ಹುಬ್ಬಳ್ಳಿ: ನಿಮಗೆ ಸರಿ ಎನಿಸಿದ ವಿಷಯ ಆರಿಸಿಕೊಂಡು ಕಷ್ಟ ಪಟ್ಟು ಓದ್ರೀ... ಇಂಗ್ಲಿಷ್ ಬರಲ್ಲ, ಬರವಣಿಗೆ ಶುದ್ಧ ಇಲ್ಲ, ವಿಜ್ಞಾನ–ಗಣಿತ ತಿಳಿಯಲ್ಲ ಅಂತ ಹಿಂಜರಿಕೆ ಬೇಡ್ರಿ... ಚೆನ್ನಾಗಿ ಓದಿದ್ರ ಖಂಡಿತಾ ಪಾಸ್ ಆಗ್ತೀರಿ... -ನಾಗರಿಕ ಸೇವಾ ಪರೀಕ್ಷಾ ಆಕಾಂಕ್ಷಿಗಳಿಗೆ ಹೀಗೆ ಸ್ಥಳೀಯ ಶೈಲಿಯಲ್ಲಿ ಸ್ಫೂರ್ತಿ ತುಂಬಿದ್ದು ರಾಹುಲ್ ಸಂಕನೂರ.
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಈ ಬಾರಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ 17ನೇ ರ‍್ಯಾಂಕ್ ಗಳಿಸಿರುವ (ರಾಜ್ಯಕ್ಕೆ ಮೊದಲಿಗರು), ವಾಣಿಜ್ಯ ನಗರಿಯ ರಾಹುಲ್ ಅವರು ಹುಬ್ಬಳ್ಳಿಯ ‘ಪ್ರಜಾವಾಣಿ’ ಕಚೇರಿಯಲ್ಲಿ ಗುರುವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಅನೇಕರ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿದರು. ರಾಜ್ಯದ ಎಲ್ಲ ಭಾಗಗಳಿಂದಲೂ ಆಕಾಂಕ್ಷಿಗಳು ಕರೆ ಮಾಡಿ ಉತ್ತರ ಪಡೆದರು.
ರಾಹುಲ್ ಕಚೇರಿಗೆ ಬರುವ ಮೊದಲೇ ಫೋನ್‌ಗಳು ಒಂದೇ ಸಮನೆ ಬರುತ್ತಿದ್ದವು. ವಿಶ್ರಾಂತಿಗೂ ಬಿಡುವಿರಲಿಲ್ಲ. ಮೊದಲ ಪ್ರಶ್ನೆಗೆ ಉತ್ತರಿಸುವಾಗ ಅವರಲ್ಲಿದ್ದ ತಾಳ್ಮೆ ಕೊನೆಯ ಕರೆಗೆ ಉತ್ತರಿಸಿದಾಗಲೂ ಇತ್ತು. ಹೇಗೆ ಓದಬೇಕು? ವಿಷಯ ಆಯ್ಕೆ ಹೇಗಿರಬೇಕು? ಹೀಗೆ ಹತ್ತಾರು ಪ್ರಶ್ನೆಗಳಿಗೆ ಉತ್ತರಿಸಿ ಆಕಾಂಕ್ಷಿಗಳಿಗೆ ‘ಆಲ್ ದ ಬೆಸ್ಟ್’ ಹೇಳಿದರು. ಆಕಾಂಕ್ಷಿಗಳ ಓದಿನ ಆಸಕ್ತಿ, ಅವರ ಇಷ್ಟದ ವಿಷಯಗಳನ್ನು ಕೇಳಿ ‘ವೆರಿ ಗುಡ್’ ಎಂದರು. ಅನೇಕ ಓದುಗರು ರಾಹುಲ್ ಅವರನ್ನು ಅಭಿನಂದಿಸಿದರು.
ಯುಪಿಎಸ್‌ಸಿ ಪರೀಕ್ಷೆ ಕಠಿಣ ಸವಾಲು, ಕಷ್ಟ ಪಡಲು ಸಿದ್ಧನಿದ್ದೇನೆ ಎಂದು ಮಾನಸಿಕವಾಗಿ ಗಟ್ಟಿಯಾಗಿದ್ದುಕೊಂಡೇ ಈ ಪರೀಕ್ಷೆ ಬಗ್ಗೆ ವಿಚಾರ ಮಾಡಿ. ಜೀವನದಲ್ಲಿ ಯುಪಿಎಸ್‌ಸಿ ಪರೀಕ್ಷೆ ಒಂದು ಭಾಗ. ಪರೀಕ್ಷೆಯೇ ಜೀವನವಲ್ಲ. ಒಂದು ವೇಳೆ ಪಾಸಾಗದೇ ಇದ್ದರೂ ಉತ್ತಮ ಬದುಕು ರೂಪಿಸಿಕೊಳ್ಳಲು ಈ ಓದು ನೆರವಾಗುತ್ತದೆ ಎಂದರು.
