ADVERTISEMENT

ಗ್ರಾಹಕರಿಗೆ ಪಾರ್ಸೆಲ್‌ ಖರೀದಿಗೆ ಅವಕಾಶ ನೀಡಿ: ಹೋಟೆಲ್‌ಗಳ ಸಂಘ ಮನವಿ

ರಾಜ್ಯ ಹೋಟೆಲ್‌ಗಳ ಸಂಘ ಮನವಿ

​ಪ್ರಜಾವಾಣಿ ವಾರ್ತೆ
Published 4 ಮೇ 2021, 19:54 IST
Last Updated 4 ಮೇ 2021, 19:54 IST
ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘದ ಪದಾಧಿಕಾರಿಗಳು ಎನ್.ಮಂಜುನಾಥ್ ಪ್ರಸಾದ್‌ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘದ ಪದಾಧಿಕಾರಿಗಳು ಎನ್.ಮಂಜುನಾಥ್ ಪ್ರಸಾದ್‌ ಅವರಿಗೆ ಮನವಿ ಸಲ್ಲಿಸಿದರು.   

ಬೆಂಗಳೂರು: ‘ಹೋಟೆಲ್‌ಗಳಲ್ಲಿ ಪಾರ್ಸೆಲ್ ಸೇವೆಗೆ ಅವಕಾಶ ಇದ್ದರೂ ಖರೀದಿಗೆ ಬರಲು ಗ್ರಾಹಕರಿಗೆ ಅನುಮತಿ ಇಲ್ಲ. ಬೆಳಿಗ್ಗೆ 10ರ ನಂತರವೂ ಗ್ರಾಹಕರು ಹೋಟೆಲ್‌ಗಳಿಗೆ ಬರಲು ಅವಕಾಶ ಕಲ್ಪಿಸಬೇಕು’ ಎಂದು ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ (ಕೆಎಸ್‌ಎಚ್‌ಎ) ಮನವಿ ಮಾಡಿದೆ.

ಈ ಸಂಬಂಧ ಸಂಘದ ನಿಯೋಗವು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಎನ್.ಮಂಜುನಾಥ ಪ್ರಸಾದ್‌ ಅವರನ್ನು ಮಂಗಳವಾರ ಭೇಟಿಯಾಗಿ ಮನವಿ ಸಲ್ಲಿಸಿದೆ.

‘ಕರ್ಫ್ಯೂ ವೇಳೆ ಅಗತ್ಯ ಸೇವೆಯಡಿ ಹೋಟೆಲ್‌ಗಳಲ್ಲಿ ಪಾರ್ಸೆಲ್ ತೆಗೆದುಕೊಳ್ಳಲು ಸರ್ಕಾರವೇ ಅನುಮತಿ ನೀಡಿದೆ. ಆದರೆ, ಬೆಳಿಗ್ಗೆ 10 ಗಂಟೆಯ ಬಳಿಕ ಸಾರ್ವಜನಿಕರ ಸಂಚಾರಕ್ಕೆ ಅನುಮತಿ ಇಲ್ಲ. ಊಟ ತರಲೆಂದು ಬರುವವರನ್ನು ಪೊಲೀಸರು ತಡೆಯುತ್ತಾರೆ.‌ಈ ಪರಿಸ್ಥಿತಿಯಲ್ಲಿ ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಅವಕಾಶ ನೀಡಿ ಏನು ಪ್ರಯೋಜನ?’ ಎಂದು ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ಪ್ರಶ್ನಿಸಿದರು.

ADVERTISEMENT

‘ಕರ್ಫ್ಯೂ ವೇಳೆಆಹಾರ ಪೂರೈಸುವ ಸಂಸ್ಥೆಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ, ಅವರಿಂದಲೇ ಆಹಾರ ತರಿಸಿಕೊಳ್ಳಿ’ ಎಂದು ಪೊಲೀಸರು ಹಸಿದ ಗ್ರಾಹಕರನ್ನು ಗದರುತ್ತಾರೆ.ಎಲ್ಲ ಹೋಟೆಲ್‌ಗಳು ಆಹಾರ ಪೂರೈಸುವ ಸಂಸ್ಥೆಗಳೊಂದಿಗೆ ಸಂಯೋಜನೆಯಾಗಿರುವುದಿಲ್ಲ. ಗ್ರಾಮೀಣ ಭಾಗದಲ್ಲಿ ಆಹಾರ ಪೂರೈಕೆ ಜಾಲವೂ ಇಲ್ಲ’ ಎಂದು ವಿವರಿಸಿದರು.

‘ನಿರ್ಮಾಣ ಕೆಲಸಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ಈಗ ಅನುಮತಿ ಇದ್ದು, ಅವರಿಗೂ ಆಹಾರಕ್ಕೆ ಸಮಸ್ಯೆಯಾಗುತ್ತಿದೆ. ಬಡವರಿಗೆ ಆನ್‌ಲೈನ್ ಮೂಲಕ ಆಹಾರ ತರಿಸಿಕೊಳ್ಳುವುದು ಕಷ್ಟಕರ. ಹಾಗಾಗಿ, ಆಹಾರ ಪಾರ್ಸೆಲ್‌ ಖರೀದಿಗೆ ಬರುವವರಿಗೆ ಕರ್ಫ್ಯೂ ವೇಳೆ ಅವಕಾಶ ನೀಡಬೇಕು. ಅವರಿಗೆ ಯಾವುದೇ ತಡೆ ಇರಬಾರದು’ ಎಂದೂ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.