ADVERTISEMENT

ಕುದುರೆ ರೇಸ್‌ ಮೇಲ್ಮನವಿ: ಇಂದು ತೀರ್ಪು

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 0:31 IST
Last Updated 22 ಜೂನ್ 2024, 0:31 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: 'ಬೆಂಗಳೂರು ಟರ್ಫ್ ಕ್ಲಬ್‌’ನಲ್ಲಿ (ರೇಸ್ ಕೋರ್ಸ್–ಬಿಟಿಸಿ) ಕುದುರೆ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಿ ಏಕಸದಸ್ಯ ನ್ಯಾಯಪೀಠ ನೀಡಿದ್ದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ ಮೇಲ್ಮನವಿಗೆ ಸಂಬಂಧಿಸಿದ ತೀರ್ಪನ್ನು ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ ಶನಿವಾರ (ಜೂನ್‌ 22) ಬೆಳಿಗ್ಗೆ ಪ್ರಕಟಿಸಲಿದೆ.

ಈ ಕುರಿತ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ಮಧ್ಯಾಹ್ನದ ಕಲಾಪದಿಂದ ಆರಂಭಿಸಿ ರಾತ್ರಿ 7 ಗಂಟೆಯವರೆಗೂ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ‘ಬಿಟಿಸಿ ಆವರಣದಲ್ಲಿ ಬುಕ್ಕಿಗಳು ಕಾನೂನುಬಾಹಿರ ಚಟುವಟಿಕೆ ನಡೆಸುತ್ತಾರೆ. 2024ರ ಜನವರಿ 12ರಂದು ನಡೆಸಲಾದ ದಾಳಿಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದುದು ಬೆಳಕಿಗೆ ಬಂದಿದೆ. ಈ ಕುರಿತಂತೆ ಕ್ಲಬ್‌ನ ಅಧ್ಯಕ್ಷರು, ಸಿಇಒ ಮತ್ತು ಕಾರ್ಯದರ್ಶಿ ಸೇರಿದಂತೆ ಒಟ್ಟು 27 ಜನರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ’ ಎಂದರು.

ADVERTISEMENT

‘ಪುನಃ ಪರವಾನಗಿ ನೀಡಿದರೆ ಆವರಣದಲ್ಲಿ ಅಕ್ರಮ ಚಟುವಟಿಕೆಗಳು ತಲೆ ಎತ್ತುತ್ತವೆ. ಇಲ್ಲಿ ಜೂಜಾಡುವವರು ಆಟೊ ರಿಕ್ಷಾ, ಟ್ಯಾಕ್ಸಿ ಚಾಲಕರಂತಹ ಬಡ ಕುಟುಂಬದವರು. ಇಂಥವರೆಲ್ಲಾ ಇವರ ಮೋಸಕ್ಕೆ ಬಲಿಯಾಗುತ್ತಾರೆ. ಹೀಗಾಗಿ, ಈ ಅಕ್ರಮ ಚಟುವಟಿಕೆಗಳನ್ನು ತಡೆಯಬೇಕಾದ್ದು ಸರ್ಕಾರದ ಆದ್ಯ ಕರ್ತವ್ಯವಾಗಿದೆ’ ಎಂದು ಪ್ರತಿಪಾದಿಸಿದರು.

ಸರ್ಕಾರದ ವಾದವನ್ನು ಬಲವಾಗಿ ಅಲ್ಲಗಳೆದ, ‘ಬೆಂಗಳೂರು ಟರ್ಫ್‌ ಕ್ಲಬ್‌’ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್‌.ಎಸ್‌.ನಾಗಾನಂದ ಅವರು, ‘ಈ ಕ್ಲಬ್‌ ಕಳೆದ 150 ವರ್ಷಗಳಿಂದ ರೇಸ್‌ ನಡೆಸುತ್ತಾ ಬಂದಿದೆ. ಆದರೆ, ಕಳೆದ ಮೂರು ತಿಂಗಳಿನಿಂದ ಪಂದ್ಯಾವಳಿ ಸ್ಥಗಿತಗೊಂಡಿವೆ. ಇದು ಅಧಿಕೃತವಾದ ರೇಸ್‌. ಸರ್ಕಾರ 2010ರಲ್ಲಿ ನಮಗೆ ಕ್ಲಬ್‌ನ ವಿಶಾಲವಾದ ಜಾಗ ಬಿಟ್ಟುಕೊಡುವಂತೆ ಕೇಳಿತ್ತು. ಈ ಕುರಿತಾದ ವ್ಯಾಜ್ಯ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು ಮತ್ತು ಯಥಾಸ್ಥಿತಿ ಕಾಪಾಡಿಕೊಂಡು ಹೋಗುವಂತಹ ಆದೇಶ ಇದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