ಫೋನ್ ಇನ್ ಕಾರ್ಯಕ್ರಮದ ಸಮಯ ಮುಗಿದರೂ ಫೋನ್ ರಿಂಗಣಿಸುತ್ತಲೇ ಇತ್ತು. ರಾಹುಲ್ ಜೊತೆ ಮಾತನಾಡಲು ಅನೇಕರು ಕಾಯುತ್ತಿದ್ದರು.
* ಪವನ್, ಮುದ್ದೇನಹಳ್ಳಿ:
ಎಂಜಿನಿಯರಿಂಗ್ ಹಿನ್ನೆಲೆಯವರಿಗೇ ಯಶಸ್ಸು ಜಾಸ್ತಿ ಅನ್ನುತ್ತಾರೆ ಹೇಗೆ?
ಎಂಜಿನಿಯರಿಂಗ್ ಓದಿದವರೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ಸು ಗಳಿಸುತ್ತಾರೆ ಎಂದೇನಿಲ್ಲ. ಕಳೆದ ಬಾರಿ ದೇಶಕ್ಕೆ ಪ್ರಥಮ ರ‍್ಯಾಂಕ್ ಪಡೆದಟೀನಾ ಅವರು ಎಂಜಿನಿಯರಿಂಗ್ ಪದವೀಧರೆ ಅಲ್ಲ. ಯುಪಿಎಸ್‌ಸಿ ಪಠ್ಯಕ್ರಮದಲ್ಲಿ ಸಂವಿಧಾನ, ಭೂಗೋಳ, ಅರ್ಥಶಾಸ್ತ್ರ, ಪರಿಸರ ವಿಷಯಗಳಿರುತ್ತವೆ. ಕಲಾ ವಿಭಾಗದ ವಿದ್ಯಾರ್ಥಿಗಳಿಗೇ ಇಲ್ಲಿ ಹೆಚ್ಚಿನ ಅನುಕೂಲ. ಬೌದ್ಧಿಕ ಸಾಮರ್ಥ್ಯ ಪರೀಕ್ಷೆ ತುಂಬಾ ಸರಳವಾಗಿರುತ್ತದೆ. ಆ ಅಂಕಗಳನ್ನು ಈಗ ರ‍್ಯಾಂಕ್‌ಗೆ ಪರಿಗಣಿಸುತ್ತಿಲ್ಲ. ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡಿ, ಉತ್ತರ ಬರೆಯುವುದನ್ನು ಅಭ್ಯಾಸ ಮಾಡಿ.
* ಸಹನಾ ತುಮಕೂರು/ಮಂಜುಳಾ ತುಮಕೂರು:
ಪಿಯುಸಿ ಪಾಸ್ ಆಗಿದ್ದೇನೆ. ಭವಿಷ್ಯದಲ್ಲಿ ಯುಪಿಎಸ್‌ಸಿ ಮಾಡಬೇಕೆಂದಿದ್ದೇನೆ. ಮಾರ್ಗದರ್ಶನ ಮಾಡಿ.
ಯಾವುದೇ ಪದವಿಯಾದರೂ ಸರಿ, ಮೊದಲು ಪದವಿ ಪಡೆಯುವ ಬಗ್ಗೆ ಗಮನಹರಿಸಿ. ಮೊದಲ ಹಂತದಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲು ದಿನಪತ್ರಿಕೆಗಳನ್ನು ಓದಲು ಆರಂಭಿಸಿ. ಎರಡನೇ ವರ್ಷ ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಓದಿ. ಯುಪಿಎಸ್‌ಇಯಲ್ಲಿ ಯಾವ ಐಚ್ಛಿಕ ವಿಷಯ ತೆಗೆದುಕೊಳ್ಳಬೇಕು ಎನ್ನುವುದನ್ನು ಪದವಿಯ 2ನೇ ವರ್ಷದ ಕೊನೆಯಲ್ಲಿ ನಿರ್ಧರಿಸಿ. ಅಂತಿಮ ವರ್ಷಕ್ಕೆ ಬರುವಷ್ಟರಲ್ಲಿ ನಿಮಗೊಂದು ಸ್ಪಷ್ಟ ಕಲ್ಪನೆ ಬರುತ್ತದೆ. ಇಂತಹ ಪರೀಕ್ಷೆಗಳನ್ನು ತೆಗೆದುಕೊಂಡವರಿಂದ ಮಾರ್ಗದರ್ಶನ ಪಡೆಯಿರಿ.
* ರಾಮ್, ಬೆಂಗಳೂರು:
ನಾನು ಉದ್ಯೋಗದಲ್ಲಿದ್ದೇನೆ, ಪರೀಕ್ಷೆಗೆ ಸಮಯ ಹೊಂದಿಸಿಕೊಳ್ಳುವುದು ಕಷ್ಟವಾಗುತ್ತಿದೆ...
