ಬೆಂಗಳೂರು: ಐದನೇ ತಾರೀಕಿನೊಳಗೇ ಬಾಡಿಗೆ ಕೊಡಬೇಕು, 11 ತಿಂಗಳ ನಂತರವೂ ಇದ್ದರೆ ಶೇ 5ರಷ್ಟು ಹೆಚ್ಚು ಬಾಡಿಗೆ ನೀಡಬೇಕು, ನೀರಿನ ಶುಲ್ಕ ಪ್ರತ್ಯೇಕ...
ಮನೆ ಮಾಲೀಕ–ಬಾಡಿಗೆದಾರರ ನಡುವೆ ಇಂಥದ್ದೊಂದು ‘ಕರಾರು’ ಏರ್ಪಡದೆ ಮಹಾನಗರದಲ್ಲಿ ಬಾಡಿಗೆಗೆ ಮನೆ ಸಿಗುತ್ತಲೇ ಇರಲಿಲ್ಲ. ‘ಕಂಡಿಷನ್‌ಗೆ ಒಪ್ಪಿಗೆಯಿದ್ದರೆ ಬಾಡಿಗೆಗೆ ಬನ್ನಿ’ ಎನ್ನುವ ಧೋರಣೆಯೇ ಅಲ್ಲಿರುತ್ತಿತ್ತು. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ.
‘ಒಂದು ಲಕ್ಷ ಇಲ್ಲದಿದ್ದರೆ, ₹ 50 ಸಾವಿರ ಅಡ್ವಾನ್ಸ್ ಕೊಡಿ ಸಾಕು, .. ಅಯ್ಯೋ ನೀವು ಮನೆಯಲ್ಲಿ ಇರೋದೇ ಹೆಚ್ಚು, ಅಂಥದ್ದರಲ್ಲಿ ನಾವ್ಯಾಕೆ ಮತ್ತೆ ಐದು ಪರ್ಸೆಂಟ್ ಬಾಡಿಗೆ ಜಾಸ್ತಿ ಮಾಡೋಣ, ಎಲ್ಲ ಸರಿಯಾಗೋವರೆಗೂ ಆರಾಮಾಗಿ ಇರಿ...’ ಎಂದು ಬಾಡಿಗೆದಾರರಿಗೆ ಮಾಲೀಕರು ಹೇಳತೊಡಗಿದ್ದಾರೆ. ಇಂತಹ ‘ಅಡ್ಜಸ್ಟ್‌ಮೆಂಟ್’ಗೆ ಕಾರಣ ಕೋವಿಡ್ ಬಿಕ್ಕಟ್ಟು.
ಉದ್ಯೋಗ ಕಳೆದುಕೊಂಡವರು, ಮನೆಯಿಂದಲೇ ಕೆಲಸ ಮಾಡುವ ಅವಕಾಶ ಪಡೆದವರು, ತಮ್ಮ ತಮ್ಮ ಊರುಗಳಿಗೆ ಮರಳಿದ್ದಾರೆ. ಹೀಗಾಗಿ ದೊಡ್ಡ ನಗರಗಳಲ್ಲಿ ಬಾಡಿಗೆ ಮನೆಗಳು ಹೇರಳ ಸಂಖ್ಯೆಯಲ್ಲಿ ಖಾಲಿಯಾಗಿವೆ. ದೊಡ್ಡ ಕಟ್ಟಡಗಳಲ್ಲಿ ಮಳಿಗೆಗಳೂ ಖಾಲಿ ಹೊಡೆಯುತ್ತಿವೆ. ಲಾಕ್‌ಡೌನ್‌ಗೂ ಮೊದಲು ಅಲ್ಲೊಂದು ಇಲ್ಲೊಂದು ಕಾಣುತ್ತಿದ್ದ ‘ಟು–ಲೆಟ್’ ಬೋರ್ಡ್‌ಗಳು, ಈಗ ಒಂದೊಂದು ರಸ್ತೆಯಲ್ಲೂ ಹತ್ತು–ಹನ್ನೊಂದು ಕಾಣಸಿಗುತ್ತಿವೆ.
‘ಬಹಳಷ್ಟು ಬಾಡಿಗೆದಾರರು ಎರಡು ಕೋಣೆಯ ಮನೆಯಿಂದ ಒಂದು ಕೋಣೆಯ ಮನೆಗೆ ಹೋಗುತ್ತಿದ್ದಾರೆ. ಎರಡು ಬೆಡ್‌ರೂಮ್ ಇರುವ ಮನೆಗಳು ಹೆಚ್ಚು ಖಾಲಿಯಾಗುತ್ತಿವೆ’ ಎಂದು ಹೇಳುತ್ತಾರೆ ಆರ್.ಟಿ. ನಗರ, ಹೆಬ್ಬಾಳ ವ್ಯಾಪ್ತಿಯಲ್ಲಿ ‘ಬ್ರೋಕರಿಂಗ್’ ಮಾಡುವ ಶಿವಪ್ಪ.
