ADVERTISEMENT

ಹುಬ್ಬಳ್ಳಿ ಗಲಭೆ | ಮನವಿಗಳನ್ನು ಪರಿಶೀಲಿಸಿ ವಾಪಸಾತಿಗೆ ಕ್ರಮ: ರಾಮಲಿಂಗಾರೆಡ್ಡಿ

‘168 ಕ್ರಿಮಿನಲ್ ಪ್ರಕರಣ ವಾಪಸ್‌ ಪಡೆದಿದ್ದ ಬಿಜೆಪಿ’

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 9:42 IST
Last Updated 15 ಅಕ್ಟೋಬರ್ 2024, 9:42 IST
ಸಚಿವ ರಾಮಲಿಂಗಾರೆಡ್ಡಿ
ಸಚಿವ ರಾಮಲಿಂಗಾರೆಡ್ಡಿ   

ಬೆಂಗಳೂರು: ‘ಪ್ರಕರಣವನ್ನು ರದ್ದುಪಡಿಸಿ ಎಂದು ಸರ್ಕಾರಕ್ಕೆ ಅರ್ಜಿ ಬಂದ ಕಾರಣದಿಂದಲೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ವಾಪಸ್‌ ಪಡೆಯಲಾಗಿದೆ. ವಾಪಸಾತಿ ಪ್ರಕ್ರಿಯೆ ಇನ್ನೂ ನಡೆಯುತ್ತಿದ್ದು, ನ್ಯಾಯಾಲಯ ತಿರಸ್ಕರಿಸಿದರೆ ಪ್ರಕರಣ ಮುಂದುವರೆಯುತ್ತದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ಸರ್ಕಾರವು ಒಟ್ಟು 385 ಪ್ರಕರಣಗಳನ್ನು ವಾಪಸ್‌ ಪಡೆದಿತ್ತು. ಅವುಗಳಲ್ಲಿ 168 ಅಪರಾಧ ಮತ್ತು ಗಂಭೀರ ಅಪರಾಧ ಪ್ರಕರಣಗಳಾಗಿದ್ದವು. ಅದರಿಂದ ಸಿ.ಟಿ.ರವಿ, ಪ್ರಲ್ಹಾದ ಜೋಶಿ, ರಮೇಶ್ ಜಾರಕಿಹೊಳಿ ಸೇರಿ ಹಲವು ನಾಯಕರಿಗೆ ಅನುಕೂಲವಾಗಿದೆ’ ಎಂದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ವಾಪಸ್‌ ಪಡೆಯಲಾದ ಪ್ರಕರಣಗಳ ಬಗ್ಗೆ ದಾಖಲೆ ಬಿಡುಗಡೆ ಮಾಡಿದರು.

‘ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲಿ ಕೋಮುದ್ವೇಷ, ದ್ವೇಷ ಭಾಷಣ, ಅನೈತಿಕ ಪೊಲೀಸ್‌ಗಿರಿ–ಹೆಣ್ಣುಮಕ್ಕಳ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳನ್ನು ವಾಪಸ್‌ ಪಡೆಯಲಾಗಿದೆ. ಶ್ರೀರಾಮ ಸೇನೆ, ಬಜರಂಗದಳ, ಹಿಂದೂ ಜಾಗರಣ ವೇದಿಕೆ, ಎಸ್‌ಡಿಪಿಐ ಮತ್ತು ಪಿಎಫ್‌ಐ ವಿರುದ್ಧ ಇದ್ದ ಪ್ರಕರಣಗಳನ್ನೂ ಅವರು ವಾಪಸ್‌ ಪಡೆದಿದ್ದಾರೆ’ ಎಂದರು.

ADVERTISEMENT

‘ಬಿಜೆಪಿ ಸರ್ಕಾರವು ಎಲ್ಲರ ವಿರುದ್ಧದ ಪ್ರಕರಣಗಳನ್ನು ವಾಪಸ್‌ ಪಡೆದಿದೆ. ನಾವು ಭಾಷೆ, ನದಿ ನೀರು, ಮತ್ತಿತರ ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳಿಗಾಗಿ ಹೋರಾಟ ನಡೆಸಿದವರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನಷ್ಟೇ ವಾಪಸ್‌ ಪಡೆಯಲು ಕ್ರಮ ತೆಗೆದುಕೊಂಡಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.