ಈ ಹಿಂದೆ ಯುಪಿಎಸ್‌ಸಿ ಟಾಪರ್ ಆದವರಲ್ಲಿ ಕೆಲವರು ಕೆಲಸ ಮಾಡಿಕೊಂಡು, ಸಮಯ ಹೊಂದಿಸಿಕೊಂಡು ಓದಿಯೇ ಯಶಸ್ಸು ಸಾಧಿಸಿದ್ದಾರೆ. ಅಂಥವರು ನಿಮಗೆ ಸ್ಫೂರ್ತಿಯಾಗಲಿ. ಅಂತಹವರ ಬಗ್ಗೆ ಯೂಟ್ಯೂಬ್‌ನಲ್ಲಿ ನೋಡಿ.
* ಶ್ವೇತಾ ತುಮಕೂರು, ಮೋಹನ್ ಹರಿಹರ:
ಕೋಚಿಂಗ್ ಹೋದರೆ ಮಾತ್ರ ಪರೀಕ್ಷೆ ಪಾಸ್ ಮಾಡಲು ಸಾಧ್ಯವೇ?
ಹಾಗೇನೂ ಇಲ್ಲ. ಮನೆಯಲ್ಲಿ ಕುಳಿತೇ ಓದಬಹುದು. ಅಂತರ್ಜಾಲದಿಂದ ಸಾಕಷ್ಟು ಮಾಹಿತಿ ಪಡೆಯಬಹುದು. ನಾನೂ ಕೋಚಿಂಗ್ ಹೋಗಿದ್ದೆ. ಸ್ವಲ್ಪ ಪ್ರಯೋಜನ ಆಯಿತು. ಆ ನಂತರ 3 ವರ್ಷ ರೂಮಿನಲ್ಲಿ ಕುಳಿತೇ ಪರೀಕ್ಷೆಗೆ ಸಿದ್ಧ ಆದೆ. ಪರಿಶ್ರಮ ಮುಖ್ಯ.
* ಭೀಮರಾಯ, ಯಾದಗಿರಿ:
ಯುಪಿಎಸ್‌ಸಿ ಸಂದರ್ಶನ ಹೇಗಿರುತ್ತದೆ, ಡ್ರೆಸ್ ಹೇಗಿರಬೇಕು?
ಸಂದರ್ಶನದಲ್ಲಿ ಸಾಮಾನ್ಯ ಜ್ಞಾನಕ್ಕಿಂತ ವ್ಯಕ್ತಿತ್ವ ಪರೀಕ್ಷೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ನಮ್ಮ ಊರು, ಜಿಲ್ಲೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವ ಸಾಧ್ಯತೆ ಹೆಚ್ಚು. ಅಭಿಪ್ರಾಯ ಆಧಾರಿತ ಪ್ರಶ್ನೆಗಳನ್ನು ಕೇಳುತ್ತಾರೆ. ಸಂದರ್ಶನ ನಡೆಯುವ ಸಂದರ್ಭದಲ್ಲಿನ ವಿದ್ಯಮಾನಗಳನ್ನು ಆಧರಿಸಿ ಪ್ರಶ್ನೆ ಕೇಳಬಹುದು. ಉದಾಹರಣೆಗೆ ಚುನಾವಣಾ ನೀತಿ ಸಂಹಿತೆ ಬಗ್ಗೆ ಪ್ರಶ್ನೆ ಕೇಳಬಹುದು. ಪದವಿಯಲ್ಲಿ ಓದಿದ ವಿಷಯಗಳ ಬಗ್ಗೆಯೂ ಚೆನ್ನಾಗಿ ತಿಳಿದುಕೊಂಡು ಹೋಗಿ. ಡ್ರೆಸ್ ಬಗ್ಗೆ ಚಿಂತೆ ಮಾಡಬೇಡಿ. ಡೀಸೆಂಟ್ ಇದ್ದರೆ ಸಾಕು.
* ವಿ.ಸಿ. ಪೂಜಾರಿ, ವಿಜಯಪುರ/ ಶಿವಕುಮಾರ, ಕೊಳ್ಳೇಗಾಲ/ ಅಕ್ಷತಾ, ಶಿರಾಳಕೊಪ್ಪ, ಶಿವಮೊಗ್ಗ:
ಕನ್ನಡದಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆಯಬಹುದೇ?
ಇಂಗ್ಲಿಷ್ ವಿಷಯದ ಪತ್ರಿಕೆ ಬಿಟ್ಟು ಉಳಿದ ಎಲ್ಲ ಪತ್ರಿಕೆಗಳನ್ನೂ ಕನ್ನಡದಲ್ಲಿಯೇ ಪರೀಕ್ಷೆ ಬರೆಯಬಹುದು. ಪ್ರಶ್ನೆಗಳು ಇಂಗ್ಲಿಷ್, ಹಿಂದಿ ಭಾಷೆಯಲ್ಲಿರುತ್ತವೆ. ಯಾವ ಭಾಷೆಯಲ್ಲಿ ಬರೆದರೆ ಸಮರ್ಥವಾಗಿ ಅಭಿವ್ಯಕ್ತಿಸಬಹುದೋ ಆ ಭಾಷೆಯಲ್ಲಿ ಬರೆಯಿರಿ. ಸಂದರ್ಶನವನ್ನೂ ಕನ್ನಡದಲ್ಲಿಯೇ ಎದುರಿಸಬಹುದು.
