ಬೆಂಗಳೂರು: ಹುಳಿಮಾವು ಕೆರೆ ಒಡೆದಘಟನೆಗೆ ಸಂಬಂಧಿಸಿದಂತೆ ಸೋಮವಾರ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಿಬಿಎಂಪಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಲೋಕಾಯುಕ್ತರು ಆಗಮಿಸುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಘಟನೆಯನ್ನು ವಿವರಿಸಿದರು. ಈ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು ಸ್ಥಳದಲ್ಲಿದ್ದರು. ಆಗ ಬಿಬಿಎಂಪಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಲೋಕಾಯುಕ್ತರು,ನಿಮ್ಮಕೆಲಸ ನೀವು ಸರಿಯಾಗಿ ಮಾಡದಿದ್ದರೆ ನನ್ನ ಕೆಲಸವನ್ನು ನಾನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಾಲಾ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ, ಅಲ್ಲದೆ ತೊಂದರೆಗೀಡಾದ ಜನರಿಗೆ ಕೂಡಲೆ ಪರಿಹಾರ ನೀಡಿ, ಆ ಪಕ್ಷ ಈ ಪಕ್ಷ ಎಂದು ನೋಡದಂತೆ ಎಲ್ಲರಿಗೂ ಸಮಾನವಾಗಿ ಪರಿಹಾರ ನೀಡಿ ಎಂದು ಲೋಕಾಯುಕ್ತರು ಅಧಿಕಾರಿಗಳಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿನೀರಿನಿಂದಾಗಿ ತೊಂದರೆ ಅನುಭವಿಸಿದ ಕೃಷ್ಣಾಲೇ ಔಟ್ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ಲೋಕಾಯುಕ್ತರ ಬಳಿ ಹೇಳಿಕೊಂಡರು.
ಹುಳಿಮಾವು ಕೆರೆ ಏರಿ ಒಡೆದ ಪ್ರಕರಣ ತನಿಖಾ ಹಂತದಲ್ಲಿದೆ. ತನಿಖೆಯ ನಂತರ ತಪ್ಪಿತಸ್ಥರ ಪತ್ತೆಯಾಗಲಿದೆ. ಈ ಅವಘಡಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಲಾಗುವುದು. ತನಿಖೆ ಮಾಡಿ ಎಂದು ಈಗಾಗಲೇ ಬಿಬಿಎಂಪಿಗೆ ನೋಟಿಸ್ ನೀಡಿದ್ದೇನೆ’ ಎಂದು ಅವರು ಹೇಳಿದರು.
‘ಸಂತ್ರಸ್ತರಿಗೆ ಅಗತ್ಯ ಪರಿಹಾರ ಒದಗಿಸಬೇಕು, ಮಕ್ಕಳು ಶಾಲೆಗೆ ಹೋಗಲು ತೊಂದರೆಯಾಗಿದ್ದರೆ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.