ADVERTISEMENT

ದಸರಾ | ಮೈಸೂರಲ್ಲಿ ಹೋಟೆಲ್ ದರ ದುಬಾರಿ: ಈಗಾಗಲೇ ಶೇ 95ರಷ್ಟು ಕೊಠಡಿಗಳ ಬುಕ್ಕಿಂಗ್

ಪ್ರವಾಸಿ ವಾಹನಗಳಿಗೆ ಪ್ರವೇಶ ತೆರಿಗೆ ವಿನಾಯಿತಿ

ಎಂ.ಮಹೇಶ
Published 6 ಅಕ್ಟೋಬರ್ 2024, 23:30 IST
Last Updated 6 ಅಕ್ಟೋಬರ್ 2024, 23:30 IST
<div class="paragraphs"><p>ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಕೆ.ಆರ್. ವೃತ್ತ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿತು &nbsp;&nbsp;</p></div>

ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಕೆ.ಆರ್. ವೃತ್ತ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿತು   

   

ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಕಾರಣ ನಗರ ಮತ್ತು ಹೊರವಲಯದ ಹೋಟೆಲ್‌ ಹಾಗೂ ಲಾಡ್ಜ್‌ಗಳಲ್ಲಿ ಕೊಠಡಿಗಳಿಗೆ ಬೇಡಿಕೆ ಕಂಡುಬಂದಿದೆ. ಅದರಲ್ಲೂ ಉತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆ (ಜಂಬೂಸವಾರಿ) ನಡೆಯುವ ಅ.12 ಹಾಗೂ ಹಿಂದಿನ ದಿನ ಶೇ 95ರಷ್ಟು ಕೊಠಡಿಗಳು ಈಗಾಗಲೇ ಬುಕ್‌ ಆಗಿವೆ.

ADVERTISEMENT

ಪ್ರವಾಸಿಗರು ಕೊಠಡಿಗಳನ್ನು ಮುಂಗಡ ಕಾಯ್ದಿರಿಸುತ್ತಿದ್ದಾರೆ. ಇದರಿಂದಾಗಿ ಹೋಟೆಲ್‌ಗಳಲ್ಲಿ ಕೊಠಡಿಗಳ ಬಾಡಿಗೆ ದರವನ್ನು ಸರಾಸರಿ ಶೇ 10ರಿಂದ ಶೇ 30ರವರೆಗೆ ಹೆಚ್ಚಿಸಲಾಗಿದೆ. ಕೆಲವೇ ದಿನಗಳಲ್ಲಿ ಹೋಟೆಲ್‌ ಕೊಠಡಿಗಳು ಸಂಪೂರ್ಣ ಭರ್ತಿಯಾಗುವ ನಿರೀಕ್ಷೆ ಇದೆ.

ವಾರಾಂತ್ಯದಲ್ಲಿ ಅಂದರೆ ಶನಿವಾರ ಜಂಬೂಸವಾರಿ ನಡೆಯುತ್ತಿದೆ. ಅ.11ರಂದು ಆಯುಧಪೂಜೆ ಹಬ್ಬದ ಅಂಗವಾಗಿ ರಜೆ ಇದೆ. ಜಂಬೂಸವಾರಿ ಮುಗಿದ ಮರುದಿನ ಅಂದರೆ ಅ.13ರಂದು ಭಾನುವಾರವೂ ರಜೆ. ಹೀಗಾಗಿ, ಪ್ರವಾಸಿಗರು ಮೂರು ದಿನಗಳವರೆಗೆ ಮೈಸೂರು ಪ್ರವಾಸಕ್ಕೆ ಪ್ಲಾನ್‌ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ, ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರ ಗರಿಗೆದರಿದೆ. ಕೊಠಡಿಗಳಿಗೆ ಬಹಳಷ್ಟು ವಿಚಾರಣೆಗಳು ಬರುತ್ತಿವೆ ಎಂದು ಆ ಉದ್ಯಮದವರು ತಿಳಿಸಿದರು.

ರಜೆಯ ಕಾರಣ: ನಗರ ಕೇಂದ್ರವೊಂದರಲ್ಲೇ ವಾಸ್ತವ್ಯದ ಕೊಠಡಿಗಳನ್ನು ಹೊಂದಿರುವಂತಹ ಸ್ಟಾರ್‌ ಹೋಟೆಲ್‌ಗಳು ಸೇರಿದಂತೆ 400ಕ್ಕೂ ಹೆಚ್ಚು ಹೋಟೆಲ್‌ಗಳಿವೆ. ಇವುಗಳಲ್ಲಿ 10,500 ಕೊಠಡಿಗಳು ಲಭ್ಯ ಇವೆ.

