಹನಿಟ್ರ್ಯಾಪ್‌: ಬಿಜೆಪಿ ಶಾಸಕರೇ ಗುರಿ?

ಶಾಸಕರ ಭವನದಲ್ಲೇ ನಟಿಮಣಿಯರ ಜತೆ ಮಾತುಕತೆ, ರಹಸ್ಯ ಕ್ಯಾಮೆರಾಗಳಲ್ಲಿ ಚಿತ್ರೀಕರಣ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 18:06 IST
Last Updated 30 ನವೆಂಬರ್ 2019, 18:06 IST
ಹನಿಟ್ರ್ಯಾಪ್‌
ಹನಿಟ್ರ್ಯಾಪ್‌   

ಬೆಂಗಳೂರು: ರಾಜ್ಯದಲ್ಲಿ ಸಕ್ರಿಯವಾಗಿದ್ದ ಹನಿಟ್ರ್ಯಾಪ್‌ ಜಾಲವು ಬಿಜೆಪಿ ಶಾಸಕರನ್ನೇ ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಜಾಲ ಹೆಚ್ಚು ಸಕ್ರಿಯವಾಗಿದ್ದು, ಯಾರನ್ನು ಸುಲಭವಾಗಿ ಹನಿ‌ಟ್ರ್ಯಾಪ್‌ ಬಲೆಗೆ ಕೆಡವಬಹುದು ಎಂಬ ಲೆಕ್ಕಾಚಾರದೊಂದಿಗೆ ಕಾರ್ಯಾಚರಣೆ ನಡೆಸಿದೆ ಎಂದೂ ಹೇಳಲಾಗುತ್ತಿದೆ.

ಮಧ್ಯಪ್ರದೇಶದ ಬೆರಳೆಣಿಕೆ ಮಹಿಳೆಯರು ಅಲ್ಲಿನ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳನ್ನು ಹನಿಟ್ರ್ಯಾಪ್‌ ಮಾಡಲು ಬಳಸಿದ ವಿಧಾನವನ್ನೇ ರಾಜ್ಯದ ಶಾಸಕರನ್ನು ಮೋಹ ಜಾಲದಲ್ಲಿ ಕೆಡವಲು ಟಿ.ವಿ ಧಾರಾವಾಹಿಯ ಇಬ್ಬರು ನಟಿಯರು ಮತ್ತು ಅವರ ಸಹಚರರೂ ಅನುಕರಿಸಿದ್ದಾರೆ.

ADVERTISEMENT

ಅಲ್ಲಿ ರಾಜಕಾರಣಿಗಳು, ಅಧಿಕಾರಿ ಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಪರಿಚಯಿಸಿಕೊಂಡು, ಹಿಂದೆ ಬಿದ್ದು ಹನಿಟ್ರ್ಯಾಪ್‌ ಬಲೆಗೆ ಕೆಡವಿದ ವಿಧಾನವನ್ನೇ ಇಲ್ಲೂ ಬಳಸಲಾಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಪೊಲೀಸರು ನಡೆಸಿದ ತನಿಖೆಯೂ ಇದನ್ನು ಖಚಿತಪಡಿಸಿದೆ.

ಗದಗ ಜಿಲ್ಲೆಯ ಶಾಸಕರೊಬ್ಬರ ಮೊಬೈಲ್‌ಗೆ ಕರೆ ಮಾಡಿ ಪರಿಚಯಿಸಿ ಕೊಳ್ಳುವ ಧಾರಾವಾಹಿ ನಟಿಯರು, ಅವರನ್ನು ಖುದ್ದು ಭೇಟಿ ಮಾಡುವ ಇಂಗಿತ ವ್ಯ‌ಕ್ತಪಡಿಸುತ್ತಾರೆ. ಶಾಸಕರು ಹುಬ್ಬಳ್ಳಿಗೆ ಹೋಗಲು ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಸಮಯದಲ್ಲಿ ಕರೆ ಮಾಡುತ್ತಾರೆ. ಭೇಟಿ ಮಾಡಬೇಕೆಂದು ಪೀಡಿಸುತ್ತಾರೆ. ಆದರೆ, ಅವರು ಅವಸರದಲ್ಲಿ ಇದ್ದುದ್ದರಿಂದ ಭೇಟಿ ಸಾಧ್ಯವಾಗುವುದಿಲ್ಲ. ಅದೇ ದಿನ ರಾತ್ರಿ 10ರ ಬಳಿಕ ಪುನಃ ಕರೆ ಮಾಡಲಾಗುತ್ತದೆ. ಹೀಗೆ ಬಹಳ ದಿನ ಮೊಬೈಲ್‌ನಲ್ಲಿ ನಡೆಯುವ ಮಾತುಕತೆ ಸರಸ– ಸಲ್ಲಾಪಕ್ಕೂ ತಿರುಗುತ್ತದೆ. ಆನಂತರ, ಒಮ್ಮೆ ಶಾಸಕರ ಭವನದಲ್ಲಿ ಮುಖಾಮುಖಿಯೂ ಆಗುತ್ತದೆ.

