ADVERTISEMENT

ಹುಕ್ಕಾ ಸಿ.ಟಿ.ರವಿ ಸಂಸ್ಕೃತಿ: ಯು.ಟಿ. ಖಾದರ್ ವ್ಯಂಗ್ಯ

ತಿರುಗೇಟು ನೀಡಿದ ಶಾಸಕ ಯು.ಟಿ. ಖಾದರ್

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 13:20 IST
Last Updated 13 ಆಗಸ್ಟ್ 2021, 13:20 IST
ಯು.ಟಿ ಖಾದರ್‌
ಯು.ಟಿ ಖಾದರ್‌   

ಮಂಗಳೂರು: ಕಾಂಗ್ರೆಸ್ ಕಚೇರಿಗಳಲ್ಲಿ ನೆಹರೂ ಹೆಸರಿನಲ್ಲಿ ಹುಕ್ಕಾ ಬಾರ್ ತೆರೆಯುವ ಕುರಿತು ಬಿಜೆಪಿ ಮುಖಂಡ ಸಿ.ಟಿ. ರವಿ ನೀಡಿರುವ ಹೇಳಿಕೆಯನ್ನು ಶಾಸಕ ಯು.ಟಿ.ಖಾದರ್ ಖಂಡಿಸಿದ್ದಾರೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹುಕ್ಕಾ ಬಾರ್ ಅಫೀಮು ಆಗಿದ್ದು, ಅದು ಸಿ.ಟಿ.ರವಿ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಎರಡು ವರ್ಷಗಳಲ್ಲಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಜನಸಾಮಾನ್ಯರಿಗೆ ಅನುಕೂಲ ಆಗುವ ಯಾವುದೇ ಜನಪರ ಯೋಜನೆ ಜಾರಿಗೊಳಿಸಿದ್ದರೆ ಅದರ ಬಗ್ಗೆ ರವಿ ಮಾತನಾಡಲಿ’ ಎಂದು ಸವಾಲು ಹಾಕಿದರು.

ಕೋಮುವಾದದ ಅಫೀಮು ಹೊಂದಿರುವವರು ಹುಕ್ಕಾ ಬಾರ್ ಸಂಸ್ಕೃತಿ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ಬಡವರ ಪರವಾಗಿದ್ದು, ಹಸಿದವರಿಗೆ ಅನ್ನ ಕೊಡುವ ಯೋಜನೆ ಬಗ್ಗೆ ಯೋಚಿಸುತ್ತದೆ. ಇದೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವ್ಯತ್ಯಾಸ ಎಂದರು.

ಬಿಜೆಪಿ ಸರ್ಕಾರ ಕಾಂಗ್ರೆಸ್‍ನ ಜನಪ್ರಿಯ ಯೋಜನೆಗಳ ಹೆಸರು ಬದಲಾಯಿಸಲು ಹೊರಟಿದೆ. ಇದರಲ್ಲೂ ಬಿಜೆಪಿ ರಾಜಕೀಯ ಲಾಭ ಯೋಚಿಸುವುದು ಸರಿಯಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇದ್ದಾಗ ಈ ಹಿಂದೆ ಇದ್ದ ವಾಜಪೇಯಿ ಆರೋಗ್ಯಶ್ರೀ ಹಾಗೂ ವಾಜಪೇಯಿ ವಸತಿ ಯೋಜನೆ ಹೆಸರನ್ನು ಹಾಗೆಯೇ ಮುಂದುವರಿಸಿದೆ. ಆದರೆ, ಕಾಂಗ್ರೆಸ್ ಜಾರಿಗೊಳಿಸಿದ ಇಂದಿರಾ ಕ್ಯಾಂಟೀನ್ ಹೆಸರನ್ನು ಬಿಜೆಪಿ ಬದಲಿಸಲು ಹೊರಟಿದೆ ಎಂದು ಖಾದರ್ ಆರೋಪಿಸಿದರು.