‘ನಗರದ ಹೋಟೆಲ್‌ಗಳಲ್ಲಿ, ಜಂಬೂಸವಾರಿ ದಿನ, ಹಿಂದಿನ ದಿನ ಹಾಗೂ ಮುಂದಿನ ದಿನಕ್ಕೆ ರೂಂಗಳು ಈಗಾಗಲೇ ಶೇ 95ರಷ್ಟು ಬುಕ್ ಆಗಿವೆ. ಸಾಲು ಸಾಲು ರಜೆಯ ಕಾರಣದಿಂದಾಗಿ ಭಾನುವಾರದಿಂದ ಬುಧವಾರವರೆಗೆ ಶೇ 50ರಷ್ಟು ಬುಕ್‌ ಆಗಿವೆ. ನಂತರದ ದಿನಗಳಲ್ಲಿ ಶೇ 70ರಷ್ಟು ಕೊಠಡಿಗಳು ಮುಂಗಡ ಬುಕ್ಕಿಂಗ್‌ ಆಗಿವೆ. ಅ.10ರವರೆಗೆ ನಗರದ ಕೇಂದ್ರದಲ್ಲಿರುವ ಹೋಟೆಲ್‌ಗಳು ಫುಲ್‌ ಆಗಲಿವೆ’ ಎಂದು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಬಾರಿ ನಾಡಹಬ್ಬವನ್ನು ಅದ್ದೂರಿಯಾಗಿ ಮಾಡುತ್ತಿರುವುದು, ಕಾರ್ಯಕ್ರಮಗಳನ್ನು ಚೆನ್ನಾಗಿ ನಡೆಸುತ್ತಿರುವುದು, ರಜೆಗಳ ಕಾರಣದಿಂದಾಗಿ ಪ್ರವಾಸಿಗರು ಮೈಸೂರಿನತ್ತ ಬರುತ್ತಿದ್ದಾರೆ. ವಾರಾಂತ್ಯದಲ್ಲಿ ಅವರ ಪ್ರಮಾಣ ಜಾಸ್ತಿ ಕಂಡುಬರುತ್ತಿದೆ. ನೆರೆಯ ತಮಿಳುನಾಡು ಜೊತೆಗೆ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಜಂಬೂಸವಾರಿ ವೇಳೆಗೆ ವಿದೇಶಿ ಪ್ರವಾಸಿಗರನ್ನೂ ನಿರೀಕ್ಷಿಸಲಾಗುತ್ತಿದೆ. ದಸರೆಯೊಂದಿಗೆ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಪ್ರವಾಸಿಗರು ಕುಟುಂಬ ಸಮೇತ ಬರುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಸರ್ಕಾರವು, ಪ್ರತಿ ವರ್ಷದಂತೆ ಅ.4ರಿಂದ ಅ.12ರವರೆಗೆ ಪ್ರವಾಸಿ ವಾಹನಗಳಿಗೆ ಪ್ರವೇಶ ತೆರಿಗೆ ವಿನಾಯಿತಿ ನೀಡಿರುವುದು ಕೂಡ ಹೋಟೆಲ್‌ ಉದ್ಯಮಕ್ಕೆ ಚೈತನ್ಯ ನೀಡಲಿದೆ ಎನ್ನುತ್ತಾರೆ ಉದ್ಯಮಿಗಳು.

ದಸರಾ ಸಂದರ್ಭ ವಿದ್ಯುತ್‌ ದೀಪಗಳ ಬೆಳಕಲ್ಲಿ ಕಂಗೊಳಿಸುವ ಸಾಂಸ್ಕೃತಿಕ ನಗರಿಯನ್ನು ಕಣ್ತುಂಬಿಕೊಳ್ಳಲು ದೇಶ–ವಿದೇಶಗಳ ಪ್ರವಾಸಿಗರು ಬರುತ್ತಿದ್ದಾರೆ. ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಕುಸ್ತಿ, ಕ್ರೀಡಾಕೂಟ, ಚಲನಚಿತ್ರೋತ್ಸವ, ಕವಿಗೋಷ್ಠಿ, ಪುಸ್ತಕ ಪ್ರದರ್ಶನ, ವಸ್ತುಪ್ರದರ್ಶನ ಮೊದಲಾದವು ಜನಾಕರ್ಷಿಸುತ್ತಿವೆ. ಜಂಬೂಸವಾರಿ ಸಂದರ್ಭದಲ್ಲಿ ತಂಗಲು ಪ್ರವಾಸಿಗರು ನಗರದ ಹೋಟೆಲ್‌ಗಳಲ್ಲಿ ಸಾಕಷ್ಟು ಮುಂಚೆಯೇ ಕೊಠಡಿ ಕಾಯ್ದಿರಿಸುತ್ತಾರೆ. ಹೋಟೆಲ್ ಉದ್ಯಮಕ್ಕೆ ದಸರೆ ಉತ್ತಮ ವ್ಯಾಪಾರ ಮತ್ತು ಆದಾಯದ ಮೂಲವಾಗಿದೆ.

ಹಿಂದೆ ದಸರಾ ಸಂದರ್ಭದಲ್ಲಿ ನೆರೆಯ ಕೇರಳದಿಂದ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದರು. ಆದರೆ ಈ ಬಾರಿ ವಯನಾಡ್‌ ಭೂಕುಸಿತ ದುರಂತದ ಕಾರಣದಿಂದ ಅಲ್ಲಿನ ಪ್ರವಾಸಿಗರ ಸಂಖ್ಯೆ ತುಸು ಕಡಿಮೆಯಾಗಿದೆ
-ಸಿ.ನಾರಾಯಣಗೌಡ, ಅಧ್ಯಕ್ಷ ಜಿಲ್ಲಾ ಹೋಟೆಲ್ ಮಾಲೀಕರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.