ಬೆಂಗಳೂರು: ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ನಿಧನರಾದ ವಿವಿಧ ಕ್ಷೇತ್ರಗಳ ಗಣ್ಯರಿಗೆ ಶನಿವಾರ ನುಡಿನಮನ ಸಲ್ಲಿಸಲಾಯಿತು.
ಬಂಡಾಯ ಸಾಹಿತ್ಯ ಸಂಘಟನೆ, ಬೆಂಗಳೂರು ಹಾಗೂ ದಲಿತ ಹಕ್ಕುಗಳ ಸಮಿತಿ–ಕರ್ನಾಟಕ ವತಿಯಿಂದ ಆನ್‌ಲೈನ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಕೊರೊನಾ ಕಂಬನಿಯ ಕುಯಿಲು’ ಕಾರ್ಯಕ್ರಮದಲ್ಲಿ ಎಚ್.ಎಸ್.ದೊರೆಸ್ವಾಮಿ, ವಿಠಲ ಭಂಡಾರಿ, ಎಚ್.ಕೆ.ರಾಮಚಂದ್ರಪ್ಪ, ಎಂ.ಜಿ.ವೆಂಕಟೇಶ್, ಭಾಸ್ಕರ್ ಮಯ್ಯ, ಕೋ.ವೆಂ.ರಾಮಕೃಷ್ಣೇಗೌಡ ಹಾಗೂ ಜರಗನಹಳ್ಳಿ ಶಿವಶಂಕರ್ ಅವರನ್ನು ಸ್ಮರಿಸಲಾಯಿತು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್, ‘ಎಚ್.ಎಸ್.ದೊರೆಸ್ವಾಮಿ ಅವರು ಅಧಿಕಾರ, ನೇಮಕಾತಿಗಾಗಿ ಆಸೆ ಪಡಲಿಲ್ಲ. ಚುನಾವಣಾ ರಾಜಕಾರಣದಲ್ಲಿ ಭಾಗಿಯಾಗಲೂ ಇಲ್ಲ. ಅನ್ಯಾಯದ ವಿರುದ್ಧ, ಭೂಗಳ್ಳರು, ಕೋಮುವಾದಿಗಳ ವಿರುದ್ಧ ಸಿಂಹದಂತೆ ಘರ್ಜಿಸಿದ್ದರು. ಅವರ ಬದುಕು ಇಂದಿನ ಯುವ ಪೀಳಿಗೆಗೆ ಆದರ್ಶವಾಗಲಿ. ದೊರೆಸ್ವಾಮಿ ಅವರು ಬಿದ್ದ ಮರವಲ್ಲ, ಬಿತ್ತಿದ ಬೀಜ. ಅದರಿಂದ ಸಹಸ್ರಾರು ಗಿಡಗಳು ಬೆಳೆದು ಹೂವುಗಳು ಅರಳಲಿ’ ಎಂದರು.
ರಂಗಕರ್ಮಿ ಲಕ್ಷ್ಮಿ ಚಂದ್ರಶೇಖರ್, ‘ಎಂ.ಜಿ.ವೆಂಕಟೇಶ್, ಸಮಾನತೆಯ ತತ್ವದಲ್ಲಿ ನಂಬಿಕೆಯುಳ್ಳವರಾಗಿದ್ದರು. ಬಹಳ ಬದ್ಧತೆಯಿಂದ ಕೆಲಸ ಮಾಡುತ್ತಿದ್ದರು. ಅನ್ಯಾಯ, ಅಕ್ರಮಗಳನ್ನು ಬಯಲಿಗೆಳೆಯುತ್ತಿದ್ದರು’ ಎಂದರು.
ಬರಹಗಾರ್ತಿ ಗೀತಾ ವಸಂತ್, ‘ವಿಠಲ ಭಂಡಾರಿ ಅವರ ಸಾವು, ಸಮೂಹದ ಸಂಕಟ. ಸಮೂಹದ ಧ್ವನಿ, ಕನಸುಗಾರನಾಗಿ ನೇಪಥ್ಯದಲ್ಲಿ ನಿಂತು ಕೆಲಸ ಮಾಡುತ್ತಿದ್ದ ಚೇತನ .’ ಎಂದರು.
ಎ.ಬಿ.ರಾಮಚಂದ್ರಪ್ಪ, ‘ಎಚ್.ಕೆ.ರಾಮಚಂದ್ರಪ್ಪ ಅವರು ಹೋರಾಟವನ್ನೇ ಬದುಕಾಗಿಸಿಕೊಂಡವರು. ಸಂಘಟನಾ ಚಾತುರ್ಯ ಅವರಲ್ಲಿತ್ತು. ಕಮ್ಯುನಿಸ್ಟ್ ತತ್ವವನ್ನು ಗಟ್ಟಿಯಾಗಿ ನಂಬಿದ್ದ ವ್ಯಕ್ತಿ. ಹಾಗಂತ ಬೇರೆಯವರ ಸೈದ್ಧಾಂತಿಕ ನಿಲುವುಗಳನ್ನು ಅವರು ವಿರೋಧಿಸಿದವರಲ್ಲ’ ಎಂದರು.
ಸಾಹಿತಿ ಬರಗೂರು ರಾಮಚಂದ್ರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.