‘ಈಗಿನ ಸರ್ಕಾರಕ್ಕೆ ತಾಕತ್ತಿದ್ದರೆ ಹೊಸ ಯೋಜನೆ ಜಾರಿಗೊಳಿಸಿ, ಅದಕ್ಕೆ ಬೇಕಾದ ಹೆಸರು ಇಡಲಿ. ಅದು ಬಿಟ್ಟು ಕಾಂಗ್ರೆಸ್ ಜಾರಿಗೊಳಿಸಿದ್ದ ಯೋಜನೆಗಳಿಗೆ ಹೆಸರು ಬದಲಾಯಿಸಲು ಮುಂದಾಗಬಾರದು. ವಾಜಪೇಯಿ ಮೇಧಾವಿಯಾಗಿದ್ದು, ಅವರ ಹೆಸರಿಗೆ ಕಳಂಕ ತರುವ ಹಾಗೆ ಬಿಜೆಪಿಗರು ವರ್ತಿಸುತ್ತಿದ್ದಾರೆ. ವಾಜಪೇಯಿ ವಸತಿ ಯೋಜನೆಯಲ್ಲಿ ನಾವು ಮನೆ ನೀಡಿದ್ದೆವು. ಬಿಜೆಪಿಯವರು ಎಷ್ಟು ಮನೆ ಮಂಜೂರು ಮಾಡಿದ್ದಾರೆ ಎಂದು ಹೇಳಲಿ. ಅಲ್ಲದೆ ವಾಜಪೇಯಿ ಆರೋಗ್ಯಶ್ರೀ ಯೋಜನೆಯಲ್ಲಿ ಎಷ್ಟು ಮಂದಿ ಬಡವರಿಗೆ ಉಚಿತ ಚಿಕಿತ್ಸೆಗೆ ಕಲ್ಪಿಸಲಾಗಿದೆ’ ಎಂಬ ಮಾಹಿತಿಯನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

‘ಮಂಗಳೂರಿನಲ್ಲಿ ಮುಖ್ಯಮಂತ್ರಿ ನಡೆಸಿದ ಕೋವಿಡ್ ನಿರ್ವಹಣೆ ಸಭೆಯಲ್ಲಿ ನಾನು ಎನ್ 95 ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್ ಕೊರತೆ ಬಗ್ಗೆ ಪ್ರಸ್ತಾಪಿಸಿದ್ದೆ. ಆಗ ಮುಖ್ಯಮಂತ್ರಿ ಸಿಟ್ಟಿಗೆದ್ದು, ಜಿಲ್ಲಾಧಿಕಾರಿ ಹಾಗೂ ಆರೋಗ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಈ ಕೊರತೆ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲ, ಬೇರೆ ಜಿಲ್ಲೆಗಳಲ್ಲೂ ಇದೆ. ಈ ಸಂಬಂಧ ಆರೋಗ್ಯ ಇಲಾಖೆ ಆಯುಕ್ತರನ್ನು ಪ್ರಶ್ನಿಸಬೇಕಾಗಿತ್ತು’ ಎಂದು ಖಾದರ್ ಹೇಳಿದರು.

ADVERTISEMENT

‘ಸಿಎಂ ಭೇಟಿ ನಮ್ಮ ನಿರ್ಧಾರ’

ಮುಖ್ಯಮಂತ್ರಿ ಗಡಿಭಾಗದ ತಲಪಾಡಿ ಭೇಟಿಯನ್ನು ರದ್ದುಪಡಿಸಿದ್ದಕ್ಕೆ, ಗಡಿಭಾಗದ ಕೇರಳಿಗರು ಜಾಲತಾಣಗಳಲ್ಲಿ ವ್ಯಂಗ್ಯ ಮಾಡುತ್ತಿದ್ದಾರೆ. ಕೇರಳಿಗರ ಪ್ರತಿಭಟನೆಗೆ ಹೆದರಿ ಕರ್ನಾಟಕ ಸಿಎಂ ಬಂದಿಲ್ಲ ಎಂದು ಲೇವಡಿ ಮಾಡಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಎಲ್ಲಿ ಹೋಗಬೇಕು ಎಂಬುದು ನಮ್ಮ ನಿರ್ಧಾರವೇ ಹೊರತು ಕೇರಳಿಗರ ನಿರ್ಧಾರವಲ್ಲ. ಇದನ್ನು ನಾನು ಖಂಡಿಸುತ್ತೇನೆ’ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.

‘ಕೇರಳಿಗರಲ್ಲಿ ಶೇ 90 ಮಂದಿ ಒಳ್ಳೆಯವರಿದ್ದಾರೆ. ಶೇ 10 ಮಂದಿ ಮಾತ್ರ ಇಂತಹ ಕುಕೃತ್ಯ ನಡೆಸುತ್ತಿದ್ದಾರೆ. ಇಂತಹವರು ಕಾಸರಗೋಡಿನಿಂದ ಕಣ್ಣೂರಿಗೆ ಕೇರಳದಲ್ಲೇ ಪ್ರವೇಶ ನಿರ್ಬಂಧಿಸಿರುವ ಬಗ್ಗೆ ಮೊದಲು ಪ್ರಶ್ನಿಸಲಿ’ ಎಂದು ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.