ಬೆಂಗಳೂರು: ‘ಹುಕ್ಕಾ ಪಾರ್ಲರ್‌ಗಳನ್ನು ಶೀಘ್ರದಲ್ಲೇ ಬಂದ್ ಮಾಡಲಾಗುವುದು. ಅಲ್ಲದೆ, ಡ್ರಗ್ಸ್ (ಮಾದಕವಸ್ತು) ಪಿಡುಗು ನಿಯಂತ್ರಿಸಲು ‘ಆ್ಯಂಟಿ ಡ್ರಗ್ ನೀತಿ’ ರೂಪಿಸಲಾಗುತ್ತಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಮಹಾಂತೇಶ ಕವಟಗಿಮಠ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಕೇಂದ್ರ ಸರ್ಕಾರದ ಎನ್‍ಡಿಪಿಎಸ್ (ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ) ಕಾಯ್ದೆಯಲ್ಲಿರುವ ನಿಯಮಗಳಿಗೆ ಬದಲಾವಣೆ ತಂದು ಜಾರಿಗೊಳಿಸಲು ಉದ್ದೇಶಿಸಲಾಗಿದೆ’ ಎಂದೂ ತಿಳಿಸಿದರು.
‘ಹುಕ್ಕಾ ಪಾರ್ಲರ್‌ಗಳಿಗೆ ಬಿಬಿಎಂಪಿ ಅನುಮತಿ ನೀಡುತ್ತಿದೆ. ಆದರೆ, ಹುಕ್ಕಾ ಪಾರ್ಲರ್ ನಿಷೇಧಿಸಲು ನಾವು ತೀರ್ಮಾನಿಸಿದ್ದೇವೆ. ಈ ಬಗ್ಗೆ ಬಿಬಿಎಂಪಿ ಆಯುಕ್ತರ ಜೊತೆ ಪೊಲೀಸ್ ಆಯುಕ್ತರು ಮಾತುಕತೆ ನಡೆಸಲಿದ್ದಾರೆ. ಪ್ರಭಾವಿಗಳು ಎಷ್ಟೇ ಒತ್ತಡ ಹಾಕಿದರೂ ಮಣಿಯುವುದಿಲ್ಲಲ’ ಎಂದರು.
‘ಮಾದಕ ವಸ್ತು ಸೇವನೆ ಸಂಪೂರ್ಣವಾಗಿ ನಿಷೇಧ ಆಗಬೇಕಾಗಿದೆ. ಸಮಾಜದಿಂದ ಇದನ್ನು ತೊಡೆದು ಹಾಕಬೇಕಿದೆ. ಶಾಲೆಗಳ ಬಳಿ ಚಾಕೊಲೆಟ್, ಬಿಸ್ಲೆಟ್ ರೂಪದಲ್ಲೂ ಡ್ರಗ್ಸ್ ಮಾರಲಾತ್ತಿದೆ. ಸಿಂಥೆಟಿಕ್ ಡ್ರಗ್ ಅನ್ನು ವಿದ್ಯಾರ್ಥಿಗಳಿಗೆ ಕೊಡುವ ಕೆಲಸ ನಡೆಯುತ್ತಿದೆ. ಶಾಲೆ ಆವರಣದಲ್ಲಿ ಇಂಥ ಚಟುವಟಿಕೆ ನಡೆಯದಂತೆ ನೋಡಿಕೊಳ್ಳುವಂತೆ ಶಾಲೆಗಳಿಗೆ ಸೂಚನೆ ನೀಡಲಾಗಿದೆ, ಒಂದು ವೇಳೆ ಚಟುವಟಿಕೆ ನಡೆದರೆ ಸಂಬಂಧಪಟ್ಟ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಸ್ಲಂಗಳಲ್ಲೂ ಮಾದಕ ವಸ್ತು ವ್ಯಾಪಾರ ನಡೆಯುತ್ತಿದೆ’ ಎಂದರು.
‘ಮಾದಕ ವಸ್ತು ತಡೆಯಲು ಗೃಹ ಇಲಾಖೆ ಜೊತೆ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಕೈಜೋಡಿಸಬೇಕಿದೆ. ಮಾಧ್ಯಮಗಳ ಸಹಕಾರವೂ ಅಗತ್ಯ’ ಎಂದರು.
‘ಡ್ರಗ್ಸ್ ಸಂಬಂಧಿಸಿದಂತೆ 2018ರಲ್ಲಿ 1,031, 2019ರಲ್ಲಿ 1,661, 2020ರಲ್ಲಿ 4,066, 2021ರ ಮಾರ್ಚ್ 10ರವರೆಗೆ 1,185 ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳಿಗೆ ಸಂಬಂಧಿಸಿದಂತೆ 2018ರಲ್ಲಿ 1,452, 2019ರಲ್ಲಿ 2,295, 2020ರಲ್ಲಿ 5,479, 2021 ಮಾರ್ಚ್ 10ರವರೆಗೆ 1,340 ಆರೋಪಿಗಳನ್ನು ಬಂಧಿಸಲಾಗಿದೆ. ಅಪಾರ ಪ್ರಮಾಣದ ಗಾಂಜಾ, ಬ್ರೌನ್ ಶುಗರ್, ಹಫೀಮ್, ಹೆರಾಯಿನ್, ಹ್ಯಾಶಿಸ್, ಚರಸ್, ಕೊಕೈನ್, ಎಪಿಡ್ರಿನ್, ಎಂಡಿಎಂಎ, ಎಂಡಿಎಸ್, ಎಲ್‍ಎಸ್‍ಡಿ ಹೀಗೆ ವಿವಿಧ ರೀತಿಯ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದೂ ಬೊಮ್ಮಾಯಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.