‘ಕ್ಲಬ್‌ನ ಸುದೀರ್ಘ ಇತಿಹಾಸದಲ್ಲೇ ರಾಜ್ಯ ಸರ್ಕಾರ ಈಗ ಮೂರನೇ ಬಾರಿಗೆ ರೇಸ್‌ಗಳನ್ನು ನಿಲ್ಲಿಸಿದೆ. ಇದರಿಂದ ಕ್ಲಬ್‌ನ ಮೇಲೆ ಅವಲಂಬಿತವಾಗಿರುವ ಸುಮಾರು 20 ಸಾವಿರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ದಿನವೊಂದಕ್ಕೆ ಕೋಟಿ ರೂಪಾಯಿಗಳ ನಷ್ಟ ಉಂಟಾಗುತ್ತಿದೆ. ಇಲ್ಲಿ ಅಕ್ರಮಗಳು ನಡೆಯುವ ಸಾಧ್ಯತೆಗಳೇ ಇಲ್ಲ. ರೇಸ್‌ಕೋರ್ಸ್ ಆಡಳಿತ ಮಂಡಳಿಯಲ್ಲಿ ಸರ್ಕಾರದ ಹಣಕಾಸು ಕಾರ್ಯದರ್ಶಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರೂ ಸದಸ್ಯರಾಗಿದ್ದಾರೆ. ಸರ್ಕಾರಕ್ಕೆ ಅಷ್ಟೊಂದು ಅನುಮಾನಗಳಿದ್ದರೆ ಪೊಲೀಸ್ ಕಣ್ಗಾವಲು ಇರಿಸಬಹುದು’ ಎಂದರು.

ಪ್ರತಿವಾದಿಗಳಾದ ‘ದಿ ಕರ್ನಾಟಕ ಟ್ರೈನರ್ಸ್‌ ಅಸೋಸಿಯೇಷನ್ಸ್’ ಪರ ಕೆ.ಬಿ.ಮೋನೇಶ್‌ ಕುಮಾರ್, ‘ಕರ್ನಾಟಕ ರೇಸ್ ಕುದುರೆ ಮಾಲೀಕರ ಸಂಘದ ಅಧ್ಯಕ್ಷ ಎಸ್‌.ಪದ್ಮನಾಭನ್‌ ಮತ್ತು ಗಿರೀಶ್‌ ಬಾಳಿಗ’ ಪರ ಹಿರಿಯ ವಕೀಲ ಕೆ.ಎನ್‌.ಫಣೀಂದ್ರ ಹಾಗೂ ‘ಕರ್ನಾಟಕ ಜಾಕಿಗಳ ಸಂಘ’ದ ಕೆ.ಆರ್.ವಸಂತ ಕುಮಾರ್ ಸೇರಿದಂತೆ ಒಟ್ಟು ಎಂಟು ಜನರ ಪರ ಹಿರಿಯ ವಕೀಲ ಡಿ.ಆರ್.ರವಿಶಂಕರ್‌ ವಾದ ಮಂಡಿಸಿದರು. ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ ಆದೇಶ ಕಾಯ್ದಿರಿಸಿತು.

ಏಕಸದಸ್ಯ ನ್ಯಾಯಪೀಠವು ತನ್ನ ಆದೇಶದಲ್ಲಿ, ‘ಬಿಟಿಸಿಯು, ಆನ್‌ ಕೋರ್ಸ್ (ಬೆಂಗಳೂರು) ಮತ್ತು ಆಫ್ ಕೋರ್ಸ್‌ (ಬೆಂಗಳೂರು ಹೊರತುಪಡಿಸಿದ ಸ್ಥಳಗಳು) ಮೂಲಕ ಪಂದ್ಯಗಳನ್ನು ಹಮ್ಮಿಕೊಳ್ಳಬಹುದಾಗಿದೆ. ಎಲ್ಲಾ ಪಂದ್ಯಗಳೂ, ಸರ್ಕಾರ ಈಗಾಗಲೇ 2024ರ ಮಾರ್ಚ್‌ನಲ್ಲಿ ನೀಡಿರುವ ಪರವಾನಗಿಗೆ ಅನುಗುಣವಾದ ಷರತ್ತು ಮತ್ತು ನಿಯಮಗಳಿಗೆ ಒಳಪಟ್ಟಿರುತ್ತವೆ. ಹಾಗೆಯೇ, ಪ್ರತಿವಾದಿಗಳು ರೇಸಿಂಗ್ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಸ್ವಾತಂತ್ಯ ಹೊಂದಿದ್ದಾರೆ’ ಎಂದು ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.