ಬೆಂಗಳೂರು: ಕಾನೂನು ಹಾಗೂ ಸಮಾಜದ ರಕ್ಷಕರಾಗಿರುವ ಕೆಲ ಪೊಲೀಸರೇ, ಮಾಫಿಯಾ ಜೊತೆ ಕೈ ಜೋಡಿಸಿ ‘ಭಕ್ಷಕ’ರಾಗಿ ಜನರನ್ನು ಕಾಡುತ್ತಿರುವ ದೂರುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಕಾಸು ಕೊಟ್ಟು
ಆಯಕಟ್ಟಿನ ಸ್ಥಾನ ಗಿಟ್ಟಿಸುವ ಪೊಲೀಸರು, ಹಣ ಮರು ಸಂಪಾದಿಸಲು ಹುಡುಕುವ ದಾರಿಗಳು ಅನೇಕ. ಹಣದ ಹಪಾಹಪಿಗೆ ಬಿದ್ದಿರುವ ಕೆಲ ಪೊಲೀಸರ ಬೆನ್ನು ಹತ್ತಿದಾಗ ‘ವರ್ಗಾವಣೆ ದಂಧೆ’ಯ ಕರಾಳ ಮುಖ ತೆರೆದುಕೊಳ್ಳುತ್ತದೆ.
ಜಗಳ, ಹಲ್ಲೆ, ಕೊಲೆ, ಕಳವು, ಸುಲಿಗೆಯಂಥ ಅಪರಾಧ ಕೃತ್ಯಗಳು ನಡೆದಾಗ ಜನರಿಗೆ ನೆನಪಾಗುವುದು ‘ಪೊಲೀಸರು’. ನೊಂದ ಜೀವಗಳಿಗೆ ನ್ಯಾಯ ಕೊಡಿಸುವ ಜವಾಬ್ದಾರಿಯೂ ಅವರದ್ದು. ಇತ್ತೀಚಿನ ದಿನಗಳಲ್ಲಿ ಪೊಲೀಸರ ವೃತ್ತಿನಿಷ್ಠೆ ಹಾಗೂ ಪ್ರಾಮಾಣಿಕತೆ ಕಡಿಮೆಯಾಗುತ್ತಿದೆ ಎಂಬ ಚರ್ಚೆ ಸಾರ್ವಜನಿಕರ ವಲಯದಲ್ಲಿದೆ.
‘ಸಿವಿಲ್ ವ್ಯಾಜ್ಯಗಳಲ್ಲಿ ಮಧ್ಯಪ್ರವೇಶಿಸಬಾರದು’ ಎಂದು ನ್ಯಾಯಾಲಯ ಹಲವು ಸಲ ಆದೇಶ ನೀಡಿದೆ. ಜೊತೆಗೆ, ಸರ್ಕಾರದಿಂದಲೂ ನಿಯಮಾವಳಿ ರೂಪಿಸಲಾಗಿದೆ. ಇದಕ್ಕೆ ಕ್ಯಾರೆ ಎನ್ನದ ಕೆಲ ಪೊಲೀಸರು, ಭೂವ್ಯಾಜ್ಯಗಳಲ್ಲಿ (ಸಿವಿಲ್) ನಿಯಮಬಾಹಿರವಾಗಿ ಹಸ್ತಕ್ಷೇಪ ಮಾಡಿ ಭಾರಿ ಮೊತ್ತದ ಹಣ ಸಂಪಾದಿಸುವುದು ಭ್ರಷ್ಟಾಚಾರದ ಪ್ರಮುಖ ಮಾರ್ಗವಾಗಿದೆ. ಬಡವರು, ಮಧ್ಯಮವರ್ಗದವರು ವ್ಯಾಜ್ಯಗಳನ್ನು ಹಿಡಿದು ಹೋದರೆ, ಲಂಚ ಕೊಡುವುದು ತಪ್ಪದು; ಕೊನೆಗೆ ಭೂಮಿಯೂ ಉಳಿಯದು ಎಂಬ ವಾತಾವರಣ ಸೃಷ್ಟಿಯಾಗಿದೆ.
