ಬಂಗಾರಪೇಟೆ (ಕೋಲಾರ): ತಾಲ್ಲೂಕಿನ ಬೋಡಗುರ್ಕಿ ಗ್ರಾಮದಲ್ಲಿ ಮಂಗಳವಾರ ಮರ್ಯಾದೆಗೇಡು ಹತ್ಯೆ ನಡೆದಿದೆ. ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ಮಗಳನ್ನು ಆಕೆಯ ತಂದೆಯೇ ಹತ್ಯೆ ಮಾಡಿದ್ದಾನೆ. ಪ್ರಿಯತಮೆಯ ಸಾವಿನ ಸುದ್ದಿ ತಿಳಿದು ಆಘಾತಕ್ಕೆ ಒಳಗಾದ ಯುವಕ ತಾನೂ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೋಡಗುರ್ಕಿ ಗ್ರಾಮದ ಪರಿಶಿಷ್ಟ ಜಾತಿಯ ಗಂಗಾಧರ್ (23) ಮತ್ತು ಗೊಲ್ಲ ಸಮುದಾಯದ ಕೀರ್ತಿ (20) ಪರಸ್ಪರ ಪ್ರೀತಿಸುತ್ತಿದ್ದರು. ಇದು ಗೊತ್ತಾಗಿ ಕೀರ್ತಿಯ ತಂದೆ ಕೃಷ್ಣಮೂರ್ತಿ ಮಂಗಳವಾರ ಬೆಳಗ್ಗೆ ತಮ್ಮ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ಈ ವಿಷಯ ಕೇಳದ ಯುವಕ ಮೈಸೂರು– ಚೆನ್ನೈ ಎಕ್ಸ್‌ಪ್ರೆಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವತಿಯ ತಂದೆಯನ್ನು ಪೊಲೀಸರು ಬಂಧಿಸಿದ್ದು, ಕಾಮಸಮುದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಜಿಎಫ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಓದುತ್ತಿದ್ದ ಕೀರ್ತಿ ಮತ್ತು ಯುವಕನ ಮನೆ ಒಂದೇ ಕಡೆ ಇವೆ. ದ್ವಿತೀಯ ಪಿಯುಸಿ ಅನುತ್ತೀರ್ಣನಾಗಿದ್ದ ಗಂಗಾಧರ್ ಗಾರೆ ಕೆಲಸ ಮಾಡುತ್ತಿದ್ದ. ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರೂ ಮದುವೆಯಾಗಲು ತೀರ್ಮಾನಿಸಿದ್ದರು. ಈ ವಿಚಾರ ಯುವತಿಯ ಕುಟುಂಬಕ್ಕೆ ಗೊತ್ತಾಗಿ ವಿರೋಧ ವ್ಯಕ್ತಪಡಿಸಿದ್ದರು.
‘ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ಕೀರ್ತಿ ಹಟ ಹಿಡಿದಿದ್ದಳು. ಈ ಸಂಬಂಧ ಯುವತಿಯ ಮನೆಯಲ್ಲಿ ಸೋಮವಾರ ರಾತ್ರಿ ಜಗಳ ನಡೆದಿತ್ತು. ಮಂಗಳವಾರ ಬೆಳಿಗ್ಗೆ ಕೃಷ್ಣಮೂರ್ತಿ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಇದು ಗೊತ್ತಾಗಿ ಯುವಕ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಧರಣಿದೇವಿ ಮಾಲಗತ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.