* ಶಿವಕುಮಾರ್, ಬಸವ ಕಲ್ಯಾಣ/ ಶಶಿಧರ ಅಡವಿ, ಬಾದಾಮಿ/ ವಿಶಾಲ್, ಕಲಬುರ್ಗಿ/ ಕವಿತಾ, ಕೊಪ್ಪಳ:
ಕನ್ನಡದಲ್ಲಿ ತಯಾರಿ ನಡೆಸಲು ಕಷ್ಟ ಆಗುವುದಿಲ್ಲವೇ?
ಏನೂ ಇಲ್ಲ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೂರು ಹಂತಗಳಿವೆ. ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ. ಮೊದಲಿಗೆ ದಿನಪತ್ರಿಕೆ ಓದಿ, ನೋಟ್ ಮಾಡಿಕೊಳ್ಳಬೇಕು. ಬಳಿಕ, ಐಚ್ಛಿಕ ವಿಷಯ ಆಯ್ಕೆ ಮಾಡಿಕೊಳ್ಳಿ. ಕನ್ನಡದಲ್ಲಿ ತಯಾರಿ ನಡೆಸಲು ಕನ್ನಡ ಭಾಷೆಯಲ್ಲೇ ಸಾಮಗ್ರಿಗಳು ಸಿಗುತ್ತವೆ. ಜತೆಗೆ, ಇಂಟರ್‌ನೆಟ್ ಮೂಲಕವೂ ಪೂರಕ ಮಾಹಿತಿಗಳು ಸಿಗುತ್ತವೆ. ಅವುಗಳನ್ನು ಆಳವಾಗಿ ಮತ್ತು ವಿಶ್ಲೇಷಣಾತ್ಮಕವಾಗಿ ಅಧ್ಯಯನ ಮಾಡಿ.
* ಪವಿತ್ರಾ, ಬೆಂಗಳೂರು:
ಬಿ.ಇಡಿ ಪೂರ್ಣವಾಗಿದೆ. ದೂರ ಶಿಕ್ಷಣ ಕೋರ್ಸ್‌ನಲ್ಲಿ ಬಿ.ಎ. ಮುಗಿಸಿದ್ದೇನೆ. ಯುಪಿಎಸ್‌ಸಿ ಓದಲು ಆಸಕ್ತಿ ಇದೆ. ಆದರೆ ಮದುವೆ ಆದ ಕಾರಣ ಸಾಧ್ಯವಾಗಿಲ್ಲ. ಈಗ ಮತ್ತೆ ಮುಂದುವರಿಯುವುದಾದರೆ ಓದು ಯಾವ ರೀತಿ ಇರಬೇಕು? ಕೋಚಿಂಗ್‌ಗೆ ಹೈದರಾಬಾದ್/ದೆಹಲಿಗೆ ಹೋಗಲೇಬೇಕಾ?
ನೀವು ಬಿ.ಎ. ಓದಿದ್ದರಿಂದ ನಿಮಗೆ ಹೆಚ್ಚಿನ ಅನುಕೂಲಗಳಿವೆ. ಸಂವಿಧಾನ, ಭೂಗೋಳ, ಪರಿಸರ ವಿಷಯಗಳು ನಿಮಗೆ ಕಷ್ಟವಾಗಲಿಕ್ಕಿಲ್ಲ. ಪ್ರಿಲಿಮ್ಸ್ ಮತ್ತು ಮೇನ್ಸ್ ಪರೀಕ್ಷೆಗಳಿಗೆ ಕೋಚಿಂಗ್ ಬೇಕೇಬೇಕು ಎಂದೇನಿಲ್ಲ. ಆದರೆ ಮಾಕ್ ಟೆಸ್ಟ್‌ಗೆ ಕೋಚಿಂಗ್ ಬೇಕಾಗುತ್ತದೆ. ವಿಜ್ಞಾನ, ಗಣಿತ ವಿಷಯಗಳ ಮೇಲೆ ಗಮನಕೊಡಿ.
* ಕೆಂಪರಾಜು, ದೊಡ್ಡಬಳ್ಳಾಪುರ; ಮೋಹನ್, ಹರಿಹರ:
ಪ್ರಿಲಿಮ್ಸ್ ಮತ್ತು ಮೇನ್ಸ್ ಪರೀಕ್ಷೆ ಹೇಗಿರುತ್ತದೆ?