ಕೈ ತುಂಬ ‘ಮಾಮೂಲಿ’ ಸಿಗುವ ಠಾಣೆ ಹಾಗೂ ಆಯಕಟ್ಟಿನ ಹುದ್ದೆಗಳನ್ನು ಪಡೆಯಲು ಪಿಎಸ್‌ಐ, ಇನ್‌ಸ್ಪೆಕ್ಟರ್, ಎಸಿಪಿ/ ಡಿವೈಎಸ್ಪಿಗಳಲ್ಲಿ ಪೈಪೋಟಿ ಹೆಚ್ಚಾಗಿದೆ. ವರ್ಗಾವಣೆಗೆ ಅಗತ್ಯವಾದ ಜನಪ್ರತಿನಿಧಿಗಳ ‘ಮಿನಿಟ್ಸ್’ಗಳನ್ನು (ಶಿಫಾರಸು ಪತ್ರ) ದುಡ್ಡು ಕೊಟ್ಟು ಖರೀದಿಸುತ್ತಿರುವ ಕೆಲ ಪೊಲೀಸರು, ತಮ್ಮಿಷ್ಟದ ಠಾಣೆಗಳ ಬಾಸ್ ಆಗುತ್ತಿದ್ದಾರೆ. ಹಣ ನೀಡದ ಹಾಗೂ ಜಾತಿ ಬೆಂಬಲವಿಲ್ಲದ ಪೊಲೀಸರು, ‘ನಾನ್ ಎಕ್ಸಿಕ್ಯುಟಿವ್’ ಹುದ್ದೆಗಳಲ್ಲೇ ಕಾಲ ಕಳೆಯುತ್ತಿದ್ದಾರೆ ಎಂಬುದನ್ನು ಕೆಲ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.
ಕೆಲ ಜಿಲ್ಲಾ ಎಸ್ಪಿ, ಕಮಿಷನರ್ ಹಾಗೂ ವಲಯಗಳ ಐಜಿಪಿ ಹುದ್ದೆಗಳಿಗೂ ಜಾತಿ, ಹಣ ಬಲದ ವರ್ಗಾವಣೆ ಇರುವುದಾಗಿ ಹೇಳುವ ಕೆಲ ಪೊಲೀಸರು, ಅಂಥ ವ್ಯವಸ್ಥೆಯನ್ನು ಪ್ರಶ್ನಿಸಲು ಭಯಪಡುತ್ತಿದ್ದಾರೆ.
‘ಲಕ್ಷ ಹಾಗೂ ಕೋಟಿಗಟ್ಟಲೇ ಹಣ ಕೊಟ್ಟು ಈ ಹುದ್ದೆಗೆ ಬಂದಿದ್ದೇನೆ’ ಎಂದು ಮುಲಾಜಿಲ್ಲದೇ ಹೇಳಿಕೊಳ್ಳುವ ಕೆಲ ಪೊಲೀಸರು, ವರ್ಷದ ಸೇವಾವಧಿಯಲ್ಲೇ ದುಪ್ಪಟ್ಟು ಹಣ ಸಂಪಾದಿಸಲು ‘ನ್ಯಾಯ’ವನ್ನೇ ಮಾರಾಟಕ್ಕಿಟ್ಟಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ಬೇಸರವ್ಯಕ್ತಪಡಿಸಿದರು.