ಮಧ್ಯಪ್ರದೇಶದಂತೆ ಇಲ್ಲೂ ಕ್ಯಾಮೆರಾಗಳನ್ನು ರಹಸ್ಯವಾಗಿಟ್ಟು, ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಅನೇಕ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ಪರಿಚಯಿಸಿಕೊಂಡು, ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಲು ಈ ವಿಧಾನವನ್ನು ಬಳಸಲಾಗಿದೆ. ಬಳಿಕ ಬ್ಲ್ಯಾಕ್‌ಮೇಲ್‌ ಮಾಡಲಾಗಿದೆ. ಈ ಜಾಲದ ಆರೋಪಿಗಳ ಮೊಬೈಲ್‌ ಮತ್ತು ಕ್ಯಾಮೆರಾಗಳು ಸಿಸಿಬಿ ವಶದಲ್ಲಿರುವುದು ಕೆಲ ರಾಜಕಾರಣಿಗಳು ಮತ್ತು ಅಧಿಕಾರಿಗಳ ಎದೆಬಡಿತ ಹೆಚ್ಚಿಸಿದೆ ಎನ್ನಲಾಗಿದೆ.

ಸದ್ಯ, ಗದಗ, ಉಡುಪಿಯ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮೂವರು ಶಾಸಕರು ಹನಿಟ್ರ್ಯಾಪ್‌ ಬಲೆಗೆ ಬಿದ್ದಿರುವುದು ಖಚಿತವಾಗಿದೆ. ಇವರಲ್ಲಿ ಒಬ್ಬರು ಖಾಸಗಿಯಾಗಿ ಧಾರಾವಾಹಿ ನಟಿಯ ಜತೆ ಕಾಲಕಳೆದಿರುವ ವಿಡಿಯೊ ದೃಶ್ಯಾವಳಿಗಳು ಸಿಕ್ಕಿವೆ. ಇನ್ನೂ ಕೆಲವರಿಗೆ ಸಂಬಂಧಿಸಿದ ಡಿಜಿಟಲ್‌ ದಾಖಲೆಗಳನ್ನು ತನಿಖಾಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ಈ ಸಂಬಂಧ ಪೊಲೀಸರಿಗೆ ಬಂದಿರುವುದು ಒಂದು ದೂರು ಮಾತ್ರ.

‘ರಾಘವೇಂದ್ರ ಅಲಿಯಾಸ್ ರಾಘು ಎಂಬಾತ ಕರೆ ಮಾಡಿ, ಕೇಳಿದಷ್ಟು ಹಣ ಕೊಡದಿದ್ದರೆ ಟಿ.ವಿ ಮತ್ತು ಸಾಮಾಜಿಕ ಜಾಲತಾಣಗಳಿಗೆ ನಿಮ್ಮ ಖಾಸಗಿ ಕ್ಷಣದ ವಿಡಿಯೊವನ್ನು ಟಿ.ವಿ ಚಾನಲ್‌, ಸಾಮಾಜಿಕ ಜಾಲತಾಣಗಳಿಗೆ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದಾಗಿ ಮಾನಸಿಕ ನೆಮ್ಮದಿ ಹಾಳಾಗಿದೆ’ ಎಂದು ಗದಗ ಜಿಲ್ಲೆ ಶಾಸಕರೊಬ್ಬರು ಕೊಟ್ಟ ದೂರಿನ ಪರಿಣಾಮವಾಗಿ ಹನಿಟ್ರ್ಯಾಪ್‌ ಪ್ರಕರಣ ಬಹಿರಂಗವಾಗಿದೆ.ಕೆಲವರು ಮೌಖಿಕವಾಗಿ ಗೃಹ ಸಚಿವರಿಗೆ ದೂರು ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಕುರಿತ ಪ್ರತಿಕ್ರಿಯೆಗೆ ಬಿಜೆಪಿ ಮೂಲಗಳು ನಿರಾಕರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.