ಕಲೆ, ಸಂಸ್ಕೃತಿ, ಪ್ರಚಲಿತ ವಿದ್ಯಮಾನ, ಆರ್ಥಿಕತೆ ವಿಷಯಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಮೇನ್ಸ್‌ನಲ್ಲಿ, ಉದಾಹರಣೆಗೆ ಭಾರತದಲ್ಲಿ ಬಡತನ ನಿರ್ಮೂಲನೆಗೆ ಮಾರ್ಗಗಳು ಏನು ಎಂಬ ಪ್ರಶ್ನೆ ಕೊಟ್ಟಿದ್ದಾರೆ ಎಂದಿಟ್ಟುಕೊಳ್ಳಿ. ಅದಕ್ಕೆ ಒಂದು ಒಳ್ಳೆಯ ಪೀಠಿಕೆ ಬರೆಯಬೇಕು. ಅಂದರೆ ಆ ಪ್ರಶ್ನೆಯನ್ನು ಏಕೆ ಕೇಳಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಂತರ ವಿವರಣೆಯಲ್ಲಿ ಒಂದೊಂದೇ ಅಂಶಗಳನ್ನು ವಿವರಿಸುತ್ತಾ ಹೋಗಬೇಕು. ಕೊನೆಯಲ್ಲಿ ಉಪಸಂಹಾರ. ಇಲ್ಲಿ ಬೇರೆ ಬೇರೆ ಸಂಸ್ಥೆಗಳು ನೀಡಿರುವ ಪರಿಹಾರ ಮಾರ್ಗಗಳನ್ನು ಉಲ್ಲೇಖಿಸಬೇಕು. ಒಂದೊಮ್ಮೆ ಪ್ರಶ್ನೆಯಲ್ಲಿ ಮೂರ್ನಾಲ್ಕು ಭಾಗಗಳಿದ್ದರೆ ಅವೆಲ್ಲದಕ್ಕೂ ಪ್ರತ್ಯೇಕವಾಗಿಯೇ ಉತ್ತರಿಸಬೇಕು.
* ಪ್ರಜ್ವಲ್, ಬೆಂಗಳೂರು:
ನಾನೀಗ ಬಿ.ಕಾಂ ಎರಡನೇ ವರ್ಷ ಓದುತ್ತಿದ್ದೇನೆ. ಐಎಎಸ್ ಆಗಬೇಕೆಂದರೆ ಏನು ಮಾಡಬೇಕು?
ಯುಪಿಎಸ್‌ಸಿ ಪರೀಕ್ಷೆ ಬರೆಯಲು ಮೊದಲು ಪದವಿ ಪೂರ್ಣಗೊಂಡಿರಬೇಕು. ಈ ಪರೀಕ್ಷೆಗೆ ಎಂದೇ ಓದುವುದಾದರೆ ಕಠಿಣವಾಗುತ್ತದೆ. ನಿರಂತರ ಅಧ್ಯಯನ, ಶ್ರಮ ಬೇಕು. ನಾಗರಿಕ ಸೇವಾ ಪರೀಕ್ಷೆಗಳು ದೀರ್ಘ ಸಮಯ, ತಾಳ್ಮೆ ಬೇಡುತ್ತವೆ.
* ಯಲ್ಲಪ್ಪ, ರಾಯಚೂರು:
ಯುಪಿಎಸ್‌ಸಿಯಲ್ಲಿ ಮುಂದೆ ಐಚ್ಛಿಕ ವಿಷಯಗಳ ಆಯ್ಕೆ ರದ್ದು ಮಾಡುತ್ತಾರೆಂಬ ವದಂತಿ ಇದೆಯಲ್ಲ?
ಇದೆಲ್ಲ ಸುಳ್ಳು ಸುದ್ದಿ. ಇದುವರೆಗೆ ಅಂತಹ ಯಾವುದೇ ಬದಲಾವಣೆಯ ಬಗ್ಗೆ ಯುಪಿಎಸ್‌ಸಿ ಪ್ರಸ್ತಾಪಿಸಿಲ್ಲ. ನೀವು ವದಂತಿಗೆ ಕಿವಿಗೊಡದೆ ಯುಪಿಎಸ್‌ಸಿ ವೆಬ್‌ಸೈಟ್ ಮೇಲೆ ಕಣ್ಣಾಡಿಸುತ್ತೀರಿ.