‘ಮಾದಕ ವಸ್ತು (ಡ್ರಗ್ಸ್), ರಿಯಲ್ ಎಸ್ಟೇಟ್, ಭೂಗತ ಲೋಕ, ವೇಶ್ಯಾವಾಟಿಕೆ, ಸ್ಪಾಗಳು, ಮೀಟರ್ ಬಡ್ಡಿ, ಪಬ್ ಹಾಗೂ ಬಾರ್, ಹೋಟೆಲ್ ಹಾಗೂ ಇತರೆ ಮಾಫಿಯಾಗಳ ಜೊತೆ ಸಂಪರ್ಕವಿಟ್ಟುಕೊಂಡು, ಅದರಿಂದಲೇ ‘ಕಾಣಿಕೆ’ ಪಡೆದು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ.’
‘ಬೀದಿ– ಬದಿ ವ್ಯಾಪಾರಿಗಳು, ತಳ್ಳುಗಾಡಿಯವರು, ಅವಧಿ ಮೀರಿ ತಡರಾತ್ರಿವರೆಗೆ ವಹಿವಾಟು ನಡೆಸುವವರು, ತಿಂಡಿ–ತಿನಿಸು ಮಾರುವವರು ಸೇರಿದಂತೆ ದಿನದ ದುಡಿಮೆ ನಂಬಿದವರಿಗೆಲ್ಲ ಪೊಲೀಸರು ‘ಮಾಮೂಲಿ’ ನಿಗದಿಪಡಿಸಿದ್ದಾರೆ. ಠಾಣೆ ಮುಖ್ಯಸ್ಥರೇ, ಸಿಬ್ಬಂದಿಯನ್ನು ಮಾಮೂಲಿ ವಸೂಲಿಗೆಂದೇ ನೇಮಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ’ ಎಂದೂ ಅವರು ಆರೋಪಿಸಿದರು.
ವಸೂಲಿಗೆ ದಾರಿ: ‘ದುಷ್ಟರು, ಸಮಾಜಘಾತುಕರು ಹಾಗೂ ಅಪರಾಧಿಗಳ ಜೊತೆಗೆ ಪೊಲೀಸರ ಸಂಪರ್ಕ ಹೆಚ್ಚಿರುತ್ತದೆ. ಬಂಧನದಿಂದ ಹಿಡಿದು ನ್ಯಾಯಾಲಯದಲ್ಲಿ ವಿಚಾರಣೆ ಮುಗಿಯುವವರೆಗೂ ಆರೋಪಿಗಳ ನಂಟು ಇರುತ್ತದೆ. ಇಂಥ ಸಂದರ್ಭದಲ್ಲೇ ಪೊಲೀಸರು, ವಸೂಲಿಗೆ ಇಳಿಯುತ್ತಾರೆ. ಇದಕ್ಕೆ ಸಿಸಿಬಿ ಪೊಲೀಸರೂ ಹೊರತಾಗಿಲ್ಲ. ಹಣ ವಸೂಲಿ ಸಂಬಂಧ ಸಿಸಿಬಿ ಹಾಗೂ ಸಿವಿಲ್ ಠಾಣೆ ಪೊಲೀಸರ ನಡುವೆ ಯಾವಾಗಲೂ ತಿಕ್ಕಾಟ ಇದ್ದೇ ಇರುತ್ತದೆ’ ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಹೇಳಿದರು.
‘ಲಂಚ ನೀಡುವವರನ್ನು ಕಾನೂನಿನಿಂದ ಪಾರು ಮಾಡಲು ಪ್ರಯತ್ನಿಸುವ ಕೆಲ ಪೊಲೀಸರು, ನಿಯಮಗಳು ಹಾಗೂ ಸುಪ್ರೀಕೋಂರ್ಟ್ ಆದೇಶವನ್ನೂ ಮೀರಿ ಠಾಣೆಯಲ್ಲೇ ಸಂಧಾನ ನಡೆಸುತ್ತಾರೆ. ಎಫ್‌ಐಆರ್ ಆಗದಂತೆ ನೋಡಿಕೊಂಡು, ತಮ್ಮವರನ್ನು ರಕ್ಷಿಸುತ್ತಾರೆ. ಆಸ್ತಿ, ಕುಟುಂಬ ವ್ಯಾಜ್ಯಗಳಲ್ಲೂ ಇಂಥ ಸಂಧಾನದಿಂದ ಎರಡೂ ಕಡೆಯವರಿಂದಲೂ ಲಕ್ಷಗಟ್ಟಲೇ ಹಣ ವಸೂಲಿ ಮಾಡುವವವರು ಇಲಾಖೆಯಲ್ಲಿದ್ದಾರೆ. ಇಂಥವರಿಂದಲೇ ಪೊಲೀಸರ ಮೇಲಿನ ನಂಬಿಕೆಯನ್ನು ಜನರು ಕಳೆದುಕೊಳ್ಳುತ್ತಿದ್ದಾರೆ’ ಎಂದೂ ಬೇಸರಿಸಿದರು.