‘ಬಾಡಿಗೆ ಕಡಿಮೆ ಮಾಡುವುದರ ಜೊತೆಗೆ ಮುಂಗಡ ಹಣದ ಮೊತ್ತವನ್ನೂ ಮಾಲೀಕರು ಇಳಿಸಿದ್ದಾರೆ. ಮೊದಲು ಒಂದು ಕೋಣೆಯ ಮನೆ ಬಾಡಿಗೆ ₹10 ಸಾವಿರ ಇತ್ತು. ಈಗ ₹6 ಸಾವಿರದಿಂದ ₹7,500ರವರೆಗೆ ಕೊಡುತ್ತಿದ್ದಾರೆ. ಎರಡು ಬೆಡ್‌ರೂಮ್
ಗಳ ಮನೆಗೆ ಮೊದಲು ₹14 ಸಾವಿರದಿಂದ ₹16 ಸಾವಿರ ಹೇಳುತ್ತಿದ್ದರು. ಈಗ ₹10 ಸಾವಿರದಿಂದ ₹12 ಸಾವಿರಕ್ಕೆ ಕೊಡುತ್ತಿದ್ದಾರೆ’ ಎಂದು ಅವರು ಹೇಳಿದರು.
‘ಮೂರು ವರ್ಷದ ಅವಧಿಗೆ ಒಂದು ಬೆಡ್‌ರೂಮ್ ಮನೆಯನ್ನು ಭೋಗ್ಯ ಪಡೆಯಲು ₹6 ಲಕ್ಷ ನೀಡಬೇಕಾಗುತ್ತಿತ್ತು. ಈಗ ₹3.5 ಲಕ್ಷದಿಂದ ₹4 ಲಕ್ಷಕ್ಕೆ ನೀಡುತ್ತಿದ್ದಾರೆ. ಎರಡು ಬೆಡ್‌ರೂಮ್‌ನ ಮನೆಗಳು ₹8 ಲಕ್ಷದಿಂದ ₹10ಲಕ್ಷಕ್ಕೆ ಭೋಗ್ಯಕ್ಕೆ ಲಭ್ಯವಾಗುತ್ತಿವೆ. ಮೊದಲು ₹12ಲಕ್ಷದಿಂದ ₹15 ಲಕ್ಷದವರೆಗೆ ನೀಡಬೇಕಾಗಿತ್ತು’ ಎಂದರು.
‘ಮನೆಗಳು ಕಡಿಮೆ ಬಾಡಿಗೆಗೆ ಸಿಗುತ್ತವೆ ಎಂದು ಜನ ಭಾವಿಸುತ್ತಿದ್ದಾರಷ್ಟೆ. ಆದರೆ, ವಾಸ್ತವ ಹಾಗಿಲ್ಲ. ಮುಂಗಡ ಹಣದಲ್ಲಿ ಸ್ವಲ್ಪ ಕಡಿಮೆ ತೆಗೆದುಕೊಳ್ಳುತ್ತಿದ್ದಾರಷ್ಟೆ. ಮೆಟ್ರೊ ನಿಲ್ದಾಣಗಳ ಬಳಿ ಇರುವ ಮನೆಗಳಲ್ಲಿ ಸಾವಿರ ರೂಪಾಯಿ ಕೂಡ ಕಡಿಮೆ ಮಾಡಿಲ್ಲ’ ಎಂದು ಮಹಾಲಕ್ಷ್ಮಿಲೇಔಟ್, ರಾಜಾಜಿನಗರ, ಮಲ್ಲೇಶ್ವರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಬ್ರೋಕರ್ ಎಂ. ಪ್ರಕಾಶ್ ಹೇಳುತ್ತಾರೆ.
ಕಾದು ನೋಡುತ್ತಿದ್ದಾರೆ:‘ಸಾಲ ಮಾಡಿ, ತಿಂಗಳಿಗೆ ನಿರ್ದಿಷ್ಟ ಕಂತು ಕಟ್ಟುವ ರೀತಿಯಲ್ಲಿ ಯೋಜನೆ ರೂಪಿಸಿಕೊಂಡು ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿರುತ್ತಾರೆ. ಬಾಡಿಗೆ ಕಡಿಮೆ ಮಾಡಿದರೆ ಅವರ ಯೋಜನೆಯೆಲ್ಲ ತಲೆಕೆಳಗಾಗುತ್ತದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿಯೇ ಅಸ್ಥಿರತೆ ಉಂಟಾಗಿದೆ. ಇದು ಸರಿ ಆಗುವವರೆಗೆ ಕಾದು ನೋಡುವ ನಿರ್ಧಾರಕ್ಕೆ ಡೆವಲಪರ್ಸ್ ಬಂದಿದ್ದಾರೆ. ಬಾಡಿಗೆ ಕಡಿಮೆ ಮಾಡಿಲ್ಲ’ ಎಂದು ಕ್ರೆಡೈನ ರಾಜ್ಯ ಘಟಕದ ಉಪಾಧ್ಯಕ್ಷ ಪ್ರದೀಪ್ ರಾಯ್ಕರ್ ಹೇಳುತ್ತಾರೆ.