ಮಾರ್ಗದರ್ಶನಕ್ಕೆ ಇ–ಮೇಲ್: rahu*.sankanur@gmai*.com
ಫೋನ್ ಇನ್ ಕಾರ್ಯಕ್ರಮ ನಿರ್ವಹಣೆ: ಬಿ.ಎನ್. ಶ್ರೀಧರ, ಆರ್. ಮಂಜುನಾಥ್, ಬಸವರಾಜ ಹವಾಲ್ದಾರ್, ರಾಮಕೃಷ್ಣ ಸಿದ್ರಪಾಲ, ಪ್ರಮೋದ ಜಿ.ಕೆ, ನವೀನ್‌ಕುಮಾರ್, ಓದೇಶ ಸಕಲೇಶಪುರ, ಗಣೇಶ ವೈದ್ಯ, ವಿನ್ಯಾಸ: ಡಿ.ವಿ. ಸಾಂಗಳೇಕರ
***
ಒಳನೋಟ ನೀಡುವ ದಿನಪತ್ರಿಕೆ ಓದು
‘ಯುಪಿಎಸ್‌ಸಿ ಪರೀಕ್ಷೆಗಳಿಗೆ ತಯಾರಾಗುವವರು ಪ್ರಚಲಿತ ವಿದ್ಯಮಾನಗಳಿಗೆ ಸ್ಪರ್ಧಾತ್ಮಕ ನಿಯತಕಾಲಿಕೆಗಳಿಗಿಂತ ದಿನಪತ್ರಿಕೆಗಳನ್ನು ನಿತ್ಯ ಓದಿ, ನೋಟ್ಸ್ ಮಾಡಿಟ್ಟುಕೊಳ್ಳುವುದು ಒಳ್ಳೆಯದು. ದಿನಪತ್ರಿಕೆಯ ಸುದ್ದಿಗಳು ಪೂರಕ ಮಾಹಿತಿಯೊಂದಿಗೆ ಅಭಿಪ್ರಾಯ ಆಧರಿತವಾಗಿರುವುದರಿಂದ, ನಮಗೊಂದು ಒಳನೋಟ ಸಿಗುತ್ತದೆ. ನಿಯತಕಾಲಿಕೆಯಲ್ಲಿ ಘಟನೆಯ ಒಟ್ಟಾರೆ ಸಾರಾಂಶ ಇರುತ್ತದೆ. ಅಲ್ಲಿ ಅಭಿಪ್ರಾಯ ಹಾಗೂ ಘಟನೆಗೆ ಪೂರಕವಾದ ಮಾಹಿತಿಗಳಿರುವುದಿಲ್ಲ. ಇದರಿಂದಾಗಿ, ಘಟನೆಗೆ ಸಂಬಂಧಿಸಿದಂತೆ ಒಳನೋಟ ಮತ್ತು ಕನೆಕ್ಟಿವಿಟಿ ಸಿಗುವುದಿಲ್ಲ’ ಎಂದು ರಾಹುಲ್ ಸಂಕನೂರ ದಿನಪತ್ರಿಕೆ ಮತ್ತು ಸ್ಪರ್ಧಾತ್ಮಕ ನಿಯತಕಾಲಿಕೆಗಳ ಓದುವಿಕೆಯನ್ನು ವಿಶ್ಲೇಷಿಸಿದರು.
ಒಂದೇ ಹಂತ ಎಂದು ಓದಿ
* ಸುಷ್ಮಾ, ಧಾರವಾಡ:
ಮೂರು ಹಂತದ ಪರೀಕ್ಷೆಗಳಿಗೆ ಸಿದ್ಧತೆ ಹೇಗಿರಬೇಕು?
ಯುಪಿಎಸ್‌ಸಿ ಮೂರು ಹಂತಗಳಲ್ಲಿ ನಡೆಯುತ್ತದೆ ಎಂದು ಯೋಚಿಸುವುದೇ ಬೇಡ. ಒಂದೇ ಹಂತ ಎಂದುಕೊಳ್ಳಿ. ಏಕೆಂದರೆ ಪ್ರಿಲಿಮ್ಸ್ ಮತ್ತು ಮೇನ್ಸ್ ಎರಡಕ್ಕೂ ಸಿದ್ಧತೆ ಒಂದೇ ರೀತಿಯಲ್ಲಿ ಇರುತ್ತವೆ. ಇವೆರಡೂ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಹೊತ್ತಿಗಾಗಲೇ ನೀವು ಒಂದು ರೀತಿಯಲ್ಲಿ ಮೂರನೇ ಹಂತವಾದ
ಸಂದರ್ಶನಕ್ಕೆ ಸಿದ್ಧರಾಗಿರುತ್ತೀರಿ. ಮೇನ್ಸ್ ಮತ್ತು ಪ್ರಿಲಿಮ್ಸ್‌ಗೂ ಮುನ್ನ ಯಾವ ಐಚ್ಛಿಕ ವಿಷಯ ಆಯ್ದುಕೊಳ್ಳಬೇಕು ಎಂಬುದನ್ನು ನಿರ್ಧರಿಸಿಕೊಳ್ಳಬೇಕು. ನಂತರ ನೀವು ಯಾವ ವಿಷಯಗಳಲ್ಲಿ ಚೆನ್ನಾಗಿದ್ದೀರಿ, ಯಾವುದರಲ್ಲಿ ದುರ್ಬಲರಿದ್ದೀರಿ ಎಂಬುದನ್ನು ತಿಳಿದುಕೊಂಡು, ಆ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಪರೀಕ್ಷೆಗೆ ಮೂರ್ನಾಲ್ಕು ತಿಂಗಳು ಇದೆ ಎನ್ನುವಾಗ ಪ್ರಚಲಿತ ವಿದ್ಯಮಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಬೇಕು.