ಸೇವಾವಧಿಯೂ ಕಾರಣ: ‘ಒಂದು ಹುದ್ದೆಯ ಕನಿಷ್ಠ ಸೇವಾವಧಿಯನ್ನು ಎರಡು ವರ್ಷ ಖಾತ್ರಿಗೊಳಿಸಿ, ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಸುಪ್ರೀಂಕೋರ್ಟ್ ಹೇಳಿತ್ತು. ಅದರ ಜಾರಿಗೆ ಕರ್ನಾಟಕ ಸರ್ಕಾರ ಕಾಯ್ದೆಯನ್ನೂ ತಂದಿತ್ತು. ನಂತರ ಅದನ್ನು ಒಂದು ವರ್ಷಕ್ಕೆ ಇಳಿಸಿತು. ಇದುವೇ ವರ್ಗಾವಣೆ ದಂಧೆಗೆ ಪ್ರಮುಖ ಕಾರಣ’ ಎಂದೂ ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರು ಹೇಳಿದರು.
‘ಒಬ್ಬ ಅಧಿಕಾರಿ ವರ್ಷ ಪೂರೈಸುವುದನ್ನೇ ಕಾಯುವ ಮತ್ತೊಬ್ಬ, ಜನಪ್ರತಿನಿಧಿಗಳ ಹಿಂದೆ ಬಿದ್ದು ‘ಮಿನಿಟ್ಸ್’ ಖರೀದಿಸುತ್ತಾನೆ. ಇಂಥ ಮಿನಿಟ್ಸ್‌ಗಳ ಆಧಾರದಲ್ಲೇ ವರ್ಗಾವಣೆ ಪಟ್ಟಿ ಸಿದ್ಧಪಡಿಸುವ ಸರ್ಕಾರ, ಅದನ್ನೇ ಅಧಿಕಾರಿಗಳ ವರ್ಗಾವಣೆ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ಮಂಡಳಿಗೆ ಕಳುಹಿಸುತ್ತದೆ. ಮಂಡಳಿಯ ಹಿರಿಯ ಅಧಿಕಾರಿಗಳು, ಕಣ್ಣು ಮುಚ್ಚಿ ಸಹಿಮಾಡಿ ಕಳುಹಿಸುತ್ತಾರೆ. ವರ್ಗಾವಣೆ ಆದೇಶವಾದ ನಂತರ, ಯಾರಾದರೂ ಹೆಚ್ಚು ಹಣ ಕೊಟ್ಟರೆ ಪಟ್ಟಿಯನ್ನೇ ಬದಲಾಯಿಸಲಾಗುತ್ತದೆ.’