‘ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕಡಿಮೆ ಬಾಡಿಗೆ ತೆಗೆದುಕೊಳ್ಳಲಾಗುತ್ತಿದೆ. ಆದರೆ, ಬೆಂಗಳೂರಿನಲ್ಲಿ ಬಾಡಿಗೆ ಮೊದಲಿನಷ್ಟೇ ಇದೆ. ಕಾರ್ಮಿಕರು ಮತ್ತು ಉದ್ಯೋಗಿಗಳು ಮರಳಿ ಬರುತ್ತಿರುವುದರಿಂದ ರಿಯಲ್ ಎಸ್ಟೇಟ್ ಉದ್ಯಮ ಚೇತರಿಕೆ ಕಾಣುವ ನಿರೀಕ್ಷೆ ಇದೆ’ ಎನ್ನುವುದು ಅವರ ಆಶಾಭಾವ.
‘ಬಾಡಿಗೆ ಕಡಿಮೆ ಮಾಡಿದ ಮಾತ್ರಕ್ಕೆ ಜನ ಬರುವುದಿಲ್ಲ’
‘ಮನೆ ಬಾಡಿಗೆ ಕಡಿಮೆ ಮಾಡಿದ ಮಾತ್ರಕ್ಕೆ, ಊರಿಗೆ ಹೋದವರು ವಾಪಸ್ ಬಂದು ಬಿಡುತ್ತಾರಾ? ಯಾರಿಗೆ ಬಾಡಿಗೆ ಕಟ್ಟಲು ಆಗುತ್ತದೆಯೋ ಅವರು ಇದ್ದಾರೆ. ಮೊದಲು ಆಗುತ್ತಿದ್ದ ವಹಿವಾಟಿನ ಪೈಕಿ ಶೇ 25ರಷ್ಟೂ ಈಗ ಆಗುತ್ತಿಲ್ಲ’ ಎಂದು ಮಾನಂದಿ ಡೆವಲಪರ್ಸ್ ಮಾಲೀಕ ಸುರೇಶ್ ಹೇಳಿದರು.
‘ವಾಣಿಜ್ಯ ಮಳಿಗೆಗಳ ಕೆಲವರು ಆರು ತಿಂಗಳಿಂದ ಬಾಡಿಗೆ ನೀಡಿಲ್ಲ. ನಾನೇ ಮೂರು–ನಾಲ್ಕು ತಿಂಗಳು ಬಾಡಿಗೆ ವಜಾ ಮಾಡಿದ್ದೇನೆ. ಖಾಲಿ ಮಾಡಿಸಿದರೆ ಹೊಸಬರು ಯಾರು ಬರುತ್ತಾರೆ ಎಂಬ ಆತಂಕದಿಂದ ಮಳಿಗೆಗಳ ಮಾಲೀಕರು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದರು.
ವ್ಯಾಪಾರ ಶೇ 40 ಮಾತ್ರ
‘ಚಿಕ್ಕಪೇಟೆಯಲ್ಲಿ ಶೇ 30ರಷ್ಟು ವಾಣಿಜ್ಯ ಮಳಿಗೆಗಳು ಬಂದ್ ಆಗಿವೆ. ಶೇ 30ರಿಂದ 40ರಷ್ಟು ಮಾತ್ರ ವ್ಯಾಪಾರ ನಡೆಯುತ್ತಿದೆ’ ಎನ್ನುತ್ತಾರೆ ಕರ್ನಾಟಕ ಹೊಝೈರಿ ಮತ್ತು ಗಾರ್ಮೆಂಟ್ಸ್ ಸಂಘದ ಹಿರಿಯ ಉಪಾಧ್ಯಕ್ಷ ರಾಜಪುರೋಹಿತ್.
