ADVERTISEMENT

ಹುಕ್ಕಾ ನಿಷೇಧ: ಸರ್ಕಾರದ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 15:49 IST
Last Updated 6 ಮಾರ್ಚ್ 2024, 15:49 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ಸಾರ್ವಜನಿಕರ ಹಿತದೃಷ್ಟಿ ಹಾಗೂ ಎಲ್ಲರ ಆರೋಗ್ಯದ ದೃಷ್ಟಿಯಿಂದ ರಾಜ್ಯದಲ್ಲಿ ಹುಕ್ಕಾ ಸೇವನೆಯನ್ನು ನಿಷೇಧಿಸಲಾಗಿದೆ‘ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅರುಹಿದೆ.

ಹುಕ್ಕಾ ನಿಷೇಧವನ್ನು ಪ್ರಶ್ನಿಸಿ ಆರ್‌.ಭರತ್‌ ಮತ್ತಿತರರು ಸಲ್ಲಿಸಿರುವ ರಿಟ್‌ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರವೂ ಮುಂದುವರಿಸಿತು.

ವಿಚಾರಣೆ ವೇಳೆ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ವಾದ ಮಂಡಿಸಿ, ‘ಬಾರ್‌ಗಳಲ್ಲಿ ಎಲ್ಲೆಡೆ ಹುಕ್ಕಾ ಸೇವನೆಗೆ ಅವಕಾಶ ನೀಡಲಾಗುತ್ತಿತ್ತು. ‌‌ಇವುಗಳಿಗೆ ಪ್ರತ್ಯೇಕ ಪ್ರದೇಶವನ್ನು ನಿಗದಿ ಮಾಡಿರಲಿಲ್ಲ. ಹಾಗಾಗಿ, ಇದು ಹುಕ್ಕಾ ಸೇವನೆ ಮಾಡುವವರು ಮಾತ್ರವಲ್ಲದೆ, ಇತರರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿತ್ತು. ಹೀಗಾಗಿ, ಸರ್ಕಾರ ಸಂವಿಧಾನದ 47ನೇ ವಿಧಿಯ ಅಡಿಯಲ್ಲಿ ತನ್ನ ಅಧಿಕಾರ ಚಲಾಯಿಸಿದೆ’ ಎಂದು ತಿಳಿಸಿದರು.

ADVERTISEMENT

‘ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಎಲ್ಲಾ ಬಗೆಯ ಹುಕ್ಕಾ ಮಾರಾಟ, ಸೇವನೆ, ದಾಸ್ತಾನು, ಈ ಕುರಿತ ಜಾಹೀರಾತು ಮತ್ತು ಪ್ರಚಾರವನ್ನು ನಿಷೇಧಿಸಲಾಗಿದೆ. ಹುಕ್ಕಾ ನಿಷೇಧಿಸುವ ಮಸೂದೆಗೆ ಉಭಯ ಸದನಗಳು ಈಗಾಗಲೇ ಅನುಮೋದನೆ ನೀಡಿವೆ. ಸದ್ಯ ಈ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಬೇಕಿದೆ’ ಎಂದರು. ವಿಚಾರಣೆ ಗುರುವಾರವೂ (ಮಾರ್ಚ್ 7) ಮುಂದುವರೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.