‘ಒಂದು ವರ್ಷದಲ್ಲಿ ಹೆಚ್ಚು ದುಡಿಯಬೇಕೆಂಬ ಆಸೆಗೆ ಬಿದ್ದು, ಜನಸಾಮಾನ್ಯರ ಸುಲಿಗೆ ಮಾಡುತ್ತಾರೆ. ‘ಹಣವಿದ್ದರಷ್ಟೇ ಠಾಣೆ’ ಎಂಬ ವಾತಾವರಣ ನಿರ್ಮಿಸಿ ಬಡವರು ಹಾಗೂ ಜನಸಾಮಾನ್ಯರು ಪೊಲೀಸರತ್ತ ಬರದಂತೆ ಮಾಡುತ್ತಾರೆ. ಠಾಣೆ ವ್ಯಾಪ್ತಿಯಲ್ಲಿ ತಮ್ಮದೇ ತಂಡ ಕಟ್ಟಿಕೊಂಡು, ಅವರ ಮೂಲಕವೂ ವಸೂಲಿ ಮಾಡಿಸುತ್ತಾರೆ’ ಎಂದರು.
‘ಜಾತಿ, ಹಣ ಬಲದಿಂದಲೇ ಶೇ 99ರಷ್ಟು ವರ್ಗಾವಣೆ’
‘ಸರ್ಕಾರಗಳೇ ವರ್ಗಾವಣೆಗೆ ಇಂತಿಷ್ಟು ಹಣ ನಿಗದಿ ಮಾಡಿದೆ. ಜಾತಿ ಪ್ರಭಾವ ಹಾಗೂ ಹಣದಿಂದಲೇ ಪೊಲೀಸ್ ಇಲಾಖೆ ಶೇ 99ರಷ್ಟು ವರ್ಗಾವಣೆ ನಡೆಯುತ್ತಿದೆ’ ಎಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ನನ್ನ ಪರಿಚಯಸ್ಥ ಡಿವೈಎಸ್ಪಿಯೊಬ್ಬರು, ₹ 1.20 ಕೋಟಿ ಕೊಟ್ಟು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಅವರೀಗ, ಅದರ ವಸೂಲಿಗೆ ಅಕ್ರಮಗಳ ಜೊತೆ ಕೈ ಜೋಡಿಸುತ್ತಿದ್ದಾರೆ. ಕೆಳ ಹಂತದ ಸಿಬ್ಬಂದಿಯಿಂದಲೂ ಮಾಮೂಲಿಗೆ ಬೇಡಿಕೆ ಇರಿಸುತ್ತಿದ್ದಾರೆ. ಈ ರೀತಿಯಾದರೆ, ವ್ಯವಸ್ಥೆ ಸುಧಾರಣೆ ಹೇಗೆ’ ಎಂದೂ ತಿಳಿಸಿದರು.
‘ಕರ್ತವ್ಯಲೋಪ ಹಾಗೂ ಇತರೆ ಕಾರಣ ನೀಡಿ ಕೆಲ ಪೊಲೀಸರನ್ನು ಅಮಾನತು ಮಾಡಲಾಗುತ್ತದೆ. ವಿಚಾರಣೆ ನೆಪದಲ್ಲಿ ಹಣ ವಸೂಲಿಯೂ ಇರುತ್ತದೆ. ಅಮಾನತು ಪ್ರಕರಣಗಳನ್ನು ಜನ ಹೆಚ್ಚು ನೆನಪಿಟ್ಟುಕೊಳ್ಳುವುದಿಲ್ಲ. ತಪ್ಪು ಮಾಡಿದ ಪೊಲೀಸ್, ಹಣ ಕೊಟ್ಟು ಮತ್ತೆ ಒಳ್ಳೆಯ ಹುದ್ದೆಯನ್ನೇ ಗಿಟ್ಟಿಸಿಕೊಂಡಿರುತ್ತಾನೆ’ ಎಂದೂ ಹೇಳಿದರು.
‘ಗುರಿ ತಲುಪಲು ಸಂಚಾರ ಪೊಲೀಸರ ವಸೂಲಿ’
‘ಸಿವಿಲ್ ಠಾಣೆಗಳ ಹುದ್ದೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಸಂಚಾರ ಠಾಣೆಗಳಲ್ಲಿ ಕೆಲಸ ಮಾಡಲು ಹೆಚ್ಚಾಗಿ ಯಾರೂ ಇಷ್ಟಪಡುವುದಿಲ್ಲ. ಆದರೆ, ಇಲ್ಲಿಯೂ ಸಂಚಾರ ಪೊಲೀಸರಿಗೆ ಗುರಿ ನಿಗದಿ ಮಾಡಿ ದಂಡ ವಸೂಲಿ ಮಾಡಿಸುವ ಅಧಿಕಾರಿಗಳಿದ್ದಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು.