4 ವರ್ಷ ಬಟ್ಟೆ ಖರೀದಿಸಲಿಲ್ಲ, ಸಿನಿಮಾ ನೋಡ್ಲಿಲ್ಲ
‘ಗುರಿ ಸಾಧನೆಯತ್ತಲೇ ನನ್ನ ಲಕ್ಷ್ಯವಿತ್ತು. ಹೀಗಾಗಿ ಉಳಿದ ಯಾವ ಆಕರ್ಷಣೆಗಳೂ ನನ್ನನ್ನು ಈ ಅವಧಿಯಲ್ಲಿ ಕಾಡಲಿಲ್ಲ. ಮೂರು ವರ್ಷ ದೆಹಲಿಯಲ್ಲಿ ಅಚಲನಾಗಿ ಓದಿದೆ. ಈ ಅವಧಿಯಲ್ಲಿ ಒಂದೂ ಸಿನಿಮಾ ನೋಡಿಲ್ಲ, ವಾಟ್ಸ್‌ಆ್ಯಪ್ ಚಾಟಿಂಗ್ ಬಿಟ್ಟಿದ್ದೆ. ನಾಲ್ಕು ವರ್ಷ ಹೊಸ ಬಟ್ಟೆ ಕೂಡ ಖರೀದಿ ಮಾಡಿರಲಿಲ್ಲ, ಎರಡೂವರೆ ವರ್ಷ ಒಂದೇ ಜೊತೆ ಚಪ್ಪಲಿಯಲ್ಲಿ ಕಳೆದೆ... ಇದರಿಂದ ನಾನೇನೋ ಕಳೆದುಕೊಂಡೆ ಅಂತೇನೂ ಅನ್ನಿಸಲಿಲ್ಲ. ಬದಲಿಗೆ ಹೊಸ ಅನುಭವ ಪಡೆದೆ, ಹಲವಾರು ಹೊಸ ಸ್ನೇಹಿತರನ್ನು ಸಂಪಾದಿಸಿದೆ’ ಎಂದರು ರಾಹುಲ್ ಸಂಕನೂರ.
ಟ್ರೆಂಡ್ ಬದಲಾವಣೆ ನಿರಂತರ
ಯುಪಿಎಸ್‌ಸಿ ಟ್ರೆಂಡ್ ವರ್ಷದಿಂದ ವರ್ಷಕ್ಕೆ ಬದಲಾಗುತ್ತಲೇ ಇದೆ. ಪರೀಕ್ಷೆ ಬೆನ್ನತ್ತಿದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಅದು ನನ್ನ ಅನುಭವಕ್ಕೂ ಬಂದಿದೆ. ಈ ವಿಷಯ ಹೀಗೆಯೇ ಇರುತ್ತದೆ, ಅದು ಹಾಗೆ ಇರುತ್ತದೆ ಎಂಬ ಊಹೆಗಳು ಸುಳ್ಳಾಗುತ್ತವೆ. ನಾನು ಮೊದಲಿಗೆ ಮುಖ್ಯ ಪರೀಕ್ಷೆಗೆ ಹೆಚ್ಚು ಒತ್ತು ನೀಡಬೇಕು ಅಂದುಕೊಂಡು ಓದುತ್ತಿದ್ದೆ. ಆದರೆ, ಪ್ರಿಲಿಮಿನರಿ ಹಂತದಲ್ಲೇ ಹೆಚ್ಚು ಅಭ್ಯರ್ಥಿಗಳು ಫಿಲ್ಟರ್ ಆಗುತ್ತಿದ್ದರು. ಆಗ ಪ್ರಿಲಿಮಿನರಿಯೇ ತುಂಬಾ ಮುಖ್ಯವಾದ ಹಂತ ಎಂದೆನಿಸಿತು. ಅದೇ ರೀತಿ ವಿಷಯವಾರು ಆದ್ಯತೆಯ ಪ್ರಶ್ನೆಗಳೆಲ್ಲವೂ ವರ್ಷದಿಂದ ವರ್ಷಕ್ಕೆ ಬದಲಾಗುತ್ತಲೇ ಇರುತ್ತವೆ.
ಕೆಲವು ಸಲ ಜಾಗತಿಕ ಇತಿಹಾಸದ ಬಗ್ಗೆ ಹೆಚ್ಚು ಪ್ರಶ್ನೆಗಳಿದ್ದರೆ, ಮತ್ತೊಮ್ಮೆ ಭಾರತದ ಚರಿತ್ರೆಗೆ ಸಂಬಂಧಿಸಿದ ಪ್ರಶ್ನೆಗಳೇ ಹೆಚ್ಚಾಗಿರುತ್ತಿದ್ದವು. ಕೋಚಿಂಗ್ ಸೆಂಟರ್‌ನಲ್ಲಿ ವರ್ಷವಿಡೀ ಹೇಳುವ ವಿಷಯದ ಒಂದು ಪ್ರಶ್ನೆಯೂ ಬಂದಿರುವುದಿಲ್ಲ. ಅಂತರ್ಜಾಲದ ಮೂಲಕ ಆಗುತ್ತಿರುವ ಮಾಹಿತಿ ಕ್ರಾಂತಿಗೆ ತಕ್ಕಂತೆ ಯುಪಿಎಸ್‌ಸಿ ಕೂಡ ಅಪ್‌ಡೇಟ್ ಆಗುತ್ತಿರುತ್ತದೆ. ಹಾಗಾಗಿ, ಪರೀಕ್ಷೆಯ ಫೌಂಡೇಷನ್ ರೀಡಿಂಗ್ ಚನ್ನಾಗಿರಬೇಕು. ಬಳಿಕ, ಗ್ಲಾನ್ಸ್ ಮಾಡುತ್ತಾ ಅಪ್‌ಡೇಟ್ ಮಾಡಿಕೊಳ್ಳಬೇಕು.
