ADVERTISEMENT

ಎಚ್ಎಸ್‌ಆರ್‌ಪಿ: ಮಧ್ಯಂತರ ಆದೇಶ ಡಿ.4ರವರೆಗೆ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 15:24 IST
Last Updated 20 ನವೆಂಬರ್ 2024, 15:24 IST
ಎಚ್‌ಎಸ್‌ಆರ್‌ಪಿ
ಎಚ್‌ಎಸ್‌ಆರ್‌ಪಿ   

ಬೆಂಗಳೂರು: ‘ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್-ಎಚ್ಎಸ್ಆರ್‌ಪಿ) ಅಳವಡಿಸದೇ ಇರುವ ವಾಹನ ಸವಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು’ ಎಂಬ ಮಧ್ಯಂತರ ಆದೇಶವನ್ನು ಹೈಕೋರ್ಟ್‌ ಡಿಸೆಂಬರ್‌ 4ರವರೆಗೆ ವಿಸ್ತರಿಸಿದೆ.

ಈ ಸಂಬಂಧದ ಮೇಲ್ಮನವಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಮೇಲ್ಮನವಿದಾರರ ಪರ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು, ‘ರಾಜ್ಯ ಸರ್ಕಾರ ಮಧ್ಯಂತರ ಆದೇಶವನ್ನು ಚಾಲ್ತಿಯಲ್ಲಿ ಇರಿಸಿ, ಏಕಸದಸ್ಯ ನ್ಯಾಯಪೀಠವೇ ಪ್ರಕರಣ ನಿರ್ಧರಿಸಬಹುದು ಎಂಬ ಅಡ್ವೊಕೇಟ್‌ ಜನರಲ್‌ ಸಲಹೆಯ ಬಗ್ಗೆ ಪರಿಶೀಲಿಸಬೇಕಿದೆ’ ಎಂದರು.

ಇದಕ್ಕೆ ಪ್ರತಿಯಾಗಿ ಅಡ್ವೊಕೇಟ್ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ‘ಏಕಸದಸ್ಯ ನ್ಯಾಯಪೀಠದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ. ಈಗಾಗಲೇ ಚಾಲ್ತಿಯಲ್ಲಿರುವ ಮಧ್ಯಂತರ ಆದೇಶ ಮುಂದುವರಿಯಲಿ. ಜೊತೆಗೆ, ಏಕಸದಸ್ಯ ಪೀಠವೇ ಪ್ರಕರಣದ ಕುರಿತಂತೆ ನಿರ್ಧರಿಸಲು ಆದೇಶಿಸಬಹುದು’ ಎಂದು ಸಲಹೆ ನೀಡಿದರು. ಇದಕ್ಕೆ ಸಮ್ಮತಿಸಿದ ನ್ಯಾಯಪೀಠವು ಮಧ್ಯಂತರ ಆದೇಶವನ್ನು ವಿಸ್ತರಿಸಿ, ವಿಚಾರಣೆಯನ್ನು ಡಿಸೆಂಬರ್‌ 4ಕ್ಕೆ ಮುಂದೂಡಿತು.

ADVERTISEMENT

‘ಅತಿಸುರಕ್ಷಿತ ನೋಂದಣಿ ಫಲಕಗಳನ್ನು (ಎಚ್‌ಎಸ್‌ಆರ್‌ಪಿ) ನಿರ್ದಿಷ್ಟ ಉತ್ಪಾದಕರು ಮಾತ್ರ ಪೂರೈಸಬೇಕು ಮತ್ತು ನಿರ್ದಿಷ್ಟ ಡೀಲರ್‌ಗಳು ಮಾತ್ರವೇ ಅಳವಡಿಸಬೇಕು‘ ಎಂದು ಸಾರಿಗೆ ಇಲಾಖೆ 2023ರ ಆಗಸ್ಟ್‌ 17ರಂದು ಹೊರಡಿಸಿರುವ ಅಧಿಸೂಚನೆ ಮತ್ತು 2023ರ ಆಗಸ್ಟ್‌ 18ರ ಸುತ್ತೋಲೆಗೆ ತಡೆ ನೀಡಲು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ಪ್ರಸಾದ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ನಿರಾಕರಿಸಿತ್ತು. 2023ರ ಸೆಪ್ಟೆಂಬರ್ 20ರಂದು ನೀಡಿದ್ದ ಈ ಆದೇಶವನ್ನು ಪ್ರಶ್ನಿಸಿ ಸೂರತ್‌ನ ಬಿಎನ್‌ಡಿ ಎನರ್ಜಿ ಪ್ರೈವೆಟ್‌ ಲಿಮಿಟೆಡ್‌ ಸೇರಿದಂತೆ ಇತರ ಮೂರು ಸಂಸ್ಥೆಗಳು ಈ ಮೇಲ್ಮನವಿ ಸಲ್ಲಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.