‘ಪ್ರತಿಯೊಂದು ಠಾಣೆ ವ್ಯಾಪ್ತಿಯಲ್ಲೂ ಪಿಎಸ್ಐ, ಎಎಸ್‌ಐ ನೇತೃತ್ವದಲ್ಲಿ ದಂಡ ವಸೂಲಿ ಕಾರ್ಯಾಚರಣೆ ನಡೆಯುತ್ತದೆ. ಬಹುತೇಕ ಸವಾರರು, ಇದ್ದಷ್ಟು ಹಣವನ್ನು ಕೊಟ್ಟು ಮುಂದೆ ಸಾಗುತ್ತಾರೆ. ಅದೇ ಹಣ ಕೈ ಕೈ ಬದಲಿಸಿ ಆಯಕಟ್ಟಿನ ಸ್ಥಳದ ಅಧಿಕಾರಿಗೂ ತಲುಪುತ್ತವೆ. ಇತ್ತೀಚೆಗೆ ದಂಡ ಹೆಚ್ಚಳ ಮಾಡಿರುವುದು ಅಕ್ರಮ ವಸೂಲಿಗೆ ದಾರಿಯಾಗಿದೆ’ ಎಂದೂ ದೂರಿದರು.
‘ಬಡ್ಡಿಗೆ ಹಣ ತಂದು ವರ್ಗಾವಣೆ’
‘ವರ್ಗಾವಣೆ ದಂಧೆ ಮೂಲಕ ಆಯಕಟ್ಟಿನ ಹುದ್ದೆ ಏರುತ್ತಿರುವ ಬಹುತೇಕ ಪೊಲೀಸರು, ಬಡ್ಡಿಗೆ ಸಾಲ ತಂದು ಲಂಚ ಕೊಡುತ್ತಿದ್ದಾರೆ. ಬೆಂಗಳೂರಿನ ಠಾಣೆಯೊಂದರ ಇನ್‌ಸ್ಪೆಕ್ಟರ್, ತನ್ನ ಬಳಿ ಇದ್ದ ₹ 25 ಲಕ್ಷ ಹಾಗೂ ₹ 65 ಲಕ್ಷ ಬಡ್ಡಿಗೆ ಸಾಲ ತಂದು ಒಟ್ಟು ₹ 90 ಲಕ್ಷ ಕೊಟ್ಟಿದ್ದಾರೆ’ ಎಂದೂ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.
‘ಸಾಲ ತೀರಿಸುವ ಜವಾಬ್ದಾರಿ ಇನ್‌ಸ್ಪೆಕ್ಟರ್ ಮೇಲಿದೆ. ಅವರ ಠಾಣೆ ವ್ಯಾಪ್ತಿಯಲ್ಲಿ ಉತ್ತಮ ‘ಮಾಮೂಲಿ’ಯೂ ಬರುತ್ತದೆ. ಹೀಗಾಗಿ, ಅವರು ನಿತ್ಯವೂ ಲಕ್ಷಗಟ್ಟಲೇ ಹಣ ವಸೂಲಿ ಮಾಡುತ್ತಿದ್ದಾರೆ. ಕೆಲವರಿಗೆ ಕೊಟ್ಟು, ಉಳಿದಿದ್ದನ್ನು ತಾವಿಟ್ಟುಕೊಂಡು ಸಾಲ ತೀರಿಸುತ್ತಿದ್ದಾರೆ’ ಎಂದೂ ತಿಳಿಸಿದರು.