– ರಾಹುಲ್ ಸಂಕನೂರ
***
* ಯುಪಿಎಸ್‌ಸಿ ಗುರಿ ಇರಲಿ, ಅದುವೇ ಜೀವನ ಆಗದಿರಲಿ
* ಅತ್ಯಂತ ಕಷ್ಟದ ಪರೀಕ್ಷೆ ಬರೆಯುತ್ತಿದ್ದೇನೆ ಎಂದು ಮಾನಸಿಕವಾಗಿ ಸಿದ್ಧರಾಗಿ
* ಪರೀಕ್ಷೆಗೆ ಮೂರು ತಿಂಗಳಿದ್ದಾಗ ನಡೆಸುವ ಸಿದ್ಧತೆಯಿಂದ ಪ್ರಯೋಜನವಿಲ್ಲ, ವರ್ಷಗಟ್ಟಲೆ ಓದಬೇಕು
* ಪುಸ್ತಕಗಳಲ್ಲಿನ ಪ್ರಶ್ನೆಗಳನ್ನೇ ಕೇಳುತ್ತಾರೆ ಎಂದೇನಿಲ್ಲ
* ಸಾಮಾನ್ಯ ಜ್ಞಾನ– ಪ್ರಚಲಿತ ವಿದ್ಯಮಾನಗಳ ಮೇಲೆಯೇ ಹೆಚ್ಚಿನ ಪ್ರಶ್ನೆ ಬರಬಹುದು
* ದಿನಪತ್ರಿಕೆ ಹಾಗೂ ನಿಯತಕಾಲಿಕಗಳನ್ನು ತಪ್ಪದೆ ಓದಿ
* ನಿಮ್ಮ ಪರಿಸರದ ಬಗ್ಗೆ ಹೆಚ್ಚಿನ ತಿಳಿವಳಿಕೆ ಇದ್ದರೆ ತುಂಬ ಅನುಕೂಲ
* ಸತತ ಓದು ಬೇಡ, ಎರಡು ಗಂಟೆ ಓದಿದ ನಂತರ ಒಂದು ಬ್ರೇಕ್ ತೆಗೆದುಕೊಳ್ಳಿ
* ಎಸ್‌ಸಿ, ಎಸ್ಟಿ ಹಾಗೂ ಹಿಂದುಳಿದವರಿಗೆ ಸಮಾಜ ಕಲ್ಯಾಣ ಇಲಾಖೆ ಉಚಿತ ತರಬೇತಿ ನೀಡಲಿದೆ
* ಕೋಚಿಂಗ್ ಸೆಂಟರ್‌ಗೆ ಹೋಗಲೇಬೇಕು ಎಂಬಂತಹ ಸ್ಥಿತಿ ಈಗಿಲ್ಲ
* ಕೋಚಿಂಗ್ ಸೆಂಟರ್‌ನಲ್ಲಿ ಹೇಳಿಕೊಡುವ ಎಲ್ಲ ವಿಷಯಗಳು ಆನ್‌ಲೈನ್ ವಿಡಿಯೊದಲ್ಲಿ ಲಭ್ಯ
ನನ್ನ ದಿನಚರಿ ಹೀಗಿತ್ತು...
* ಬೆಳಿಗ್ಗೆ 6.30ಕ್ಕೆ ಎದ್ದು, ವಾಕಿಂಗ್– ಜಾಗಿಂಗ್ ನಂತರ ಓದು
* 10 ಗಂಟೆಗೆ ತಿಂಡಿ, 1ರವರೆಗೆ ಓದು
* ಮಧ್ಯಾಹ್ನ 1 ಗಂಟೆಗೆ ಊಟ ಮಾಡಿ ವಿಶ್ರಾಂತಿ
* ಸಂಜೆ 4 ಗಂಟೆಗೆ ಚಹಾ ಬಳಿಕ ಓದು
* 6.30ಕ್ಕೆ ಹೊರಗಡೆ ಅಡ್ಡಾಡುವುದು, ಸ್ನೇಹಿತರೊಂದಿಗೆ ಮಾತು
* 7ರಿಂದ 8ರವರೆಗೆ ಓದು
* ರಾತ್ರಿ 8ರಿಂದ 9ರವರೆಗೆ ಊಟ– ಮಾತುಕತೆ
* 10 ಗಂಟೆವರೆಗೆ ಓದು, ನಂತರ ನಿದ್ದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.