‘ವಾಣಿಜ್ಯ ಮಳಿಗೆಗಳಿಗೆ ದೇಶದಲ್ಲಿಯೇ ಅತಿ ಹೆಚ್ಚು ಬಾಡಿಗೆ ನಿಗದಿ ಮಾಡಿರುವುದು ಬೆಂಗಳೂರಿನಲ್ಲಿ. ಲಾಕ್‌ಡೌನ್‌ನಿಂದ ವ್ಯಾಪಾರ ಕುಸಿದಿದ್ದರಿಂದ ಚಿಕ್ಕಪೇಟೆಯಲ್ಲಿ ಶೇ 30ರಷ್ಟು ಮಳಿಗೆಗಳು ಬಂದ್ ಆಗಿವೆ. ಇದರಿಂದ ಸರ್ಕಾರಕ್ಕೂ ವರಮಾನ ಕಡಿಮೆಯಾಗಿದೆ’ ಎಂದು ಅವರು ಹೇಳಿದರು.
‘ಮಳಿಗೆಗಳ ಮೂಲಕ ಬರುವ ಬಾಡಿಗೆಯಿಂದಲೇ ಎಷ್ಟೋ ಜನ ಜೀವನ ಮಾಡುತ್ತಿದ್ದಾರೆ. ವರ್ತಕರಲ್ಲದೆ, ಮಳಿಗೆಗಳ ಮಾಲೀಕರು ಕೂಡ ಸಂಕಷ್ಟದಲ್ಲಿದ್ದಾರೆ’ ಎಂದು ಅವರು ಹೇಳಿದರು.
ಮುಂಗಡ ಹಣ ನೀಡಲು ಪರದಾಟ
‘ನಾವು ಹೋಟೆಲ್ ಇಟ್ಟುಕೊಂಡಿದ್ದೇವೆ. ಒಂದು ಮನೆಯನ್ನು ₹10 ಲಕ್ಷಕ್ಕೆ ಭೋಗ್ಯಕ್ಕೆ ನೀಡಿದ್ದೆವು. ಬಾಡಿಗೆದಾರರು ಕೆಲಸ ಕಳೆದುಕೊಂಡರು. ನಾವು ಮನೆ ಖಾಲಿ ಮಾಡಿಕೊಂಡು ಊರಿಗೆ ಹೋಗುತ್ತೇವೆ. ₹10 ಲಕ್ಷ ಕೊಡಿ ಎಂದು ಕೇಳಿದರು. ಮೂರು ತಿಂಗಳು ಸಮಯ ತೆಗೆದುಕೊಂಡಿದ್ದೆ. ಆದರೆ, ಹೋಟೆಲ್ ಬಂದ್ ಆಗಿದ್ದರಿಂದ ತುಂಬಾ ಕಷ್ಟ ಆಯಿತು. ಆರು ತಿಂಗಳು ಪರದಾಡಿ ₹10 ಲಕ್ಷ ಹೊಂದಿಸಿಕೊಟ್ಟೆ’ ಎಂದು ಆರ್.ಟಿ. ನಗರದ ಮಾಯಣ್ಣ ಹೇಳಿದರು.
‘ಪಿಜಿ: ನಿರ್ವಹಣಾ ವೆಚ್ಚವೇ ಹೊರೆ’
‘ನಮ್ಮ ಪಿಜಿಯಲ್ಲಿ ಲಾಕ್‌ಡೌನ್‌ಗಿಂತ ಮೊದಲು ಸುಮಾರು 100 ಜನ ಇದ್ದರು. ಲಾಕ್‌ಡೌನ್ ಘೋಷಣೆಯಾದಾಗ ಕೇವಲ 7 ಜನ ಉಳಿದುಕೊಂಡಿದ್ದರು. ಈಗ 20 ಜನ ಇದ್ದಾರೆ. ಬಹುತೇಕ ಪಿಜಿಗಳ ಸ್ಥಿತಿ ಹೀಗೇ ಇದೆ’ ಎಂದು ಪಿಜಿ ಮಾಲೀಕರೊಬ್ಬರು ಹೇಳಿದರು.
‘ದೊಡ್ಡ ಬಿಲ್ಡಿಂಗ್ ಅನ್ನು ₹10 ಲಕ್ಷದಿಂದ ₹15 ಲಕ್ಷ ಬಾಡಿಗೆ ಪಡೆದು ಪಿಜಿ ನಡೆಸುತ್ತಿದ್ದೇವೆ. ಈಗ ಬಾಡಿಗೆ ಕಟ್ಟುವುದೇ ಕಷ್ಟವಾಗಿದೆ. ತುಂಬಾ ಪಿಜಿಗಳು ಸ್ಥಗಿತಗೊಂಡಿವೆ. ಕೆಲವು ಮಾಲೀಕರು, ಒಬ್ಬರಿಗೆ ಇಂತಿಷ್ಟು ಎಂದು, ಎಷ್ಟು ಜನ ಇದ್ದಾರೋ ಅಷ್ಟು ಜನರ ಲೆಕ್ಕದಲ್ಲಿ ಬಾಡಿಗೆ ಪಡೆಯುತ್ತಿದ್ದಾರೆ’ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.