‘ರಕ್ಷಣೆ ಸಿಗದೇ ಜನರ ಒದ್ದಾಟ’
ಜಾತಿ, ಧರ್ಮರಹಿತವಾದ ಪೊಲೀಸ್ ಇಲಾಖೆ ಇತ್ತೀಚಿನ ದಿನಗಳಲ್ಲಿ ದಿಕ್ಕುತಪ್ಪಿದೆ. ರಾಜಕಾರಣಿಗಳ ಕಾನೂನುಬಾಹಿರ ಹಸ್ತಕ್ಷೇಪದಿಂದ ಅಧಿಕಾರ ದುರುಪಯೋಗವಾಗುತ್ತಿದ್ದು,
ರಕ್ಷಣೆ ಸಿಗದೇ ಜನ ಒದ್ದಾಡುತ್ತಿದ್ದಾರೆ. ಪ್ರತಿಯೊಬ್ಬ ಪೊಲೀಸ್‌ಗೂ ಮೂರು ವರ್ಷ ಸೇವಾವಧಿ ನಿಗದಿಪಡಿಸಬೇಕು. ಪೊಲೀಸರ ವರ್ಗಾವಣೆಯನ್ನು ನಿರ್ಧರಿಸುವ ಅಧಿಕಾರವಿರುವ ಪೊಲೀಸ್ ಮಹಾನಿರ್ದೇಶಕ ಹುದ್ದೆಯ ನೇಮಕಕ್ಕೆ ಸಮಿತಿ ರಚಿಸಬೇಕು. ಅದು ರಾಜಕೀಯದಿಂದ ಮುಕ್ತವಾಗಿರಬೇಕು. ಅಗ ವರ್ಗಾವಣೆ ದಂಧೆ ಬಂದ್ ಆಗುತ್ತದೆ.
ಎಸ್.ಟಿ. ರಮೇಶ್, ನಿವೃತ್ತ ಪೊಲೀಸ್ ಮಹಾನಿರ್ದೇಶಕ
ಕೈಗೊಂಬೆಯಾದ ‘ಪೊಲೀಸ್ ಸಿಬ್ಬಂದಿ ಮಂಡಳಿ’
ಸುಪ್ರೀಂಕೋರ್ಟ್ 2006ರಲ್ಲಿ ನೀಡಿರುವ ಆದೇಶವನ್ನು ತಿರುಚಿರುವ ರಾಜ್ಯ ಸರ್ಕಾರಗಳು, ತಮ್ಮಿಷ್ಟದಂತೆ ವರ್ಗಾವಣೆ ನಡೆಸುತ್ತಿವೆ. ವರ್ಗಾವಣೆ ಜವಾಬ್ದಾರಿ ಹೊತ್ತುಕೊಂಡಿರುವ ಪೊಲೀಸ್ ಸಿಬ್ಬಂದಿ ಮಂಡಳಿ, ಸ್ವಾತಂತ್ರ ಕಳೆದುಕೊಂಡು ಸರ್ಕಾರ ಸೂಚಿಸಿದಂತೆಯೇ ವರ್ಗಾವಣೆ ನಡೆಸುತ್ತಿವೆ. ರಾಜಕಾರಣಿಗಳ ಮಿನಿಟ್ಸ್ ಹಾಗೂ ಜಾತಿ ಆಧಾರದಲ್ಲಿ ವರ್ಗಾವಣೆ ನಡೆಸದೇ ಅರ್ಹತೆ ಮತ್ತು ದಕ್ಷತೆಗಳನ್ನು ಮಾನದಂಡವನ್ನಾಗಿ ಇಟ್ಟುಕೊಂಡರೆ ವ್ಯವಸ್ಥೆ ಬದಲಾಗುತ್ತದೆ
ಡಾ.ಡಿ.ವಿ. ಗುರುಪ್ರಸಾದ್, ನಿವೃತ್ತ ಪೊಲೀಸ್ ಮಹಾನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.